ಸಚಿವ ಡಿಕೆಶಿಗೆ ಮತ್ತೆ ಟ್ರಬಲ್: ಜಾರಿ ನಿರ್ದೇಶನಾಲಯ ಸಮನ್ಸ್ ಜಾರಿ

ಹವಾಲಾ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಸಚಿವ ಡಿಕೆ ಶಿವಕುಮಾರ್ ಸೇರಿದಂತೆ ಒಟ್ಟು ನಾಲ್ಕು ಮಂದಿಯ ವಿರುದ್ಧ ಸಮನ್ಸ್ ಜಾರಿ ಮಾಡಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು: ಹವಾಲಾ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಸಚಿವ ಡಿಕೆ ಶಿವಕುಮಾರ್ ಸೇರಿದಂತೆ ಒಟ್ಟು ನಾಲ್ಕು ಮಂದಿಯ ವಿರುದ್ಧ ಸಮನ್ಸ್ ಜಾರಿ ಮಾಡಿದ್ದಾರೆ.
ಅಕ್ರಮ ಹಣ ವರ್ಗಾವಣೆ ಆರೋಪ ಹೊತ್ತಿರುವ ಹಿನ್ನೆಲೆಯಲ್ಲಿ ಸಮ್ಮಿಶ್ರ ಸರ್ಕಾರದ ಪ್ರಭಾವಿ ಸಚಿವ ಡಿ.ಕೆ.ಶಿವಕುಮಾರ್ ಸೇರಿದಂತೆ ಐವರಿಗೆ ಜಾರಿ ನಿರ್ದೇಶನಾಲಯ(ಇಡಿ) ವಿಚಾರಣೆಗೆ ಹಾಜರಾಗುವಂತೆ ಶನಿವಾರ ಸಮನ್ಸ್ ಜಾರಿ ಮಾಡಿದೆ. ಇಡಿ ಸಮನ್ಸ್ ಜಾರಿ ಮಾಡಿರುವ ಬೆನ್ನಲ್ಲೇ ಆದಾಯ ತೆರಿಗೆ (ಐಟಿ) ಅಧಿಕಾರಿಗಳು ಕೂಡ ಶೋಕಾಸ್ ನೋಟಿಸ್ ನೀಡಿದ್ದು, ದೆಹಲಿಯಲ್ಲಿರುವ ಜಾರಿ ನಿರ್ದೇಶನಾಲಯ ಕಚೇರಿಗೆ ವಿಚಾರಣೆಗೆ ಹಾಜರಾಗಬೇಕೆಂದು ಸೂಚಿಸಲಾಗಿದೆ.
ಬೇನಾಮಿ ಆಸ್ತಿ ಪ್ರಕರಣ ಸಂಬಂಧ ಸಚಿವ ಡಿ.ಕೆ.ಶಿವಕುಮಾರ್ ಸೇರಿದಂತೆ ಒಟ್ಟು ನಾಲ್ಕು ಮಂದಿಗೆ ಜಾರಿ ನಿರ್ದೇಶನಾಲಯ ಸಮನ್ಸ್ ಜಾರಿ ಮಾಡಿದೆ. ಅಕ್ರಮ ಹಣವರ್ಗಾವಣೆ ಪ್ರಕರಣದ ಆರೋಪಿಗಳಾದ ಡಿಕೆಶಿ ಆಪ್ತರು ಎಂದು ಹೇಳಲಾಗುತ್ತಿರುವ ಸಚಿನ್ ನಾರಾಯಣ್, ಸುನೀಲ್ ಶರ್ಮ, ಆಂಜನೇಯ ಮತ್ತು ರಾಜೇಂದ್ರ ಎಂಬುವರಿಗೆ ಇಡಿ ಸಮನ್ಸ್ ಜಾರಿ ಮಾಡಿ ದೆಹಲಿಯಲ್ಲಿ ವಿಚಾರಣೆಗೆ ಹಾಜರಾಗಬೇಕೆಂದು ಸೂಚನೆ ಕೂಡ ನೀಡಿದೆ.
ಡಿಕೆಶಿಗೆ ಮತ್ತೆ ಬಂಧನ ಭೀತಿ
ಇನ್ನು ಇಡಿ ಅಧಿಕಾರಿಗಳು ದಾಖಲೆಗಳ ಸಮೇತ ವಿಚಾರಣೆಗೆ ಹಾಜರಾಗಬೇಕು ಎಂದು ಸೂಚನೆ ನೀಡಿದ್ದು, ಒಂದು ವೇಳೆ ಆರೋಪಿಗಳು ನೀಡುವ ದಾಖಲೆಗಳು ತಾಳೆಯಾಗದಿದ್ದಲ್ಲಿ ಅವರನ್ನು ಬಂಧಿಸುವ ಸಾಧ್ಯತೆ ಕೂಡ ಇದೆ ಎಂದು ಹೇಳಲಾಗುತ್ತಿದೆ. ಇದೇ ಕಾರಣಕ್ಕೆ ಸಚಿವ ಡಿಕೆಶಿ ಸೇರಿದಂತೆ ಆರೋಪಿಗಳಾದ ಎಲ್ಲರಿಗೂ ಬಂಧನ ಭೀತಿ ಎದುರಾಗಿದ್ದು, ಈ ಐವರು ನಿರೀಕ್ಷಣಾ ಜಾಮೀನು ಪಡೆಯಲು ಮುಂದಾಗಿದ್ದಾರೆ.
ಇನ್ನು ದೆಹಲಿಯ ಫ್ಲಾಟ್ ವೊಂದರಲ್ಲಿ ಇಡಿ-ಐಟಿ ಅಧಿಕಾರಿಗಳು ದಾಳಿ ನಡೆಸಿದ್ದ ವೇಳೆ 3 ಕೋಟಿಗೂ ಅಧಿಕ ನಗದು ಸಿಕ್ಕಿತ್ತು. ಈ ಹಣವು ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಸೇರಿದ್ದು ಎಂದು ಅಧಿಕಾರಿಗಳು ಆರೋಪಿಸಿದ್ದಾರೆ. ಈ ಹಣವನ್ನು ತಮ್ಮ ಆಪ್ತರಾದ ಸಚಿನ್ ನಾರಾಯಣ್, ಸುನೀಲ್ ಶರ್ಮ, ಆಂಜನೇಯ ಹಾಗೂ ರಾಜೇಂದ್ರ ಎಂಬುವರು ದೆಹಲಿಗೆ ಶಿವಕುಮಾರ್ ಸೂಚನೆಯಂತೆ ತೆಗೆದುಕೊಂಡು ಹೋಗಿದ್ದರು ಎಂದು ಹೇಳಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com