ರಾಜ್ಯ

ಫ್ಲೈಓವರ್ ಅವಘಡದಲ್ಲಿ 57 ಲಕ್ಷ ರೂಪಾಯಿ ಪರಿಹಾರ ದಾವೆ: ನ್ಯಾಯಾಲಯ ಶುಲ್ಕ ಪಾವತಿಯಿಂದ ವಿನಾಯಿತಿ ನೀಡಿದ ಕೋರ್ಟ್

ಫ್ಲೈಓವರ್ ಅವಘಡದಲ್ಲಿ 57 ಲಕ್ಷ ರೂಪಾಯಿ ಪರಿಹಾರ ದಾವೆ: ನ್ಯಾಯಾಲಯ ಶುಲ್ಕ ಪಾವತಿಯಿಂದ ವಿನಾಯಿತಿ ನೀಡಿದ ಕೋರ್ಟ್
ಸಾಂದರ್ಭಿಕ ಚಿತ್ರ
Published On :

ಬೆಂಗಳೂರು: ನ್ಯಾಯಾಲಯದ ಶುಲ್ಕ ಪಾವತಿಸಲು ಆರ್ಥಿಕ ಸಾಮರ್ಥ್ಯವಿಲ್ಲದ ಬಡ ವ್ಯಕ್ತಿ (ನಿರ್ಗತಿಕ) ಎಂದು ಪರಿಗಣಿಸಿ, 57 ಲಕ್ಷ ರೂಪಾಯಿ ಪರಿಹಾರ ಕೋರಿ ದಾವೆ ಹೂಡಲು ಅನುಮತಿ ನೀಡುವಂತೆ ಖಾಸಗಿ ಸಂಸ್ಥೆಯ ಉದ್ಯೋಗಿ ಲಾರೆನ್ಸ್ ಸಲ್ಲಿಸಿದ್ದ ಅರ್ಜಿಯನ್ನು ನಗರದ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಪುರಸ್ಕರಿಸಿದೆ.

ಬಿಬಿಎಂಪಿಯ ಆಗಿನ ಮುಖ್ಯ ಕಾರ್ಯಪಾಲಕ ಎಂಜಿನಿಯರ್ ಹಾಗೂ ಸಿಂಪ್ಲೆಕ್ಸ್ ಇನ್‌ಫ್ರಾಸ್ಟ್ರಕ್ಚರ್ ಲಿಮಿಟೆಡ್ ವಿರುದ್ಧ ಪರಿಹಾರ ಕೋರಿ ದಾವೆ ಹೂಡಲು ನ್ಯಾಯಾಲಯ ಅನುಮತಿ ನೀಡಿದೆ.

2019ರ ಡಿಸೆಂಬರ್ 6ರಂದು ಕೊರಮಂಗಲದ ಸೋನಿ ವರ್ಲ್ಡ್ ಜಂಕ್ಷನ್‌ನಲ್ಲಿ ಬೈಕ್ ನಲ್ಲಿ ಸಂಚರಿಸುತ್ತಿದ್ದ ಲಾರೆನ್ಸ್ ಮೇಲೆ 110 ಅಡಿ ಎತ್ತರದಿಂದ 52 ಕೆ.ಜಿ. ತೂಕದ ಹೈಡ್ರಾಲಿಕ್ ಬೋಲ್ಟ್ ಬಿದ್ದಿತ್ತು. ಫ್ಲೈಓವರ್ ನಿರ್ಮಾಣ ಕಾಮಗಾರಿ ನಡೆಸುತ್ತಿದ್ದ ಬಿಬಿಎಂಪಿ ಮತ್ತು ಸಿಂಪ್ಲೆಕ್ಸ್ ಇನ್‌ಫ್ರಾಸ್ಟ್ರಕ್ಚರ್ ಲಿಮಿಟೆಡ್‌ನ ನಿರ್ಲಕ್ಷ್ಯದಿಂದ ಈ ಘಟನೆ ಸಂಭವಿಸಿತ್ತು ಎಂದು ಆರೋಪಿಸಲಾಗಿದೆ. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು.

15ನೇ ಹೆಚ್ಚುವರಿ ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶೆ ಸುಧಾ ಸೇತುರಾಮ್ ಓಂಕಾರ್, 2021ರಲ್ಲಿ ಲಾರೆನ್ಸ್ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿ ಆದೇಶ ಹೊರಡಿಸಿದ್ದಾರೆ.

ತಾನು ನಿರ್ಗತಿಕನಾಗಿದ್ದು, ಯಾವುದೇ ಚರ ಅಥವಾ ಸ್ಥಿರಾಸ್ತಿ ಹೊಂದಿಲ್ಲ ಎಂದು ಲಾರೆನ್ಸ್ ಅರ್ಜಿಯಲ್ಲಿ ತಿಳಿಸಿದ್ದರು. ಫ್ಲೈಓವರ್ ನಿರ್ಮಾಣಕ್ಕೆ ಬಳಸುವ ಸಾಮಗ್ರಿಗಳ ಸುರಕ್ಷತೆ ಬಗ್ಗೆ ಸಿಂಪ್ಲೆಕ್ಸ್ ಇನ್‌ಫ್ರಾಸ್ಟ್ರಕ್ಚರ್ ಲಿಮಿಟೆಡ್ ಸೂಕ್ತ ಕಾಳಜಿ ವಹಿಸಬೇಕಿತ್ತು. ಆದರೆ, ಸಂಸ್ಥೆಯ ನಿರ್ಲಕ್ಷ್ಯದಿಂದ ಘಟನೆ ಸಂಭವಿಸಿದ್ದು, ಪರಿಹಾರ ಪಾವತಿಸುವ ಹೊಣೆ ಅದರ ಮೇಲಿದೆ. ಬಿಬಿಎಂಪಿಯೂ ಪರೋಕ್ಷ ಹೊಣೆಗಾರಿಕೆ ಹೊಂದಿರುವುದರಿಂದ ಪರಿಹಾರ ನೀಡಬೇಕು ಎಂದು ಅವರು ವಾದಿಸಿದ್ದರು.

57 ಲಕ್ಷ ರೂಪಾಯಿ ಪರಿಹಾರ ಕೋರಿ ದಾವೆ ಹೂಡಲು ಅಗತ್ಯವಿರುವ ನ್ಯಾಯಾಲಯದ ಶುಲ್ಕ ಪಾವತಿಸುವ ಆರ್ಥಿಕ ಸಾಮರ್ಥ್ಯ ಇಲ್ಲದ ಕಾರಣ, ನಿರ್ಗತಿಕ ವ್ಯಕ್ತಿಯಾಗಿ ದಾವೆ ಹೂಡಲು ಅನುಮತಿ ನೀಡುವಂತೆ ಕೋರಿದ್ದರು.

ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಾಲಯ, ಅರ್ಜಿದಾರರು ವಿದ್ಯಾವಂತರಾಗಿದ್ದು, ಪತ್ನಿಗೆ ಸೇರಿದ ಮನೆಯಲ್ಲಿ ವಾಸಿಸುತ್ತಿದ್ದಾರೆ ಎಂಬುದನ್ನು ಉಲ್ಲೇಖಿಸಿದೆ. ಆದರೆ, 57 ಲಕ್ಷ ರೂಪಾಯಿ ಮೊತ್ತದ ಪರಿಹಾರ ಕೋರಿ ದಾವೆ ಹೂಡಲು ನಿಗದಿತ ನ್ಯಾಯಾಲಯದ ಶುಲ್ಕ ಪಾವತಿಸುವ ಸಾಮರ್ಥ್ಯ ಅವರಿಗಿದೆಯೇ ಎಂಬುದೇ ಇಲ್ಲಿ ಪರಿಗಣಿಸಬೇಕಾದ ಪ್ರಶ್ನೆಯಾಗಿದೆ ಎಂದು ನ್ಯಾಯಾಲಯ ಹೇಳಿದೆ.

ತಮ್ಮ ಹೆಸರಿನಲ್ಲಿ ಯಾವುದೇ ಚರ ಅಥವಾ ಸ್ಥಿರಾಸ್ತಿ ಇಲ್ಲ ಮತ್ತು ನ್ಯಾಯಾಲಯದ ಶುಲ್ಕ ಪಾವತಿಸಲು ಆರ್ಥಿಕ ಸಾಮರ್ಥ್ಯವಿಲ್ಲ ಎಂಬುದನ್ನು ಅರ್ಜಿದಾರರು ವಾದಿಸಿ ಸಾಬೀತುಪಡಿಸಿದ್ದಾರೆ. ಕೇವಲ ನಿರಾಕರಣೆ ಹೊರತುಪಡಿಸಿ, ಅರ್ಜಿದಾರರಿಗೆ ನ್ಯಾಯಾಲಯದ ಶುಲ್ಕ ಪಾವತಿಸುವಷ್ಟು ಆರ್ಥಿಕ ಸಾಮರ್ಥ್ಯವಿದೆ ಎಂಬುದನ್ನು ಸಾಬೀತುಪಡಿಸುವ ಯಾವುದೇ ದಾಖಲೆ ಅಥವಾ ಪುರಾವೆಗಳನ್ನು ಪ್ರತಿವಾದಿಗಳಾದ ಬಿಬಿಎಂಪಿ ಮತ್ತು ಸಿಂಪ್ಲೆಕ್ಸ್ ಇನ್‌ಫ್ರಾಸ್ಟ್ರಕ್ಚರ್ ಲಿಮಿಟೆಡ್ ಸಲ್ಲಿಸಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಅರ್ಜಿದಾರರು ಎಂ.ಬಿ.ಎ. ಪದವೀಧರರಾಗಿದ್ದು, ತಿಂಗಳಿಗೆ 40 ಸಾವಿರ ರೂಪಾಯಿಗಳಷ್ಟು ವೇತನ ಪಡೆಯುತ್ತಿದ್ದರು. ಹೀಗಾಗಿ ಅವರನ್ನು ನಿರ್ಗತಿಕ ವ್ಯಕ್ತಿ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಪ್ರತಿವಾದಿಗಳ ಪರ ವಕೀಲರು ವಾದಿಸಿದ್ದರು.

ಅಲ್ಲದೆ, ಪತ್ನಿಯ ಹೆಸರಿನಲ್ಲಿ 20 ಲಕ್ಷ ರೂಪಾಯಿಗೆ ಲೀಸ್‌ಗೆ ಪಡೆದಿರುವ ಮನೆಯಲ್ಲಿ ಅವರು ವಾಸಿಸುತ್ತಿದ್ದಾರೆ ಎಂದು ವಕೀಲರು ತಿಳಿಸಿದ್ದರು. ಆದರೆ, ಈ ವಾದವನ್ನು ಒಪ್ಪದ ನ್ಯಾಯಾಲಯ, ಅರ್ಜಿದಾರರು ತೀವ್ರವಾಗಿ ಗಾಯಗೊಂಡಿದ್ದು, ದಾವೆಯ ಮೊತ್ತಕ್ಕೆ ಸಂಬಂಧಿಸಿದ ನ್ಯಾಯಾಲಯ ಶುಲ್ಕ ಪಾವತಿಸಲು ಸಾಕಷ್ಟು ಆದಾಯ ಹೊಂದಿಲ್ಲ ಎಂಬುದನ್ನು ಸಾಬೀತುಪಡಿಸಿದ್ದಾರೆ ಎಂದು ಹೇಳಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.