

ಬೆಂಗಳೂರು: 2010ರಲ್ಲೇ ಬಿಜೆಪಿ ಸರ್ಕಾರ ಗೋ ಹತ್ಯೆ ನಿಷೇಧ ಮಸೂದೆ ಜಾರಿಗೆ ಮುಂದಾಗಿತ್ತು. ಆದರೆ ಜೆಡಿಎಸ್ ಪಕ್ಷ ವಿರೋಧಿಸಿತ್ತು ಎಂದು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಜೆಪಿ ಭವನದಲ್ಲಿರುವ ಜೆಡಿಎಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕುಮಾರಸ್ವಾಮಿ ಅವರು, 2010 ರಲ್ಲಿ ಬಿಜೆಪಿ ಸರ್ಕಾರ ಗೋಹತ್ಯೆ ವಿರೋಧಿ ಮಸೂದೆಯನ್ನು ಮಂಡಿಸಿದಾಗ ನಾವು ಅದನ್ನು ವಿರೋಧಿಸಿದ್ದೇವೆ. ಈಗಲೂ ನಾವು ಮಸೂದೆಯನ್ನು ವಿರೋಧಿಸುತ್ತಿದ್ದೇವೆ. ಗೋಹತ್ಯೆ ಮಸೂದೆಯಲ್ಲಿ ಹಲವಾರು ನಕಾರಾತ್ಮಕ ಸಮಸ್ಯೆಗಳಿವೆ ಆದ್ದರಿಂದ ನಾವು ವಿರೋಧಿಸುತ್ತಿದ್ದೇವೆ ಎಂದು ಹೇಳಿದರು.
ಇದೇ ವೇಳೆ ಸಾರಿಗೆ ನೌಕರರ ಪ್ರತಿಭಟನೆ ಕುರಿತು ಮಾತನಾಡಿದ ಕುಮಾರಸ್ವಾಮಿ, 'ರಾಜ್ಯದಲ್ಲಿ ಕಳೆದ ಎಂಟತ್ತು ದಿನಗಳಿಂದ, ವಿಧಾನಸಭೆ ಕಲಾಪದಲ್ಲಿ ತಿದ್ದುಪಡಿಗಳ ಬಗ್ಗೆ ಪ್ರತಿಭಟನೆಗಳು ನಡೆಯುತ್ತಲೇ ಇವೆ. ಅದರ ಬಗ್ಗೆ ಮಾತನಾಡುವ ಮೊದಲು, ಅದಕ್ಕೂ ಮುಂಚೆ ಸಾರಿಗೆ ನೌಕರರ ಪ್ರತಿಭಟನೆ ಬಗ್ಗೆ ಮಾತನಾಡ್ತೇನೆ. ನೌಕರರರಿಗೆ ಮನವಿ ಮಾಡ್ತೇನೆ, ಹಾಗೆ ಸರ್ಕಾರಕ್ಕೂ ಸಲಹೆ ಕೊಡ್ತೇನೆ. ಪ್ರತಿಭಟನೆ ನಡೆದಾಗ, ಪ್ರತಿಭಟನೆ ಮಾಡುತ್ತಿರುವವರನ್ನು ವಿಧಾನಸೌಧಕ್ಕೆ ಆಹ್ವಾನಿಸಿ, ಅವರ ಸಮಸ್ಯೆ ಆಲಿಸಿ, ಅಹವಾಲುಗಳನ್ನ ಆಲಿಸಬೇಕು. ಅವರ ಬೇಡಿಕೆಗಳನ್ನು ಈಡೇರಿಸುವ ಕೆಲಸ ಮಾಡಬೇಕು, ಸೌಹಾರ್ದಯುತ ವಾತವಾರಣ ನಿರ್ಮಾಣ ಮಾಡಬೇಕು. ಆ ಮೂಲಕ ಸರ್ಕಾರ ಅವರ ಜವಾಬ್ದಾರಿ ನಿರ್ವಹಿಸಬೇಕು. ಸಾರ್ವಜನಿಕರ ಹಿತದೃಷ್ಟಿಯಿಂದ ಸಾರಿಗೆ ನೌಕರರು ಮುಷ್ಕರ ಕೈಬಿಡಬೇಕೆಂದು ನಾನು ನೇರವಾಗಿ ಮನವಿ ಮಾಡುತ್ತಿದ್ದೇನೆ ಎಂದು ಹೇಳಿದ್ದಾರೆ.
'ಸಾರಿಗೆ ನೌಕರರ ಬೇಡಿಕೆ ತಮ್ಮನ್ನ ಸರ್ಕಾರಿ ನೌಕರರನ್ನಾಗಿ ಮಾಡಬೇಕು ಎಂಬುದು. 8 ತಿಂಗಳಿನಿಂದ ಸರ್ಕಾರ ಕೋವಿಡ್ ಸಂಕಷ್ಟದಲ್ಲಿದೆ. ಇಂತಹ ಸಂದರ್ಭದಲ್ಲಿ ಬೇಡಿಕೆಯನ್ನು ತಕ್ಷಣ ಜಾರಿಗೆ ತರಬೇಕು ಎಂದು ಪಟ್ಟು ಹಿಡಿಯೋದು ಸರಿಯಲ್ಲ ಎಂದು ಹೇಳಿದರು.
ಇನ್ನು, ಭೂ ಸುಧಾರಣೆ ಕಾಯ್ದೆ ಕುರಿತು ಮಾತನಾಡಿದ ಎಚ್ಡಿಕೆ, ಭೂ ಸುಧಾರಣೆ ಕಾಯಿದೆ ವಿಚಾರದಲ್ಲಿ ನಮ್ಮ ಪಕ್ಷದ ನಿಲುವಿನ ಬಗ್ಗೆ ತುಂಬಾ ದೊಡ್ಡ ಮಟ್ಟದಲ್ಲಿ ಚರ್ಚೆಯಾಗ್ತಿದೆ. ಭೂ ಸುಧಾರಣಾ ಕಾಯ್ದೆಗೆ ಜೆಡಿಎಸ್ ಬೆಂಬಲ ವಿಚಾರವಾಗಿ, 1963ರಲ್ಲಿ ಮೊದಲು ಭೂಸುಧಾರಣಾ ಕಾಯ್ದೆ ತರಲಾಗಿತ್ತು. ಅದಕ್ಕೆ ಮಾರ್ಪಾಟು ಮಾಡಿ ಮೊನ್ನೆ ಕಾಯ್ದೆ ತಂದಿದ್ದರು. ನಾನು ಸರ್ಕಾರಕ್ಕೆ ಸಲಹೆ ನೀಡಿದ್ದೆ. 264ಎಕರೆ ಬದಲಾಗಿ ಭೂಮಿಯ ಮಿತಿ ಮಾಡಲು ಹೇಳಿದ್ದೆ. ಕೃಷಿ ಉದ್ದೇಶಕ್ಕಾಗಿ ಬಳಸಲು ಮಾತ್ರ ಮಾಡಿ ಎಂದಿದ್ದೆ. 79(ಎ)(ಬಿ) ಮಾತ್ರ ಬದಲಾವಣೆ ಆಗಿದೆ. ಮಾರ್ಪಾಟು ಮಾಡಿದ ಮೇಲೆಯೇ ನಾನು ಒಪ್ಪಿದ್ದು ಎಂದು ಸ್ಪಷ್ಟಪಡಿಸಿದರು.