ಮಳೆ ಬಂದರಷ್ಟೇ ತಮಿಳುನಾಡಿಗೆ ನೀರು; ಕೊನೆಗೂ ಕರ್ನಾಟಕದ ಮೊರೆ ಆಲಿಸಿದ ಪ್ರಾಧಿಕಾರ!

ಜೂನ್ ತಿಂಗಳ ಬಾಕಿ ನೀರು ಬಿಡುವಂತೆ ತಮಿಳುನಾಡು ಸಲ್ಲಿಸಿದ್ದ ತಗಾದೆಗೆ ಸಂಬಂಧಿಸಿದಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಮಹತ್ವದ ತೀರ್ಪು ನೀಡಿದ್ದು, ಮಳೆ ಬಂದರೆ ಮಾತ್ರ ತಮಿಳುನಾಡಿಗೆ ನೀರು ಬಿಡುವಂತೆ ನಿರ್ಧಾರ ಕೈಗೊಳ್ಳಲಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಜೂನ್ ತಿಂಗಳ ಬಾಕಿ ನೀರು ಬಿಡುವಂತೆ ತಮಿಳುನಾಡು ಸಲ್ಲಿಸಿದ್ದ ತಗಾದೆಗೆ ಸಂಬಂಧಿಸಿದಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಮಹತ್ವದ ತೀರ್ಪು ನೀಡಿದ್ದು, ಮಳೆ ಬಂದರೆ ಮಾತ್ರ ತಮಿಳುನಾಡಿಗೆ ನೀರು ಬಿಡುವಂತೆ ನಿರ್ಧಾರ ಕೈಗೊಳ್ಳಲಾಗಿದೆ.
ದೆಹಲಿಯಲ್ಲಿ ನಡೆದ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಮಹತ್ವದ ನಿರ್ಣಯ ತೆಗೆದುಕೊಳ್ಳಲಾಗಿದ್ದು, ಮಳೆ ಬಂದರೆ ಮಾತ್ರ ತಮಿಳುನಾಡಿಗೆ ನೀರು ಬಿಡಿ ಎಂದು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಸೂಚನೆ ನೀಡಿದೆ.  ಸಭೆಯಲ್ಲಿ ಕರ್ನಾಟಕ, ತಮಿಳುನಾಡು, ಕೇರಳ, ಪುದುಚೇರಿ ಮತ್ತು ಕೇಂದ್ರ ಸರ್ಕಾರದ ಪ್ರತಿನಿಧಿಗಳು ಭಾಗಿಯಾಗಿದ್ದರು. ಜುಲೈ ತಿಂಗಳ ನೀರನ್ನೂ ಬಿಡುವಂತೆ ತಮಿಳುನಾಡು ಬೇಡಿಕೆಯಿಟ್ಟಿತ್ತು. ತಮಿಳುನಾಡು ಒಟ್ಟು 40.43 ಟಿಎಂಸಿ ನೀರು ಕೇಳಿತ್ತು. ಜೂನ್ ತಿಂಗಳ 9.19, ಜುಲೈ ತಿಂಗಳ 31.24 ಟಿಎಂಸಿ ನೀರು ಬಿಡುವಂತೆ ಕೋರಿತ್ತು. ಆದರೆ ಕಾವೇರಿ ಕೊಳ್ಳದಲ್ಲಿ ಮುಂಗಾರು ಮಳೆ ಆಗಿಲ್ಲ. ಮಳೆ ಇಲ್ಲದ ಕಾರಣ ಜಲಾಶಯಗಳಲ್ಲಿ ಸಾಕಷ್ಟು ಪ್ರಮಾಣದ ನೀರಿಲ್ಲ. ರಾಜ್ಯದಲ್ಲಿ ಕುಡಿಯುವ ನೀರಿಗೂ ಹಾಹಾಕಾರ ಸೃಷ್ಟಿಯಾಗಿದೆ. ಹೀಗಾಗಿ ಪ್ರಸ್ತುತ ನೀರು ಬಿಡಲು ಸಾಧ್ಯವಿಲ್ಲ ಎಂದು ಪ್ರಾಧಿಕಾರಕ್ಕೆ ಕರ್ನಾಟಕ ಮನವರಿಕೆ ಮಾಡಿಕೊಟ್ಟಿತ್ತು. 
ಇದಕ್ಕೆ ವಿರುದ್ಧವಾಗಿ ವಾದ ಮಂಡಿಸಿದ್ದ ತಮಿಳುನಾಡು ಪರ ವಕೀಲರು, ಮೆಟ್ಟೂರು ಅಣೆಕಟ್ಟೆಯಿಂದ ಈವರೆಗೂ ನೀರು ಬಿಟ್ಟಿಲ್ಲ. ತಮ್ಮ ಪಾಲಿನ ನೀರನ್ನು ತಮಿಳುನಾಡಿಗೆ ಹರಿಸಿಲ್ಲ. ಮೆಟ್ಟೂರು ಡ್ಯಾಂನಲ್ಲಿ ನೀರಿನ ಸಂಗ್ರಹ ಕಡಿಮೆಯಾಗಿದೆ. ತಮಿಳುನಾಡಿನ ರೈತರಿಗೆ ಕಾವೇರಿ ನೀರೇ ಆಸರೆ. ಕುರುವೈ ಬೆಳೆಗಾಗಿ ಮೆಟ್ಟೂರು ಡ್ಯಾಂ ಅವಲಂಬಿಸಲಾಗಿದೆ. ಕಳೆದ ಸಭೆಯಲ್ಲಿ 9.19 ಟಿಎಂಸಿ ಹರಿಸಲು ಸೂಚನೆ ನೀಡಲಾಗಿತ್ತು. ಆದರೆ ಕರ್ನಾಟಕ ಪ್ರಾಧಿಕಾರದ ಸೂಚನೆಯನ್ನು ಪಾಲಿಸಿಲ್ಲ. ಜೂನ್ 30ರೊಳಗೆ ಸಂಪೂರ್ಣ ನೀರು ಬಿಡಬೇಕು ಎಂದು ಆಗ್ರಹಿಸಿತ್ತು.
ಉಭಯ ರಾಜ್ಯಗಳ ವಾದ ಆಲಿಸಿದ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷ ಮಸೂದ್ ಹುಸೇನ್ ನೇತೃತ್ವದ ಪ್ರಾಧಿಕಾರ ತನ್ನ ತೀರ್ಪು ನೀಡಿದ್ದು, ಕಾವೇರಿ ಕೊಳ್ಳದಲ್ಲಿ ಸಾಕಷ್ಟು ಮಳೆಯಾದರೆ ಮಾತ್ರ ಮಾತ್ರ ತಮಿಳುನಾಡಿಗೆ ನೀರು ಬಿಡುವಂತೆ ನಿರ್ಧಾರ ಕೈಗೊಂಡಿದೆ. 
ಪ್ರಾಧಿಕಾರದ ತೀರ್ಪಿನಿಂದ ಕರ್ನಾಟಕ ನಿರಾಳ
ಇನ್ನು ಪ್ರಾಧಿಕಾರದ ತೀರ್ಪಿನಿಂದಾಗಿ ಕರ್ನಾಟಕ ಸರ್ಕಾರ ಮತ್ತು ಕಾವೇರಿ ಕೊಳ್ಳದ ರೈತರು ನಿಟ್ಟುಸಿರು ಬಿಟ್ಟಿದ್ದು, ಈ ಬಗ್ಗೆ ಮಾತನಾಡಿರುವ ರಾಜ್ಯದ ಜಲ ಸಂಪನ್ಮೂಲ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು, ಪ್ರಾಧಿಕಾರದ ತೀರ್ಪಿನಿಂದಾಗಿ ರಾಜ್ಯ ನಿರಾಳವಾಗಿದೆ. ಮಳೆ ಕೊರೆತೆಯಿಂದಾಗಿ ರಾಜ್ಯದ ಜಲಾಶಯಗಳಲ್ಲಿ ಸಾಕಷ್ಚು ಪ್ರಮಾಣದ ನೀರಿಲ್ಲ, ಮಂಗಳವಾರದಂದು ಕೆಆರ್ ಎಸ್ ಮತ್ತು ಕಬಿನಿ ಸೇರಿದಂತೆ ರಾಜ್ಯದ ಪ್ರಮುಖ ನಾಲ್ಕೂ ಜಲಾಶಯಗಳಲ್ಲಿ ಕೇವಲ 12 ಟಿಎಂಸಿ ಅಡಿ ನೀರು ಮಾತ್ರ ಇದೆ. ಕೆಆರ್ ಎಸ್  ಜಲಾಶಯದಲ್ಲಿ ಕೇವಲ 253 ಕ್ಯೂಸೆಕ್ಸ್ ಒಳಹರಿವಿದ್ದು, ಕಬಿನಿಯಲ್ಲಿ 1,708 ಕ್ಯೂಸೆಕ್ಸ್ ಮಾತ್ರ ಇದೆ ಎಂದು  ಹೇಳಿದ್ದಾರೆ.
ಇನ್ನು ಇದೇ ವಿಚಾರವಾಗಿ ಮಾತನಾಡಿರುವ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತ ಕುಮಾರ್ ಮತ್ತು ರೈತ ಸಂಘದ ಮುಖಂಡ ದರ್ಶನ್ ಪುಟ್ಟಣ್ಣಯ್ಯ ಅವರು ತೀರ್ಪನ್ನು ಸ್ವಾಗತಿಸಿದ್ದಾರೆ. ಆದರೆ ಕೆಲ ನಾಯಕರು ರಾಜ್ಯದ ರೈತರ ಬೆಳೆದು ನಿಂತ ಬೆಳೆಗಳಿಗೆ ನೀರು ಬಿಡಿಸಿಕೊಳ್ಳುವ ವಿಚಾರಕ್ಕೆ  ವಿಫಲವಾದ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗುದುಕೊಂಡಿದ್ದು, ಈ ಬಗ್ಗೆ ಪ್ರಾಧಿಕಾರದಿಂದ ಸ್ಪಷ್ಟನೆ ಪಡೆಯಬೇಕಿತ್ತು ಎಂದು ಹೇಳಿದ್ದಾರೆ. ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಅಗತ್ಯವಿಲ್ಲದಿದ್ದರೂ ನೀರು ಬಿಡಲಾಗಿತ್ತು. ಆದರೆ ಈಗ ಬೆಳೆದು ನಿಂತ ಬೆಳೆಗಳಿಗೆ ನೀರು ಅತ್ಯಗತ್ಯವಾಗಿದ್ದು, ಈಗೇಕೆ ನೀರು ಬಿಡುತ್ತಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ. ಅಲ್ಲದೆ ಈಗಾಗಲೇ ಬೆಳೆದು ನಿಂತಿರುವ ಬೆಳೆಗಳಿಗೆ ನಾಲೆಗಳ ಮೂಲಕ ನೀರು ಬಿಡುವಂತೆ ಪ್ರಾಧಿಕಾರ ಆದೇಶ ನೀಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com