

ಬೆಂಗಳೂರು: ಕೇಂದ್ರ ಸರ್ಕಾರದ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಮುಸ್ಲಿಂ ಸಂಘಟನೆಗಳು, ಎಡಪಂಥೀಯ ಸಂಘಟನೆಗಳಿಂದ ಬೆಂಗಳೂರು ನಗರದಲ್ಲಿ ಶನಿವಾರ ಕೂಡ ಪ್ರತಿಭಟನೆ ಮುಂದುವರಿದಿದೆ.
ಇಂದು ಬೆಳಗ್ಗೆ 7 ಗಂಟೆಯಿಂದ 7.30ರವರೆಗೆ ನಗರದ ಫ್ರೀಡಂ ಪಾರ್ಕ್ ನಲ್ಲಿ ಧರಣಿ ನಡೆಯಿತು. ಇಂದು ಸಂಜೆ 4 ಗಂಟೆಗೆ ಟೌನ್ ಹಾನ್ ಮುಂಭಾಗ ನಡೆಯಲಿದೆ. ಬನ್ನೇರುಘಟ್ಟದ ಈದ್ಗಾ ಮೈದಾನ ಸೇರಿದಂತೆ 6 ಕಡೆಗಳಲ್ಲಿ ಇಂದು ದಿನವಿಡೀ ಪ್ರತಿಭಟನೆ ನಡೆಯಲಿದೆ.
ನಗರದಲ್ಲಿ 6 ಕಡೆ ಪ್ರತಿಭಟನೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ವಾರಾಂತ್ಯವಾದರೂ ಕೂಡ ಇಂದು ಕೂಡ ಬೆಂಗಳೂರಿಗರಿಗೆ ಸಂಚಾರ ದಟ್ಟಣೆ ಬಿಸಿ ತಟ್ಟಲಿದೆ.
ನಿನ್ನೆ ವಿವಿಧ ಬೇಡಿಕೆಗೆ ಆಗ್ರಹಿಸಿ ಆಶಾ ಕಾರ್ಯಕರ್ತೆಯರು ಪ್ರತಿಭಟನೆ ಒಂದೆಡೆಯಾದರೇ, ಇನ್ನೊಂದೆಡೆ ಚಾಮರಾಜ ಪೇಟೆಯ ಈದ್ಗಾ ಮೈದಾನದಲ್ಲಿ ನಡೆದ ಸಿಎಎ ಪ್ರತಿಭಟನೆಯಿಂದಾಗಿ ಟ್ರಾಫಿಕ್ ಸಮಸ್ಯೆ ಉಂಟಾಗಿ ಜನ ಹಲವು ಕಡೆಗಳಲ್ಲಿ ಕಿರಿಕಿರಿ ಅನುಭವಿಸಿದ್ದರು. ಇಂದು ಕೂಡ ಮೆಜೆಸ್ಟಿಕ್, ಟೌನ್ ಹಾಲ್, ಹೆಬ್ಬಾಳ, ಆರ್.ಟಿ ನಗರ, ಹೊಸೂರು ಸುತ್ತಮುತ್ತ ಟ್ರಾಫಿಕ್ ಸಮಸ್ಯೆ ಹೆಚ್ಚಾಗುವ ಸಾಧ್ಯತೆಗಳಿವೆ.