ಬೆಂಗಳೂರು: ನಗರದ ರಸ್ತೆ ಗುಂಡಿಗಳ ಭರ್ತಿ ಕಾಮಗಾರಿಯ ಗುಣಮಟ್ಟ ಪರಿಶೀಲನೆಗೆ ಹೈಕೋರ್ಟ್ ನೇಮಿಸಿದ್ದ ಕೋರ್ಟ್ ಕಮಿಷನರ್ ಗಳು ಮಂಗಳವಾರ ತಮ್ಮ ಪ್ರಾಥಮಿಕ ವರದಿಯನ್ನು ಸಲ್ಲಿಸಿದ್ದಾರೆ.
ಮುಖ್ಯ ನ್ಯಾಯಮೂರ್ತಿ ದಿನೇಶ್ ಮಹೇಶ್ವರಿ ಮತ್ತು ನ್ಯಾಯಮೂರ್ತಿ ಎಸ್.ಜಿ ಪಂಡಿತ್ ಅವರಿದ್ದ ವಿಭಾಗೀಯ ಪೀಠಕ್ಕೆ ಕೋರ್ಟ್ ಕಮಿಷನರ್ ಗಲು ವರದಿ ಸಲ್ಲಿಸಿದ್ದಾರೆ.
ಕಮಿಷನರ್ ಗಳಾದ ದಿನೇಶ್ ಅಗರ್ವಾಲ್ ಮತ್ತು ಎಂ.ಜಿ ಉಮಾ ಸೋಮವಾರ ಯಲಹಂಕದ ವಾರ್ಡ್ ಗಳಲ್ಲಿ ಬಿಬಿಎಂಪಿ ಭರ್ತಿ ಮಾಡಿರುವ ರಸ್ತೆ ಗುಂಡಿಗಳನ್ನು ಪರಿಶೀಲನೆ ನಡೆಸಿದರು. ಆ ಕುರಿತು ನಿನ್ನೆ ನ್ಯಾಯಪೀಠಕ್ಕೆ ಪ್ರಾಥಮಿಕ ವರದಿಯನ್ನು ಸಲ್ಲಿಸಿದರು.
ತರಾತುರಿಯಿಂದ ಕೆಲಸ ಮಾಡಲಾಗಿದೆ. ರಸ್ತೆ ಗುಂಡಿ ಭರ್ತಿಯು ಅಸಮರ್ಪಕವಾಗಿದ್ದು, ಡಾಂಬರಿನ ಗುಣಮಟ್ಟವೂ ನಿಗದಿತ ಪ್ರಮಾಣದಲ್ಲಿ ಇಲ್ಲ. ಮಾನದಂಡಗಳಿಗೆ ಅನುಗುಣವಾಗಿ ರಸ್ತೆ ನಿರ್ಮಿಸಿಲ್ಲ. ಇದರಿಂದ ರಸ್ತೆಯ ಗುಣಮಟ್ಟದ ಸಮಸ್ಯೆ ಇದೆ. ಇನ್ನು ಜಲಮಂಡಳಿ ಅಳವಡಿಸಿರುವ ಪೈಪ್ ಗಳಿಂದಲೇ ಬಹುತೇಕ ಕಡೆ ರಸ್ತೆ ಹಾಳಾಗಿದೆ ಎಂದು ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯ ನ್ಯಾಯಮೂರ್ತಿಗಳು, ಗುಂಡಿಗಳ ಭರ್ತಿ ವಿಚಾರದಲ್ಲಿ ಐಐಎಸ್'ಸಿ ಎಂಜಿನಿಯರ್ ಗಳ ಸಲಹೆ ಪಡೆಯಲಾಗಿದೆ ಎಂದು ಹೇಳಿದ್ದೀರಿ. ಆದರೆ, ಕಾಮಗಾರಿಯು ಗುಣಮಟ್ಟ ಇಲ್ಲವಾಗಿದೆ. ಈಗ ಎಷ್ಟು ಗುಂಡಿ ಮುಚ್ಚಲಾಗಿದೆ ಎಂದು ಬಿಬಿಎಂಪಿಯನ್ನು ಕೇಳಿತು.
ಇದಕ್ಕೆ ಉತ್ತರಿಸಿದ ಬಿಬಿಎಂಪಿ ಪರ ವಕೀಲರು, ಮಳೆ ಸುರಿಯುತ್ತಿರುವುದರಿಂದ ಕಾಮಗಾರಿ ಪೂರ್ಣಗೊಂಡಿಲ್ಲ ಎಂದು ತಿಳಿಸಿದರು. ಇದಕ್ಕೆ ನ್ಯಾಯಪೀಠ ಬೇಸರ ವ್ಯಕ್ತಪಡಿಸಿತು.