

ಕಲಬುರಗಿ: ಕಲಬುರಗಿಯಲ್ಲಿ ಕೊರೋನಾ ಆಬ್ಬರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದ್ದು, ಬುಧವಾರ ಒಂದೇ ದಿನ ನಾಲ್ಕೂವರೆ ವರ್ಷದ ಹೆಣ್ಣುಮಗು ಸೇರಿದಂತೆ ಎಂಟು ಜನರಿಗೆ ಹೊಸದಾಗಿ ಸೋಂಕು ಇರುವುದು ಪತ್ತೆಯಾಗಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯಾಬಲ 52ಕ್ಕೇರಿದ್ದು, ಹೆಮ್ಮಾರಿ ಕೊನೆಗೂ ಕಲಬುರಗಿಯಲ್ಲಿ ಅರ್ಧಶತಕ ದಾಟಿದಂತಾಗಿದೆ.
ಬುಧವಾರ ಬಿಡುಗಡೆಯಾಗಿರುವ ಹೆಲ್ತ್ ಬುಲೆಟಿನ್ ಪ್ರಕಾಸ ನಾಲ್ಕೂವರೆ ವರ್ಷದ ಹೆಣ್ಣು ಮಗು, 28 ವರ್ಷದ ಯುವಕ, 14 ವರ್ಷದ ಬಾಲಕಿ, 22 ವರ್ಷದ ಯುವಕ, 40 ವರ್ಷದ ಮಹಿಳೆ, 20 ವರ್ಷದ ಯುವಕ ಹಾಗೂ 17 ವರ್ಷದ ಬಾಲಕಿಗೂ ಸೋಂಕು ತಗುಲಿರುವುದು ದೃಢಪಟ್ಟಿದೆ.
ಏಪ್ರಿಲ್ 13 ರಂದು ಕೊರೋನಾ ಸೋಂಕಿನಿಂದ ಸಾವನ್ನಪ್ಪಿದ್ದ ಮೊಮಿನಪುರಾ ಬಡಾವಣೆಯ 55 ವರ್ಷದ ಬಟ್ಟೆ ವರ್ತಕನ ನೇರ ಸಂಪರ್ಕಕ್ಕೆ ಬಂದ ಹಾಗೂಅವರ ದ್ವಿತೀಯ ಸಂಪರ್ಕಿತರಿಂದ ಎಂಟು ಜನರಿಗೂ ಕೋರೋನಾ ಸೊಂಕು ತಗುಲಿರುವುದು ಪ್ರಯೋಗಾಲಯ ವರದಿಗಳು ದೃಢಪಟಿಸಿವೆ. ಸೋಂಕು ತಗುಲಿರುವ ಇವರನ್ನೆಲ್ಲಾ ಇಎಸ್ಐಸಿ ಹಾಗೂ ಜಿಮ್ಸ್ ಆಸ್ಪತ್ರೆಗಳಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಒಂದೇ ದಿನ 8 ಪ್ರಕರಣಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಕಲಬುರಗಿ ಜಿಲ್ಲೆಯು ರಾಜ್ಯದ ಗಮನ ಸೆಳೆಯುವಂತೆ ಮಾಡಿದೆ. ಸೋಕು ನಿಯಂತ್ರಣಕ್ಕೆ ಬಾರದೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದರಿಂದ ಸಾರ್ವಜನಿಕರಲ್ಲಿ ಆತಂಕ ಹೆಚ್ಚಾಗುತವಂತೆ ಮಾಡಿದೆ.