ಅಕ್ರಮ ಆಲ್ಕೋಮೀಟರ್ ಬಳಸಿ ಸುಲಿಗೆ: ಅಧಿಕಾರ ದುರ್ಬಳಕೆ ಮಾಡಿಕೊಂಡ ಅಧಿಕಾರಿಗಳ ಅಮಾನತು

ಅಕ್ರಮವಾಗಿ ಆಲ್ಕೋಮೀಟರ್ ಬಳಸಿ ಪಾನಮತ್ತ ಚಾಲಕರನ್ನು ಹಿಡಿದು ಲಕ್ಷಾಂತರ ರುಪಾಯಿ ಸುಲಿಗೆ ಮಾಡುತ್ತಿದ್ದ ಸಹಾಯಕ ಸಬ್ ಇನ್ಸ್ ಪೆಕ್ಟರ್ ಹಾಗೂ ಮೂವರು ಕಾನ್ ಸ್ಟೇಬಲ್ ಗಳು ಬಲೆಗೆ ಬಿದ್ದಿದ್ದಾರೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ಅಕ್ರಮವಾಗಿ ಆಲ್ಕೋಮೀಟರ್ ಬಳಸಿ ಪಾನಮತ್ತ ಚಾಲಕರನ್ನು ಹಿಡಿದು ಲಕ್ಷಾಂತರ ರುಪಾಯಿ ಸುಲಿಗೆ ಮಾಡುತ್ತಿದ್ದ ಸಹಾಯಕ ಸಬ್ ಇನ್ಸ್ ಪೆಕ್ಟರ್ ಹಾಗೂ ಮೂವರು ಕಾನ್ ಸ್ಟೇಬಲ್ ಗಳು ಬಲೆಗೆ ಬಿದ್ದಿದ್ದಾರೆ. 

ಅಶೋಕ್ ನಗರ ಠಾಣೆಯ ಸಹಾಯಕ ಸಬ್ ಇನ್ಸ್ ಪೆಕ್ಟರ್ ಮುನಿಯಪ್ಪ, ಕಾನ್ ಸ್ಟೇಬಲ್ ಗಳಾದ ಗಂಗರಾಜ್ ಮತ್ತು ನಾಗರಾಜ್, ಹರ್ಷ ಸಿಕ್ಕಿಬಿದ್ದವರಾಗಿದ್ದಾರೆ. ಮೂವರೂ ಸಿಬ್ಬಂದಿಯನ್ನು ಹೆಚ್ಚುವರಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ಅವರು ಅಮಾನತುಗೊಳಿಸಿದ್ದು, ತನಿಖೆಗೆ ಆದೇಶಿಸಿದ್ದಾರೆ. 

ಪ್ರಕರಣ ಸಂಬಂಧ ಈಶಾನ್ಯ ಸಂಚಾರ ವಿಭಾಗದ ಎಸಿಪಿ ಸತೀಶ್, ಸಂಚಾರ ಯೋಜನೆ ವಿಭಾಗದ ಎಸಿಪಿ ಕವಿತಾ ಅವರ ನೇತೃತ್ವದಲ್ಲಿ ತನಿಖಾ ತಂಡ ರಚಿಸಲಾಗಿದ್ದು, ತನಿಖಾ ತಂಡ ವರದಿ ಕೊಟ್ಟ ಬಳಿಕ ಆರೋಪ ಕೇಳಿಬಂದಿರುವ ಸಿಬ್ಬಂದಿ ವಿರುದ್ಧ ಕಾನೂನು ಕ್ರಮಕೈಗೊಳ್ಳುವುದಾಗಿ ಸಂಚಾರ ವಿಭಾಗದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಇತರೆ ಸಿಬ್ಬಂದಿ ಅಥವಾ ಮೇಲಾಧಿಕಾರಿಗಳು ಇದರಲ್ಲಿ ಭಾಗಿಯಾಗಿರುವ ಬಗ್ಗೆ ಮಾಹಿತಿ ಇಲ್ಲ. ತನಿಖೆ ಬಳಿಕ ಸಂಪೂರ್ಣ ಮಾಹಿತಿ ಲಭ್ಯವಾಗಲಿದೆ ಎಂದು ಹೇಳಿದ್ದಾರೆ. 

ಡ್ರಿಂಕ್ ಆ್ಯಂಡ್ ಡ್ರೈವ್ ಪರಿಶೀಲನೆಗೆಂದು ಇಲಾಖೆ ಅಧಿಕೃತವಾಗಿ ಆಲ್ಕೋಮೀಟರ್ ಗಳನ್ನು ಖರೀದಿಸಿ, ಸಂಚಾರ ಪೊಲೀಸರಿಗೆ ನೀಡುತ್ತದೆ. ಆಲ್ಕೋಮೀಟರ್ ನಲ್ಲಿ ತಪಾಸಣೆ ನಡೆಸಿದರೆ ಪ್ರತಿ ದಿನ ಎಷ್ಟು ತಪಾಸಣೆ ನಡೆದಿದೆ? ಪರಿಶೀಲನೆಗೆ ಒಳಪಟ್ಟವರಲ್ಲಿ ಪಾನಮತ್ತರು ಎಷ್ಟು ಮಂದಿ ಸಿಕ್ಕಿಬಿದ್ದಿದ್ದಾರೆ, ಅವರಿಗೆ ಎಷ್ಟು ದಂಡ ವಿಧಿಸಲಾಗಿದೆ ಎನ್ನುವ ಮಾಹಿತಿ ದಾಖಲಾಗಿರುತ್ತದೆ. 

ಹೀಗಾಗಿ ಆರೋಪಿತ ಸಿಬ್ಬಂದಿ ತಾವೇ ಸ್ವಂತ ಹಣದಲ್ಲಿ ಆಲ್ಕೋ ಮೀಟರ್ ಗಳನ್ನು ಖರೀದಿಸಿದ್ದರು. ಕರ್ತವ್ಯದಲ್ಲಿದ್ದ ವೇಳೆ ಇದೇ ಯಂತ್ರದಲ್ಲಿ ಸಿಬ್ಬಂದಿ ಅಲ್ಕೋಮೀಟರ್ ಉಪಯೋಗಿಸಿ ಡ್ರಿಂಕ್ ಆ್ಯಂಡ್ ಡ್ರೈವ್ ತಪಾಸಣೆ ನಡೆಸುತ್ತಿದ್ದರು. ಮದ್ಯ ಸೇವನೆ ಮಾಡಿ ಸಿಕ್ಕಿಬಿದ್ದ ಚಾಲಕರಿಗೆ ಪರಿಷ್ಕೃತ ಹೊಸ ದಂಡದ ಬಗ್ಗೆ ಹೇಳಿ ಭಯ ಹುಟ್ಟಿಸುತ್ತಿದ್ದರು. ಬಳಿಕ ಅವರಿಂದ ದಂಡಕ್ಕಿಂತ ಕಡಿಮೆ ಹಣ ಪಡೆದು ವಾಹನ ಸಮೇತ ಬಿಟ್ಟು ಕಳುಹಿಸುತ್ತಿದ್ದರು. ನಗದು ಇಲ್ಲದಿದ್ದರೆ, ಪೇಟಿಎಂನಲ್ಲಿ ತಮ್ಮ ಖಾತೆಗೆ ಹಣ ವರ್ಗಾವಣೆ ಮಾಡಿಸಿಕೊಳ್ಲುತ್ತಿದ್ದರು. 

ಈ ಸಿಬ್ಬಂದಿ ಆಲ್ಕೋಮೀಟರ್ ನಲ್ಲಿ ತಪಾಸಣೆ ನಡೆಸುತ್ತಿದ್ದರಿಂದ ಯಾರಿಗೂ ಕೂಡ ಅನುಮಾನ ಬರುತ್ತಿರಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಅಶೋಕ್ ನಗರ ಸಂಚಾರ ಠಾಣೆವ್ಯಾಪ್ತಿಯಲ್ಲಿ ಪಬ್ ಗಳು, ಡಿಸ್ಕೋಥೆಕ್ ಗಳು, ಬಾರ್ ಆ್ಯಂಡ್ ರೆಸ್ಟೋರೆಂಟ್ ಗಳು ಸೇರಿದಂತೆ ಡ್ಯಾನ್ಸ್ ಬಾರ್ ಗಳು ಹೆಚ್ಚಿವೆ. ಈ ಭಾಗದಲ್ಲಿ ಕುಡಿದು ವಾಹನ ಚಾಲನೆ ಮಾಡವವರ ಸಂಖ್ಯೆ ಕೂಡ ಹೆಚ್ಚಿದೆ. ಹೀಗಾಗಿ ಇದನ್ನು ಬಂಡವಾಳ ಮಾಡಿಕೊಂಡು ಈ ಅಕ್ರಮಕ್ಕೆ ಎಸಗುತ್ತಿದ್ದರು ಎನ್ನಲಾಗಿದೆ. 

ಅಕ್ರಮದ ಬಗ್ಗೆ ಮಾಹಿತಿ ತಿಳಿದಿದ್ದ ಠಾಣಾ ಸಿಬ್ಬಂದಿಯೊಬ್ಬರು ಹಿರಿಯ ಅದಿಕಾರಿಗಳ ಗಮನಕ್ಕೆ ತಂದಿದ್ದರು. ವಿಷಯ ತಿಳಿದ ಹಿರಿಯ ಅಧಿಕಾರಿ ರೆಡ್ ಹ್ಯಾಂಡ್ ಆಗಿ ಹಿಡಿಯಲು ಮುಂದಾಗಿದ್ದಾಗ ತಪ್ಪಿಸಿಕೊಂಡಿದ್ದರು. ಆದರೆ, ಈ ಬಾರಿ ಸಿಕ್ಕಿಬಿದ್ದರು ಎಂದು ರವಿಕಾಂತೇಗೌಡ ವಿವರಿಸಿದರು. ಆರೋಪಿಗಳಿಂದ ರೂ.32 ಸಾವಿರ, ಆಲ್ಕೋಮೀಟರ್ ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದಿದ್ದಾರೆ. 

ಅಧಿಕಾರಿಗಳ ಅಕ್ರಮವನ್ನು ಕಂಡು ಹಿಡಿಯಲು ತಮ್ಮವ್ಯಕ್ತಿಗಳನ್ನೇ ಬಿಡಲಾಗಿತ್ತು. ವಾಹನದಲ್ಲಿ ತೆರಳುತ್ತಿದ್ದ ವೇಳೆ ಅಕ್ರಮ ಎಸಗುತ್ತಿದ್ದ ನಾಲ್ವರು ಪೊಲೀಸರು ವಾಹನವನ್ನು ತಡೆದಿದ್ದಾರೆ. ಈ ವೇಳೆ ಆಲ್ಕೋಮೀಟರ್ ನಲ್ಲಿ ತಪಾಸಣೆ ನಡೆಸಿ, ವಾಹನವನ್ನು ವಶಕ್ಕೆ ಪಡೆಯುವುದಾಗಿ ತಿಳಿಸಿದ್ದಾರೆ. ಅಲ್ಲದೆ, ನ್ಯಾಯಾಲಯಕ್ಕೆ ಹೋದರೆ ರೂ.15,000 ದಂಡ ಕಟ್ಟಬೇಕಾಗುತ್ತದೆ ಎಂದು ತಿಳಿಸಿದ್ದಾರೆ. ಇದಾದ ಕೆಲ ನಿಮಿಷಗಳ ಬಳಿಕ ಪರಿಹಾರ ತಿಳಿಸಿ, ಸ್ವಲ್ಪ ಮಟ್ಟದ ಹಣವನ್ನು ಪೇಟಿಎಂ ಮೂಲಕ ಬ್ಯಾಂಕ್ ಖಾತೆಗೆ ವರ್ಗಾಯಿಸುವಂತೆ ತಿಳಿಸಿದ್ದಾರೆ. ಈ ವೇಳೆ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಬಂದು ಪೊಲೀಸರ ಅಕ್ರಮವನ್ನು ಬಹಿರಂಗಪಡಿಸಿದ್ದಾರೆಂದು ತಿಳಿದುಬಂದಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com