ಸಾಲ ಮನ್ನಾ ವಿಳಂಬ: ರಾಜ್ಯದಲ್ಲಿ 2 ದಿನದಲ್ಲಿ 10 ಮಂದಿ ರೈತರ ಆತ್ಮಹತ್ಯೆ!
ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದಿಂದ ರೈತರ ಸಾಲಮನ್ನಾ ನಿರ್ಧಾರ ವಿಳಂಬವಾಗುತ್ತಿದ್ದು ಈ ಮಧ್ಯೆ ರಾಜ್ಯದಲ್ಲಿ 2 ದಿನದಲ್ಲಿ 10 ರೈತರು...
ಬೆಂಗಳೂರು: ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದಿಂದ ರೈತರ ಸಾಲಮನ್ನಾ ನಿರ್ಧಾರ ವಿಳಂಬವಾಗುತ್ತಿದ್ದು ಈ ಮಧ್ಯೆ ರಾಜ್ಯದಲ್ಲಿ 2 ದಿನದಲ್ಲಿ 10 ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ.
ರೈತರ ಸಾಲ ಮನ್ನಾಗೆ ಆಗ್ರಹಿಸಿ ಬಿಜೆಪಿ ನಿನ್ನೆ ಕರ್ನಾಟಕ ಬಂದ್ ಆಚರಿಸಿದ ಸಂದರ್ಭದಲ್ಲಿ ಸಾಲಬಾಧೆಯಿಂದ ನೊಂದು ಸೋಮವಾರ ಮತ್ತೆ ರಾಜ್ಯದ 6 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಭಾನುವಾರವೂ ಸಾಲಬಾಧೆಯಿಂದ 4 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು.
ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಚಿಕ್ಕಕಲ್ಬಾಳ್ ಗ್ರಾಮದ ಪೆರೇಗೌಡ(52), ಮೈಸೂರು ಜಿಲ್ಲೆ ಕೆಆರ್ ನಗರ ತಾಲೂಕಿನ ಬೈಲಾಪುರ ಗ್ರಾಮದ ಕಾಳೇಗೌಡ(60), ರಾಯಚೂರು ಜಿಲ್ಲೆ ಲಿಂಗಸ್ಗೂರು ತಾಲೂಕಿನ ಅನ್ವರಿ ಗ್ರಾಮದ ಆದಪ್ಪ ಅಮರಪ್ಪ ಬಾವಿ(52) ಎಂಬುವರು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಬಳ್ಳಾರಿ ಜಿಲ್ಲೆಯ ದೊಡ್ಡಣ್ಣ ಅವರು ಬ್ಯಾಂಕ್ ಹಾಗೂ ಖಾಸಗಿಯಾಗಿ 15 ಲಕ್ಷಕ್ಕೂ ಹೆಚ್ಚು ಸಾಲ ಮಾಡಿದ್ದು ನೂತನ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಸಾಲ ಮನ್ನಾವಾಗುತ್ತದೆ ಎಂಬ ನಿರೀಕ್ಷೆಯಲ್ಲಿದ್ದರು. ಆದರೆ ಸಾಲವನ್ನಾ ನಿರ್ಧಾರ ಹೊರ ಬರದ ಕಾರಣ ದೊಡ್ಡಣ್ಣ ನೊಂದು ತಮ್ಮ ಜಮೀನಿನಲ್ಲೇ ವಿಷ ಸೇವಿಸಿದ್ದಾರೆ. ಅವರನ್ನು ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿದ್ದಾರೆ.