ಬೆಂಗಳೂರು: ಬೆಂಗಳೂರಿನ ರಸ್ತೆ ಗುಂಡಿಗಳ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಹೈಕೋರ್ಟ್, ನಾಳೆ ಸಂಜೆ ವೇಳೆಗೆ ನಗರದಲ್ಲಿ ಒಂದೇ ಒಂದು ಗುಂಡಿ ಕಾಣಿಸಬಾರದು ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ)ಗೆ ಖಡಕ್ ಎಚ್ಚರಿಕೆ ನೀಡಿದೆ.
ರಸ್ತೆ ಗುಂಡಿ ವಿಚಾರಕ್ಕೆ ಸಂಬಂಧಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ನೇತೃತ್ವದ ವಿಭಾಗೀಯ ಪೀಠ, ಬಿಬಿಎಂಪಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡಿದೆ. ಅಲ್ಲದೇ ಗುರುವಾರ ಸಂಜೆಯೊಳಗೆ ಎಲ್ಲ ಗುಂಡಿಗಳನ್ನು ಮುಚ್ಚುವಂತೆ ಸೂಚಿಸಿದೆ.
ವಿಚಾರಣೆ ವೇಳೆ ನಗರದಲ್ಲಿ 1655 ರಸ್ತೆ ಗುಂಡಿಗಳು ಬಾಕಿ ಇವೆ ಎಂದು ಬಿಬಿಎಂಪಿ ಮಾಹಿತಿ ನೀಡಿದ್ದು, ಇದರಿಂದ ಆಕ್ರೋಶಗೊಂಡ ನ್ಯಾಯಮೂರ್ತಿಗಳು, ರಸ್ತೆಗುಂಡಿಗಳಿಂದ ಜನ ತೊಂದರೆ ಅನುಭವಿಸುತ್ತಿದ್ದಾರೆ.... ನಿಮ್ಮ ಅಧಿಕಾರಿಗಳಿಗೆ ನಾಚಿಕೆ ಆಗುವುದಿಲ್ಲವೇ? ಎಂದು ತರಾಟೆಗೆ ತೆಗೆದುಕೊಂಡರು.
ನಾಳೆ ಸಂಜೆಯೊಳಗೆ ಒಂದೂ ಗುಂಡಿ ಇರಬಾರದು. ಎಲ್ಲಾ ರಸ್ತೆ ಗುಂಡಿ ಮುಚ್ಚಬೇಕು. ಸಂಜೆಯೊಳಗೆ ಮೆಷರ್ ಮೆಂಟ್ ಬುಕ್, ಕಾಮಗಾರಿ ಆದೇಶ, ಅಳತೆ, ಅಂದಾಜುಪಟ್ಟಿ ಸಲ್ಲಿಸಬೇಕು ಎಂದು ಕೋರ್ಟ್ ತಾಕೀತು ಮಾಡಿದೆ.
ರಸ್ತೆ ಗುಂಡಿಗಳನ್ನು ಮುಚ್ಚುವ ಕುರಿತು ಕ್ರಮ ಕೈಗೊಂಡಿದ್ದೇವೆ ಎಂದು ಬಿಬಿಎಂಪಿ ಪರ ವಕೀಲರು ಹೈಕೋರ್ಟ್ಗೆ ಹೇಳಿದ್ದರು. ಮೆಷರ್ಮೆಂಟ್ ಬುಕ್ ಸಲ್ಲಿಸಲು ಮತ್ತೆ ಕಾಲವಕಾಶಕ್ಕೆ ಬಿಬಿಎಂಪಿ ವಕೀಲರ ಮನವಿ ಮಾಡಿದ್ದರು. ನಿಮ್ಮನ್ನೇ ನೀವು ಆತ್ಮ ವಿಮರ್ಶೆ ಮಾಡಿಕೊಳ್ಳುವ ಸಮಯವಿದು. ನಿಮಗೆ ನಾಚಿಕೆಯಾಗಬೇಕು. ಮನಸ್ಸು ಮಾಡಿದರೆ ನಾಲ್ಕು ತಾಸುಗಳಲ್ಲಿ ಎಲ್ಲಾ ಗುಂಡಿಗಳನ್ನು ಮುಚ್ಚಬಹುದು. ನಿಮಗೆ ಇಚ್ಚಾಶಕ್ತಿ ಇಲ್ಲ ಎಂದು ಬಿಬಿಎಂಪಿ ಬೇಜವಾಬ್ದಾರಿತನಕ್ಕೆ ಹೈಕೋರ್ಟ್ ಗರಂ ಆಗಿದೆ.