

ಕೋಲಾರ: ಟಾಟಾ ಸುಮೋ ಹಾಗೂ ಇಂಡಿಕಾ ಕಾರು ಮುಖಾಮುಖಿ ಡಿಕ್ಕಿಯಾದ ಪರಿಣಾಮ ನಾಲ್ವರು ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ಕೋಲಾರ ಜಿಲ್ಲೆಯ ಕೆಜಿಎಫ್-ಕೋಲಾರ ಮುಖ್ಯ ರಸ್ತೆಯ ಹುತುಕಲ ಸಮೀಪ ನಡೆದಿದೆ.
ದುರಂತದಲ್ಲಿ ಇಂಡಿಕಾ ಕಾರಿನಲ್ಲಿದ್ದ ಭರತ್ ಕುಮಾರ್, ರಿಗೋ, ಬಾಬು, ರಮೇಶ್ ಬಾಬು ಎನ್ನುವವರು ಸಾವನ್ನಪ್ಪಿದ್ದಾರೆ. ಹಾಗೆಯೇ ಇನ್ನಿಬ್ಬರು ಗಾಯಗೊಂಡಿದ್ದಾರೆ. ಭರತ್ ಕುಮಾರ್ ಸೇನಾ ಯೋಧರಾಗಿದ್ದು ಶ್ರೀನಗರದಲ್ಲಿ ಸೇವೆ ಸಲ್ಲಿಸುತ್ತಿದ್ದರು. ರಮೇಶ್ ಬಾಬು ಕೂಡ ಸೇನೆಯ ನಿವೃತ್ತ ಯೋಧರಾಗಿದ್ದರು,
ಗಾಯಾಳುಗಳಿಗೆ ಕೋಲಾರ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಮೃತರೆಲ್ಲರೂ ಮೃತರು ಕೋಲಾರ ಜಿಲ್ಲೆ ಕೆಜಿಎಫ್ ನಗರದ ಚಾಂಪಿಯನ್ ರೀಫ್ ನಿವಾಸಿಗಳು ಎಂದು ತಿಳಿದುಬಂದಿದ್ದು ಇವರು ದೆಹಲಿಗೆ ತೆರಳುವ ಸಲುವಾಗಿ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸುತ್ತಿದ್ದರು.
ಭರತ್ ಕುಮಾರ್ 45 ದಿನಗಳ ರಜೆ ಪಡೆದು ಊರಿಗೆ ಬಂದು ಮತ್ತೆ ಶ್ರೀನಗರಕ್ಕೆ ಕರ್ತವ್ಯಕ್ಕೆ ತೆರಳುತ್ತಿದ್ದರು. ಅವರನ್ನು ಬಿಡಲೆಂದು ವಿಮಾನ ನಿಲ್ದಾಣಕ್ಕೆ ಸ್ನೇಹಿತರು ಒಟ್ಟಿಗೆ ಕಾರಿನಲ್ಲಿ ತೆರಳಿದ್ದರು.
ಬಂಗಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.