

ಬೆಂಗಳೂರು: ಪ್ರತ್ಯೇಕ ಪ್ರಕರಣದಲ್ಲಿ ತರಕಾರಿ ಮಧ್ಯೆ ಮಾದಕ ವಸ್ತುಗಳನ್ನಿಟ್ಟು ನಗರಕ್ಕೆ ತಂದು ಮಾರಾಟ ಮಾಡುತ್ತಿದ್ದ ನಾಲ್ವರು ಅಂತರ್ ರಾಜ್ಯ ಪೆಡ್ಲರ್ ಗಳನ್ನು ಸುದ್ದಗುಂಟೆಪಾಳ್ಯ ಪೊಲೀಸರು ಬಂಧನಕ್ಕೊಳಪಡಿಸಿದ್ದು, ರೂ.64 ಲಕ್ಷ ಮೌಲ್ಯದ ಮಾದಕ ವಸ್ತು ಜಪ್ತಿ ಮಾಡಿದ್ದಾರೆ.
ಆರೋಪಿಗಳನ್ನು ಕೆ.ಪ್ರೀತಿಪಾಲ್, ಕೆ.ಖಲಂದರ್, ಅಮಿತ್ ಕುಮಾರ್ ಹಾಗೂ ಸೂರಜ್ ಎಂದು ಗುರ್ತಿಸಲಾಗಿದೆ.
ಆರೋಪಿಗಳಾದ ಪ್ರೀತಿಪಾಲ್ ಮತ್ತು ಖಲಂದರ್ ಆಂಧ್ರಪ್ರದೇಶದ ರಾಜಮಂಡ್ರಿಯಲ್ಲಿರುವ ಗುಡ್ಡಗಾಡು ಪ್ರದೇಶದಿಂದ ಕಡಿಮೆ ಬೆಲಗೆ ಗಾಂಜಾ ಖರೀದಿಸಿ ಸ್ವರಾಜ್ ಮಜ್ದಾ ವಾಹನದಲ್ಲಿ ಬೆಂಗಳೂರಿಗೆ ತರುತ್ತಿದ್ದರು. ಯಾರಿಗೂ ಅನುಮಾನ ಬಾರದಂತೆ ವಾಹನದಲ್ಲಿ ತರಕಾರಿಗಳನ್ನು ತುಂಬಿದ ಕ್ರೇಟ್ ಇಟ್ಟು ಅದರ ಮಧ್ಯೆ ಗಾಂಜಾ ತುಂಬುತ್ತಿದ್ದರು.
ಚೆಕ್ ಪೋಸ್ಟ್'ಗಳಲ್ಲಿ ತರಕಾರಿ ವಾಹನ ಎಂದು ಭಾವಿಸಿ ಪೊಲೀಸರು ವಾಹನವನ್ನು ಬಿಡುತ್ತಿದ್ದರು. ಹೀಗಾಗಿ ಸಿಕ್ಕಿ ಬಿದ್ದಿರಲಿಲ್ಲ. ಕಳೆದ 1 ವರ್ಷದಿಂದ ದಂಧೆ ನಡೆಸುತ್ತಿದ್ದಾರೆ. ಬೆಂಗಳೂರಿಗೆ ಬಂದ ಬಳಿಕ ಮಂಗಳೂರು ಮತ್ತು ಕಾಸರಗೋಡಿಗೆ ಗಾಂಜಾ ಪೂರೈಕೆ ಮಾಡುತ್ತಿದ್ದರು. ಬೆಂಗಳೂರು, ಮಂಗಳೂರು ಹಾಗೂ ಕಾಸರಗೋಡು ಇವರ ದಂಧೆಯ ಪ್ರಮುಖ ಸ್ಥಳಗಳಾಗಿದ್ದವು. ಕಾಲೇಜು ವಿದ್ಯಾರ್ಥಿಗಳು, ಸಾಫ್ಟ್ ವೇರ್ ಕಂಪನಿ ಉದ್ಯೋಗಿಗಳನ್ನು ಗುರಿಯಾಗಿಸಿಕೊಂಡು ಗಾಂಜಾ ಮಾರಾಟ ಮಾಡುತ್ತಿದ್ದರು ಎಂದು ಮಾಹಿತಿ ನೀಡಿದ್ದಾರೆ.