

ಬೆಂಗಳೂರು: ಕೊರೋನಾ ವಾರಿಯರ್ಸ್ ಮೇಲಿನ ಹಲ್ಲೆ ಪ್ರಕರಣದಿಂದ ಭಾರಿ ಸುದ್ದಿಗೆ ಗ್ರಾಸವಾಗಿದ್ದ ಪಾದರಾಯನಪುರದಲ್ಲಿ ಇಂದು ಮತ್ತೆ 2 ಕೊರೋನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ.
ಹೌದು.. ಗುರುವಾರ ಒಂದೇ ದಿನ 22 ಸೋಂಕು ಪ್ರಕರಣಗಳು ದೃಢಪಟ್ಟಿದ್ದು, ಈ ಮೂಲಕ ರಾಜ್ಯದ ಒಟ್ಟು ಕೋವಿಟ್-19 ಪ್ರಕರಣಗಳ ಸಂಖ್ಯೆ 557ಕ್ಕೆ ಏರಿಕೆಯಾಗಿದೆ. ಹೊಸದಾಗಿ ಪತ್ತೆಯಾಗಿರುವ ಪ್ರಕರಣಗಳಲ್ಲಿ 14 ಬೆಳಗಾವಿ ಜಿಲ್ಲೆಯೊಂದರಿಂದಲೇ ವರದಿಯಾಗಿವೆ. ಇನ್ನು ವಿಜಯಪುರದಲ್ಲಿ 2 ಮತ್ತು ಬೆಂಗಳೂರು ನಗರದಲ್ಲಿ 3 ಪ್ರಕರಣಗಳು ದೃಢಪಟ್ಟಿವೆ. ಕೋವಿಡ್-19 ತಣ್ಣಗಾಗಿದ್ದ ದಕ್ಷಿಣ ಕನ್ನಡ, ತುಮಕೂರು ಮತ್ತು ದಾವಣಗೆರೆಯಲ್ಲಿ ಮತ್ತೆ ತಲಾ 1 ಪ್ರಕರಣಗಳು ಖಚಿತವಾಗಿವೆ.
ಪಾದರಾಯನಪುರದಲ್ಲಿ ಮತ್ತೆ 2 ಪಾಸಿಟಿವ್ ಪ್ರಕರಣ
ಇನ್ನು ಬೆಂಗಳೂರಿನಲ್ಲಿ ಪತ್ತೆಯಾಗಿರುವ ಮೂರು ಪ್ರಕರಣಗಳಲ್ಲಿ ಇಬ್ಬರು ಪಾದರಾಯನಪುರ ವಾರ್ಡ್‌ನ ಸಂಪರ್ಕಿತರಾಗಿದ್ದಾರೆ. ಇನ್ನೊಬ್ಬರು ಬೆಂಗಳೂರಿನ ದೀಪಾಂಜಲಿ ನಗರದ 63 ವರ್ಷದ ಪುರುಷರಾಗಿದ್ದು ತೀವ್ರ ಉಸಿರಾಟದ ಸಮಸ್ಯೆ (SARI) ಯಿಂದ ಬಳಲುತ್ತಿದ್ದಾರೆ. ಪಾದರಾಯನಪುರದ ಪ್ರಕರಣ ಬೆಚ್ಚಿಬೀಳಿಸುವಂತಿದ್ದು, ಸೋಂಕಿತ 292 ಜೊತೆ ಸಂಪರ್ಕ ಹೊಂದಿದ್ದ ಐವರಲ್ಲಿ ಕೊರೊನಾ ದೃಢಪಟ್ಟಿದೆ. ಈ 292 ಸೋಂಕಿತನಿಗೆ ತನ್ನ ಮಾಲೀಕನಿಂದ ಸೋಂಕು ಹಬ್ಬಿತ್ತು. ಲೆದರ್ ಜಾಕೆಟ್, ಬ್ಯಾಗ್ ತಯಾರಿ ಫ್ಯಾಕ್ಟರಿಯ ಮಾಲೀಕನಿಂದ ನೌಕರನಿಗೆ ಸೋಂಕು ಅಟ್ಯಾಕ್ ಆಗಿತ್ತು.
7 ಜನರು ಗುಣಮುಖ
565 ಕೊರೊನಾ ಸೋಂಕಿತರ ಪೈಕಿ ಈವರೆಗೆ 229 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಕರ್ನಾಟಕದಲ್ಲಿ ಇದುವರೆಗೂ ಕೊರೊನಾದಿಂದ 21 ಜನ ಮೃತಪಟ್ಟಿದ್ದು, ಸದ್ಯ 314 ಜನರಲ್ಲಿ ಕೊರೊನಾ ಸೋಂಕು ಸಕ್ರಿಯವಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ. ಇದೇ ಅವಧಿಯಲ್ಲಿ ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿನಿಂದ 7 ಜನರು ಗುಣಮುಖರಾಗಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಸೋಂಕಿನಿಂದ ಚೇತರಿಸಿಕೊಂಡವ ಸಂಖ್ಯೆ 227ಕ್ಕೆ ಏರಿದೆ. ಇನ್ನು ಕೋವಿಡ್-19ನಿಂದ 21 ಜನರು ಸಾವಿಗೀಡಾಗಿದ್ದರೆ, ರೋಗಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಮೂಲಕ ರಾಜ್ಯ 22 ಕೊರೊನಾ ಸೋಂಕಿತರನ್ನು ಕಳೆದುಕೊಂಡಿದೆ.