ಬೆಂಗಳೂರು: ಎಟಿಎಂಗೆ ಹಣ ತುಂಬಿಸುತ್ತಿದ್ದಾಗ ವಾಹನದ ಚಾಲಕ 99 ಲಕ್ಷದೊಂದಿಗೆ ಪರಾರಿ!

ಕಮ್ಮನಹಳ್ಳಿ ಮುಖ್ಯರಸ್ತೆಯ ಐಸಿಐಸಿಐ ಬ್ಯಾಂಕ್‌ನ ಎಟಿಎಂಗೆ ಹಣ ತುಂಬಿಸುತ್ತಿದ್ದಾಗ ಹಣ ತಂದಿದ್ದ ವಾಹನದ ಚಾಲಕ ಹಣದೊಂದಿಗೆ ಪರಾರಿಯಾಗಿರುವ ಘಟನೆ ಬಾಣಸವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ಕಮ್ಮನಹಳ್ಳಿ ಮುಖ್ಯರಸ್ತೆಯ ಐಸಿಐಸಿಐ ಬ್ಯಾಂಕ್‌ನ ಎಟಿಎಂಗೆ ಹಣ ತುಂಬಿಸುತ್ತಿದ್ದಾಗ ಹಣ ತಂದಿದ್ದ ವಾಹನದ ಚಾಲಕ ಹಣದೊಂದಿಗೆ ಪರಾರಿಯಾಗಿರುವ ಘಟನೆ ಬಾಣಸವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಮಾರ್ಗ ಮಧ್ಯೆ ವಾಹನ ನಿಲ್ಲಿಸಿದ ಚಾಲಕ ಅದರಲ್ಲಿದ್ದ ಒಂದು ಲಾಕರ್ ಒಡೆದು 99 ಲಕ್ಷ ರೂ. ತೆಗೆದುಕೊಂಡು ವಾಹನವನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದಾನೆ. ಇನ್ನೆರಡು ಲಾಕರ್‌ ಅನ್ನು ಒಡೆಯಲು ಆತ ಯತ್ನಿಸಿದ್ದಾನೆ. ಆದರೆ ಅದು ಸಾಧ್ಯವಾಗಲಿಲ್ಲ. ಅದರಲ್ಲಿ ಕೋಟ್ಯಂತರ ರೂಪಾಯಿ ನಗದು ಇತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಎಟಿಎಂ ಕೇಂದ್ರಗಳಿಗೆ ಹಣ ಹಾಕುವ ರೈಟರ್ಸ್ ಏಜೆನ್ಸಿಯ ಚಾಲಕನಾಗಿದ್ದ ಮಂಡ್ಯ ಮೂಲದ ಪವನ್ ಪರಾರಿಯಾಗಿರುವ ಆರೋಪಿ. ವಾಹನವನ್ನು ಬಿಟ್ಟು ಪರಾರಿಯಾಗಿದ್ದು ಆತನ ಬಂಧನಕ್ಕೆ ತೀವ್ರ ಶೋಧ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ರೈಟರ್ಸ್ ಏಜೆನ್ಸಿಯ ವಾಹನದಲ್ಲಿ ಶುಕ್ರವಾರ ಸಂಜೆ 4 ಗಂಟೆ ವೇಳೆ ಕಮ್ಮನಹಳ್ಳಿ ಮುಖ್ಯರಸ್ತೆಯ ಐಸಿಐಸಿಐ ಬ್ಯಾಂಕ್‌ನ ಎಟಿಎಂ ಕೇಂದ್ರಕ್ಕೆ ಹಣ ಹಾಕಲು ಗನ್ ಮ್ಯಾನ್ ಸೇರಿ ಮೂವರು ಬಂದಿದ್ದರು. ಎಟಿಎಂ ಕೇಂದ್ರದಲ್ಲಿ ಹಣ ಹಾಕಲು ಒಬ್ಬರು ಹೋಗಿದ್ದು, ಇನ್ನಿಬ್ಬರು ಗನ್ ಮ್ಯಾನ್‌ಗಳು ಎಟಿಎಂ ಹೊರಗೆ ಕಾಯುತ್ತಿದ್ದಾಗ ವಾಹನದ ಚಾಲಕ ಪವನ್, ವಾಹನದೊಂದಿಗೆ ಪರಾರಿಯಾಗಿದ್ದಾನೆ.

ವಾಹನವನ್ನು ಲಿಂಗರಾಜಪುರದ ಬಳಿಗೆ ತಂದು ಅದರಲ್ಲಿದ್ದ 99 ಲಕ್ಷ ರೂ. ನಗದು ದೋಚಿ, ಕೋಟ್ಯಂತರ ಹಣವಿದ್ದ ಲಾಕರ್‌ಗಳನ್ನು ಒಡೆಯಲು ವಿಫಲ ಯತ್ನ ನಡೆಸಿದ್ದಾನೆ. ಆದರೆ ಅದು ಸಾಧ್ಯವಾಗದಿದ್ದಾಗ ವಾಹನವನ್ನು ಅಲ್ಲೇಬಿಟ್ಟು ಪರಾರಿಯಾಗಿದ್ದಾನೆ.

ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಬಾಣಸವಾಡಿ ಪೊಲೀಸರು ಪರಿಶೀಲನೆ ನಡೆಸಿದ್ದು, ಎಟಿಎಂ ಕೇಂದ್ರ ಹಾಗೂ ವಾಹನ ಬಿಟ್ಟುಹೋದ ಸ್ಥಳಗಳಲ್ಲಿನ ಸಿಸಿಟಿವಿ ಕ್ಯಾಮರಾಗಳನ್ನು ಪರಿಶೀಲಿಸಿದ್ದಾರೆ. ಆರೋಪಿ ಪವನ್‌ನ ಸುಳಿವು ದೊರೆತಿದ್ದು, ಆತನನ್ನು ಶೀಘ್ರದಲ್ಲೇ ಬಂಧಿಸಲಾಗುವುದು, ರೈಟರ್ಸ್ ಏಜೆನ್ಸಿಯವರ ನಿರ್ಲಕ್ಷ್ಯ ಕಾಣುತ್ತಿದ್ದು, ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com