ವಿಜಯಪುರ: ಭೀಕರ ಸರಣಿ ಅಪಘಾತ ಸಂಭವಿಸಿದ ಪರಿಣಾಮ ಇಬ್ಬರು ಚಾಲಕರು ಸೇರಿ ಮೂವರು ಮೃತಪಟ್ಟಿರುವ ಘಟನೆ ವಿಜಯಪುರ ಜಿಲ್ಲೆ ಇಂಡಿ ತಾಲೂಕಿನಲ್ಲಿ ನಡೆದಿದೆ.
ಇಂಡಿ ತಾಲೂಕು ಝಳಕಿ ಬಳಿಯ ಎನ್ ಎಚ್13ನಲ್ಲಿ ಮೊದಲು ಎರಡು ಲಾರಿಗಳು ಮುಖಾಮುಖಿ ಡಿಕ್ಕಿಯಾಗಿದ್ದವು, ಇದೇ ವೇಳೆ ಹಿಂಬದಿಯ ಲಾರಿ ಹಾಗೂ ಕಾರ್ ಸಹ ಡಿಕ್ಕಿಯಾಗಿದೆ. ಗುರುವಾರ ಮುಂಜಾನೆ ನಡೆದ ಈ ದುರ್ಘಟನೆಯಲ್ಲಿ ಎರಡು ಲಾರಿಗಳ ಚಾಲಕರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.
ಜತೆಗೆ ಅಪಘಾತದ ತೀವ್ರತೆಗೆ ಪಲ್ಟಿ ಹೊಡೆದ ಲಾರಿಯ ಕ್ಲೀನರ್ ಲಾರಿಯಡಿ ಸಿಕ್ಕು ಮರಣ ಹೊಂದಿದ್ದಾನೆ.
ಘಟನೆಯಲ್ಲಿ ಸಾವನ್ನಪ್ಪಿದವರ ಗುರುತು ಇನ್ನೂ ಪತ್ತೆಯಾಗಿಲ್ಲ. ಈ ವೇಳೆ ಅಪಘಾತದಲ್ಲಿ ಇನ್ನಿಬ್ಬರಿಗೆ ತೀವ್ರ ಗಾಯಗಳಾಗಿದ್ದು ಅವರನ್ನು ಮಹಾರಾಷ್ಟ್ರದ ಸೋಲಾಪುರದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಪಘಾತದ ಕಾರಣ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರೀ ಟ್ರಾಫಿಕ್ ಜಾಮ್ ಆಗಿದ್ದು ಅಪಘಾತಕ್ಕೀಡಾದ ವಾಹನಗಳ ತೆರವಿನ ಬಳಿಕ ಹೆದ್ದಾರಿ ಸಂಚಾರಕ್ಕೆ ಮುಕ್ತವಾಗಿದೆ.
ಘಟನೆ ಸಂಬಂಧ ಝಳಕಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.