ಬಿಬಿಎಂಪಿಯ ವೈಟ್ ಟಾಪಿಂಗ್ ಗಿಂತಲೂ ಇಸ್ರೋದ ಚಂದ್ರಯಾನ-2 ವೆಚ್ಚವೇ ಕಡಿಮೆಯಂತೆ!

ನಿಮಗೆ ಅಚ್ಚರಿಯಾಗಬಹುದು.. ಇಸ್ರೋದ ಚಂದ್ರಯಾನ-2 ಯೋಜನೆಗಿಂತಲೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ರಾಜಧಾನಿ ಬೆಂಗಳೂರಿನಲ್ಲಿ ನಡೆಸುತ್ತಿರುವ ವೈಟ್ ಟಾಪಿಂಗ್ ವೆಚ್ಚವೇ ದುಬಾರಿಯಂತೆ.
ವೈಟ್ ಟಾಪಿಂಗ್ ಮತ್ತು ಚಂದ್ರಯಾನ
ವೈಟ್ ಟಾಪಿಂಗ್ ಮತ್ತು ಚಂದ್ರಯಾನ

ಬೆಂಗಳೂರು: ನಿಮಗೆ ಅಚ್ಚರಿಯಾಗಬಹುದು.. ಇಸ್ರೋದ ಚಂದ್ರಯಾನ-2 ಯೋಜನೆಗಿಂತಲೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ರಾಜಧಾನಿ ಬೆಂಗಳೂರಿನಲ್ಲಿ ನಡೆಸುತ್ತಿರುವ ವೈಟ್ ಟಾಪಿಂಗ್ ವೆಚ್ಚವೇ ದುಬಾರಿಯಂತೆ.

ಇಡೀ ದೇಶ ಭಾರತೀಯ ಬಾಹ್ಯಾಕಾಶ ಸಂಸ್ಥೆಯ ಚಂದ್ರಯಾನ 2 ಯೋಜನೆ ಕುರಿತಂತೆ ಚರ್ಚೆ ನಡೆಸುತ್ತಿದ್ದರೆ, ಇತ್ತ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲೂ ಚಂದ್ರಯಾನ-2 ಕುರಿತಂತೆ ಚರ್ಚೆ ನಡೆಯುತ್ತಿದ್ದು, ಬಿಬಿಎಂಪಿಯ ವೈಟ್ ಟಾಪಿಂಗ್ ಜೊತೆ ಚಂದ್ರಯಾನ-2 ಯೋಜನೆಯ ವೆಚ್ಚವನ್ನು ಲೆಕ್ಕಾಚಾರ ಹಾಕಲಾಗುತ್ತಿದೆ. ಬಿಬಿಎಂಪಿಯು ಬೆಂಗಳೂರಲ್ಲಿ ವೈಟ್ ಟಾಪಿಂಗ್ ಯೋಜನೆಗೆ ಮಾಡಿದ್ದ ವೆಚ್ಚದಲ್ಲಿಇನ್ನೊಂದು ಚಂದ್ರಯಾನವನ್ನೇ ಇಸ್ರೋ ಮಾಡಬಹುದಿತ್ತು ಎಂಬ ಟೀಕೆ ವ್ಯಕ್ತವಾಗಿದೆ.

ಹೌದು.. ಚಂದ್ರಯಾನ 2ಕ್ಕೆ ತಗುಲಿದ ವೆಚ್ಚಕ್ಕಿಂತಲೂ ಬೆಂಗಳೂರಿನ ರಸ್ತೆಗೆ ಬಿಬಿಎಂಪಿ ಮಾಡಿದ ವೆಚ್ಚವೇ ಹೆಚ್ಚು ಎಂಬ ಆರೋಪ ಕೇಳಿ ಬಂದಿದ್ದು, ಇಸ್ರೋ ಸಂಸ್ಥೆ ಚಂದ್ರಯಾನ 2 ಯೋಜನೆಯಲ್ಲಿ 3,84,400 ಕಿ.ಮೀ ಉಪಗ್ರಹ ಉಡಾವಣೆ ಮಾಡಲು 978 ಕೋಟಿ ರೂ ವೆಚ್ಚ ಮಾಡಿದ್ದರೆ ಬಿಬಿಎಂಪಿಯು ಕೇವಲ 94 ಕಿ.ಮೀ ರಸ್ತೆಗೆ 986 ಕೋಟಿ ರೂ ವೆಚ್ಚ ಮಾಡಿದೆ. ಈ ಕುರಿತಂತೆ ಪತ್ರಿಕೆಯೊಂದು ವರದಿ ಮಾಡಿದೆ.

ವೈಟ್ ಟಾಪಿಂಗ್ ನಲ್ಲಿ ಭಾರಿ ಅಕ್ರಮ?
ಇನ್ನು ಪತ್ರಿಕಾ ವರದಿಯಲ್ಲಿ ಬಿಬಿಎಂಪಿಯ ವೈಟ್ ಟಾಪಿಂಗ್ ಯೋಜನೆಯಲ್ಲಿ ಭಾರಿ ಅಕ್ರಮ ನಡೆದ ಕುರಿತು ಶಂಕೆ ವ್ಯಕ್ತಪಡಿಸಲಾಗಿದ್ದು, ಇಡೀ ಮೈಸೂರು ರಸ್ತೆಯ 4.8 ಕಿಮೀ ಭಾಗವನ್ನು ಪೂರ್ತಿಯಾಗಿ ಪರಿಶೀಲಿಸಿದರೆ, ಎಲ್ಲಾ ಕಡೆಗಳಲ್ಲೂ ಕಾಬ್ಲರ್ ಸ್ಟೋನ್ ಅಳವಡಿಸಿಲ್ಲದಿರುವುದು ಕಂಡುಬಂದಿದೆ. ರಸ್ತೆಯ ಒಂದು ಬದಿ ಕಂಪ್ಲೀಟ್ ಆಗಿದೆ ಅಂತ ಪಾಲಿಕೆ ಅಧಿಕಾರಿಗಳು ಹೇಳಿದ್ರೂ ರಸ್ತೆ ಮಧ್ಯೆ ಮಧ್ಯೆ ಡಾಂಬರ್ ಹಾಕಿದ ರಸ್ತೆಗಳನ್ನು ತೆಗೆದು ವೈಟ್ ಟಾಪಿಂಗ್ ಹಾಕಿಲ್ಲ ಎಂದು ಹೇಳಲಾಗಿದೆ. 

 25 ವರ್ಷ ಬಾಳಿಕೆ ಬರಬೇಕಿದ್ದ ವೈಟ್ ಟಾಪಿಂಗ್ ವರ್ಷದಲ್ಲೇ ಕಿತ್ತು ಹೋಗುತ್ತಿದೆ. ಹೆಚ್ಚೂಕಡಿಮೆ ಸಾವಿರ ಕೋಟಿ ರೂ ವೆಚ್ಚದಲ್ಲಿ ಸರ್ಕಾರ ಕೈಗೊಂಡಿರುವ ವೈಟ್ ಟಾಪಿಂಗ್ ರಸ್ತೆ ನಿರ್ಮಾಣ ಯೋಜನೆ ಬಗ್ಗೆ ಮೊದಲಿಂದಲೂ ಅಪಸ್ವರಗಳು ಕೇಳಿಬರುತ್ತಲೇ ಇವೆ. ವರ್ಷದ ಹಿಂದಷ್ಟೇ ವೈಟ್ ಟಾಪಿಂಗ್ ಕಂಡಿದ್ದ ಮೈಸೂರು ರಸ್ತೆಯಲ್ಲಿ 8 ಅಡಿಯಷ್ಟು ಭಾಗವು 4 ಇಂಚು ಕುಸಿದಿದೆ. ಇದರೊಂದಿಗೆ, ವೈಟ್ ಟಾಪಿಂಗ್ನಲ್ಲಿ ಕಳಪೆ ಕಾಮಗಾರಿ ನಡೆದಿದೆ ಎನ್ನುವ ಆರೋಪಕ್ಕೆ ಇನ್ನಷ್ಟು ಪುಷ್ಟಿ ಸಿಕ್ಕಂತಾಗಿದೆ. ಕೆ.ಆರ್. ಮಾರ್ಕೆಟ್ನಿಂದ ಬಿಎಚ್ಇಎಲ್ ಸರ್ಕಲ್ ತನಕದ ಮೈಸೂರು ರಸ್ತೆಯ 4.8 ಕಿಲೋ ಮೀಟರ್ ಉದ್ದದ ಒಂದು ಬದಿಗೆ ವೈಟ್ ಟಾಪಿಂಗ್ ಕಾಮಗಾರಿ 2018ರ ಏಪ್ರಿಲ್ ನಲ್ಲಿ ಮುಗಿದಿತ್ತು. ಸುಮಾರು 25 ರಿಂದ 30 ವರ್ಷ ಬಾಳಿಕೆ ಬರಬೇಕಿದ್ದ ಈ ರಸ್ತೆಯ ಒಂದು ಭಾಗವು ಒಂದೇ ವರ್ಷಕ್ಕೆ ಕುಸಿದಿದೆ. ಬಾಪೂಜಿನಗರ ಪ್ರವೇಶದ್ವಾರದ ಬಳಿ ರಸ್ತೆ ಕುಸಿದು, ವೈಟ್ ಟಾಪಿಂಗ್ ಮೇಲ್ಭಾಗದಲ್ಲಿ ದೊಡ್ಡ ಬಿರುಕು ಕಂಡು ಬಂದಿದೆ. ಇದು ನಗರದಲ್ಲಿ ನಡೆಯುತ್ತಿರುವ 972 ಕೋಟಿ ರೂಪಾಯಿ ವೆಚ್ಚದ ವೈಟ್ ಟಾಪಿಂಗ್ ಕಾಮಗಾರಿ ಗುಣಮಟ್ಟದ ಮೇಲೆಯೇ ಸಂಶಯ ಮೂಡುವಂತೆ ಮಾಡಿದೆ.

ಸೂಕ್ತ ತನಿಖೆ
ವೈಟ್ ಟಾಪಿಂಗ್ ಯೋಜನೆ ಬಗ್ಗೆ ಸಮಗ್ರ ತನಿಖೆ ನಡೆಸಿ ವರದಿ ನೀಡುವುದರ ಜೊತೆಗೆ ಹೊಸದಾಗಿ ವೈಟ್ ಟಾಪಿಂಗ್ ಮಾಡದಂತೆ ಮುಖ್ಯಮಂತ್ರಿ ಯಡಿಯೂರಪ್ಪ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿಎಂ ವಿಜಯಭಾಸ್ಕರ್ ಅವರ ಜೊತೆ ಖುದ್ದಾಗಿ ಮಾತನಾಡಿ ಸೂಚನೆ ನೀಡಿದ್ದಾರೆ. ನಗರದ ಒಟ್ಟು 30 ರಸ್ತೆಗಳಲ್ಲಿ 93.5 ಕಿಲೋ ಮೀಟರ್ ಉದ್ದದ ವೈಟ್ ಟಾಪಿಂಗ್ ಹಾಕುವ ರಸ್ತೆ ಕಾಮಗಾರಿ 2017ರಿಂದ ಬೇರೆ ಬೇರೆ ಅವಧಿಯಲ್ಲಿ ಪ್ರಾರಂಭವಾಗಿದೆ. 2 ಪ್ಯಾಕೇಜ್ಗಳಲ್ಲಿ ಈ ಕಾಮಗಾರಿ ನಡೆಯುತ್ತಿದ್ದು, ಈತನಕ ಒಟ್ಟು 28 ಕಿಲೋ ಮೀಟರ್ ಉದ್ದದ ರಸ್ತೆಗಳಲ್ಲಿ ವೈಟ್ ಟಾಪಿಂಗ್ ಕಾಮಗಾರಿ ಪೂರ್ಣಗೊಂಡಿದೆ. ಇದಕ್ಕಾಗಿ 230 ರಿಂದ 240 ಕೋಟಿ ರೂಪಾಯಿ ಹಣವನ್ನು ಬಿಬಿಎಂಪಿ ಖರ್ಚು ಮಾಡಿದೆ ಅಂತ ಹೇಳುತ್ತಾರೆ ಮೇಯರ್ ಗಂಗಾಂಬಿಕೆ. ಮೈಸೂರು ರೋಡ್ ವೈಟ್ ಟಾಪಿಂಗ್ ರಸ್ತೆ ಕುಸಿತದ ಬಗ್ಗೆ ಕೇಳಿದ್ರೆ, ಈ ಬಗ್ಗೆ ಎಂಜಿನಿಯರ್ ಗಳಿಂದ ಮಾಹಿತಿ ಪಡೆದು ಸೂಕ್ತ ಕ್ರಮ ಕೈಗೊಳ್ಳುತ್ತೇನೆ ಎಂದು ಹೇಳುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com