ಬೆಂಗಳೂರು: ಮಾನವ ಕಳ್ಳಸಾಗಾಣಿಕೆಯ ಸಂತ್ರಸ್ತೆಯರಾಗಬೇಕಿದ್ದ ಕೇರಳ ಮೂಲದ 32 ನರ್ಸಿಂಗ್ ವಿದ್ಯಾರ್ಥಿನಿಯರನ್ನು ಮಂಗಳವಾರ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರಕ್ಷಿಸಲಾಗಿದೆ.
ಜರ್ಮನಿಯ ಅರ್ಮೇನಿಯಾದ ಯುಟಿಎಂಎ ವಿವಿಯಲ್ಲಿ ಅಲ್ಪಾವಧಿ ಕೋರ್ಸ್ ಗೆಂದು ಯುವತಿಯರನ್ನು ಕರೆದೊಯ್ಯಲಾಗುತ್ತಿತ್ತು.
ವಲಸೆ ಅಧಿಕಾರಿಗಳಿಂದ ಮಾಹಿತಿ ಪಡೆದ ವಿಮಾನ ನಿಲ್ದಾಣ ಪೊಲೀಸರು, ಮಾನವ ಕಳ್ಳಸಾಗಾಣೆ ಮಾಡುತ್ತಿದ್ದ ಟೋನಿ ಟಾಮ್ ಎಂಬಾತನನ್ನು ಬಂಧಿಸಿದ್ದು, ದೇವನಹಳ್ಳಿ ಕೋರ್ಟ್ ಗೆ ಹಾಜರುಪಡಿಸುವ ಸಾಧ್ಯತೆ ಇದೆ.
ಯುವತಿಯರ ಪೈಕಿ ಹೆಚ್ಚಿನವರು ಕೇರಳದವರಾಗಿದ್ದು ಮಂಗಳೂರಿನಲ್ಲಿ ಶಿಕ್ಷಣ ಪಡೆದಿದ್ದರು ಎಂದು ತಿಳಿದು ಬಂದಿದೆ.
ವಿಮಾನ ನಿಲ್ದಾಣ ವಲಸೆ ಅಧಿಕಾರಿಗಳ ದೂರಿನ ಆಧಾರದ ಮೇಲೆ ಟೋನಿ ವಿರುದ್ಧ ಮಾನವ ಕಳ್ಳಸಾಗಾಣೆ ಯತ್ನ ಪ್ರಕರಣ ದಾಖಲಿಸಲಾಗಿದೆ ಎಂದು ಈಶಾನ್ಯ ವಲಯ ಡಿಸಿಪಿ ಕಾಲ ಕೃಷ್ಣಸ್ವಾಮಿ ಅವರು ತಿಳಿಸಿದ್ದಾರೆ.