ಬೆಂಗಳೂರು: ಬೀದಿ ನಾಯಿಗಳ ದಾಳಿಗೆ ತುತ್ತಾಗಿದ್ದ ಬಾಲಕನ ಸಾವು

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬೀದಿ ನಾಯಿಗಳ ದಾಳಿಗೆ ಮತ್ತೊಂದು ಬಲಿಯಾಗಿದ್ದು, ಈ ಹಿಂದೆ ವಿಭೂತಿಪುರದಲ್ಲಿ ನಾಯಿಗಳ ದಾಳಿಗೆ ತುತ್ತಾಗಿದ್ದ 11 ವರ್ಷದ ಬಾಲಕ ಸಾವನ್ನಪ್ಪಿದ್ದಾನೆ.
ಮೃತ ಬಾಲಕ ಪ್ರವೀಣ್
ಮೃತ ಬಾಲಕ ಪ್ರವೀಣ್
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬೀದಿ ನಾಯಿಗಳ ದಾಳಿಗೆ ಮತ್ತೊಂದು ಬಲಿಯಾಗಿದ್ದು, ಈ ಹಿಂದೆ ವಿಭೂತಿಪುರದಲ್ಲಿ ನಾಯಿಗಳ ದಾಳಿಗೆ ತುತ್ತಾಗಿದ್ದ 11 ವರ್ಷದ ಬಾಲಕ ಸಾವನ್ನಪ್ಪಿದ್ದಾನೆ.
ಬೆಂಗಳೂರಿನ ವಿಭೂತಿಪುರದಲ್ಲಿ ಕಳೆದ ಬುಧವಾರ 11 ವರ್ಷದ ಪ್ರವೀಣ್ ಎಂಬ ಬಾಲಕ ಬೀದಿ ನಾಯಿಗಳ ದಾಳಿಗೆ ತುತ್ತಾಗಿದ್ದ. ಕೂಡಲೇ ಸ್ಥಳೀಯರು ಬೀದಿ ನಾಯಿಗಳಿಂದ ಆತನನ್ನು ರಕ್ಷಿಸಿದ್ದರು. ಗಂಭೀರವಾಗಿ ಗಾಯಗೊಂಡಿದ್ಗ ಬಾಲಕ ಪ್ರವೀಣ್ ನನ್ನು ನಗರದ ಮಣಿಪಾಲ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಾಲಕ ಪ್ರವೀಣ್ ಇದೀಗ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ.
ಮೃತ ಬಾಲಕ ಪ್ರವೀಣ್ ಮುರಗಮ್ಮ ಹಾಗೂ ಮನೋಜ್ ದಂಪತಿಯ ಮಗನಾಗಿದ್ದು, ಮಣಿಪಾಲ್ ಆಸ್ಪತ್ರೆಯಲ್ಲೇ ಪ್ರವೀಣ್ ಪೋಷಕರು ಹೌಸ್ ಕೀಪಿಂಗ್ ಕೆಲಸ ಮಾಡುತ್ತಿದ್ದರು. ಚಿಕಿತ್ಸೆಗೆ ಹಣವಿಲ್ಲದಿದ್ದಾಗ ಸಹಾಯಕ್ಕಾಗಿ ಮನವಿ ಮಾಡಿಕೊಂಡಿದ್ದರು. ಆಗ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದ ಪ್ರವೀಣ್ ಚಿಕಿತ್ಸಾ ವೆಚ್ಚವನ್ನು ಭರಿಸುವುದಾಗಿ ಮೇಯರ್ ಸಂಪತ್ ರಾಜ್ ಅವರು ತಿಳಿಸಿದ್ದರು. 
ಏನಿದು ಘಟನೆ?
ಬುಧವಾರ ಪ್ರವೀಣ್ ಸ್ನೇಹಿತರ ಜೊತೆ ಕೆರೆಯಲ್ಲಿ ಈಜಲು ಹೋಗಿದ್ದನು. ಈ ವೇಳೆ ಬಾಲಕನ ಮೇಲೆ ಸುಮಾರು 10 ಕ್ಕೂ ಹೆಚ್ಚು ನಾಯಿಗಳು ದಾಳಿ ಮಾಡಿದ್ದು, ಪ್ರವೀಣ್ ನ ಕತ್ತು, ಮೈ ಹಾಗೂ ಕೈ ಭಾಗಕ್ಕೆ ಕಚ್ಚಿ ಗಂಭೀರವಾಗಿ ಗಾಯಗೊಳಿಸಿವೆ. ಇದನ್ನು ಕಂಡ ಸ್ಥಳೀಯರು ನಾಯಿಗಳನ್ನು ಓಡಿಸಿ, ಗಂಭೀರವಾಗಿ ಗಾಯಗೊಂಡಿದ್ದ ಬಾಲಕನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಬಾಲಕನ ಸ್ಥಿತಿಯು ಚಿಂತಾಜನಕವಾಗಿತ್ತು. ಆಗ ವೈದ್ಯರು ಇನ್ನು ಮೂರು ದಿನಗಳ ಕಾಲ ಏನು ಹೇಳುವುದಕ್ಕೆ ಆಗುವುದಿಲ್ಲ ಎಂದಿದ್ದರು. ಈ ಘಟನೆ ನಡೆದ ಬಳಿಕ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದರು. 
ಈ ಪ್ರದೇಶಗಳಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಿದೆ. ಇವುಗಳಿಗೆ ಮೂಲ ಕಾರಣ ವಿಭೂತಿಪುರಂನಲ್ಲಿರುವ ಹೆಚ್ಚಿನ ಮಾಂಸದ ಅಂಗಡಿಗಳು. ಅಂಗಡಿಯವರು ನಾಯಿಗಳಿಗೆ ಮಾಂಸದ ತುಂಡುಗಳನ್ನು ಹಾಕುತ್ತಾರೆ. ಹೀಗಾಗಿ ಇದನ್ನೇ ರೂಢಿ ಮಾಡಿಕೊಂಡಿರುವ ನಾಯಿಗಳು ಜನರ ಮೇಲೂ ದಾಳಿ ನಡೆಸುತ್ತಲೇ ಇರುತ್ತವೆ. ಈ ಬಗ್ಗೆ ಸ್ಥಳೀಯ ಕಾರ್ಪೋರೇಟರ್ ಹಾಗೂ ಬಿಬಿಎಂಪಿ ಅಧಿಕಾರಿಗಳಿಗೂ ದೂರು ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲವೆಂದು ಹೇಳಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com