ರಾಜ್ಯದಾದ್ಯಂತ ಮುಂಗಾರು ಮಳೆ ಚುರುಕು: ಬೆಂಗಳೂರು ನಗರದಲ್ಲಿ 5 ದಿನ ಮಳೆ ಸಾಧ್ಯತೆ

ಲಾಕ್'ಡೌನ್ ನಡುವಲ್ಲೇ ನಗರದಲ್ಲಿ ಮಳೆಯ ಅಬ್ಬರ ಜೋರಾಗಿದ್ದು, ಜನರನ್ನು ಮನೆಗಳಿಂದ ಹೊರಬರಂತೆ ನೋಡಿಕೊಳ್ಳಲು ಹರಸಾಹಸ ಪಡುತ್ತಿರುವ ಪೊಲೀಸರಿಗೆ ವರವಾಗಿ ಪರಿಣಮಿಸಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 

ಬೆಂಗಳೂರು: ಲಾಕ್'ಡೌನ್ ನಡುವಲ್ಲೇ ನಗರದಲ್ಲಿ ಮಳೆಯ ಅಬ್ಬರ ಜೋರಾಗಿದ್ದು, ಜನರನ್ನು ಮನೆಗಳಿಂದ ಹೊರಬರಂತೆ ನೋಡಿಕೊಳ್ಳಲು ಹರಸಾಹಸ ಪಡುತ್ತಿರುವ ಪೊಲೀಸರಿಗೆ ವರವಾಗಿ ಪರಿಣಮಿಸಿದೆ. 

ರಾಜ್ಯದ ಮಲೆನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲೂ ಗುರುವಾರ ಉತ್ತಮವಾಗಿ ಮಳೆಯಾಗಿದ್ದು, ಕಲ್ಯಾಣ ಕರ್ನಾಟಕದ ಕಲಬುರಗಿ, ಯಾದಗಿರಿ ಜಿಲ್ಲೆಗಳಲ್ಲಿ ಅಬ್ಬರಿಸಿ ಬೊಬ್ಬಿರಿಯುತ್ತಿದೆ. ಕಳೆದೆರಡು ದಿನಗಳಿಂದ ಅವ್ಯಾಹತವಾಗಿ ಸುರಿಯುತ್ತಿರುವ ಮಳೆಗೆ ಕಲಬುರಗಿ ಜಿಲ್ಲೆಯಲ್ಲಿ ಹಳ್ಳಕೊಳ್ಳ ನದಿಗಳು ತುಂಬಿ ಹರಿಯುತ್ತಿದ್ದು, ಪರಿಣಾಮ ಪ್ರವಾಹ ಪರಿಸ್ಥಿತಿ ಎದುರಾಗಿದೆ. 

ಮಲೆನಾಡು ಜಿಲ್ಲೆಗಳಾದ ಚಿಕ್ಕಮಗಳೂರು, ಕೊಡಗು ಜಿಲ್ಲೆಗಳಲ್ಲೂ ಮಳೆ ಆರ್ಭಟ ಮುಂದುವರೆದಿದ್ದು, ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲೂ ಉತ್ತಮ ಮಳೆಯಾಗಿದೆ. ಇನ್ನುಳಿದಂತೆ ಬಳ್ಳಾರಿ, ಧಾರವಾಡ, ಹಾವೇರಿ, ಗದಗ, ಬೆಳಗಾವಿ, ಬಾಗಲಕೋಟೆ, ಬೆಂಗಳೂರು ನಗರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಅಲ್ಲಲ್ಲಿ ಸಾಧಾರಣ ಮಳೆಯಾಗಿದೆ.  

ಭಾರೀ ಮಳೆ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಹಾಗೂ ಕರಾವಳಿ ತೀರ ಪ್ರದೇಶಗಳಲ್ಲಿ ಆರೆಂಜ್ ಮತ್ತು ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಅಲ್ಲದೆ, ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರ ನೀಡಲಾಗಿದೆ. 

ಲಾಕ್ಡೌನ್ ವೇಳೆ ಮಳೆ ವರದಾನವಾಗಿದ್ದು, ಜನರು ಮನೆಯಲ್ಲಿರುವಂತಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. 

ಐಎಂಡಿ ಬೆಂಗಳೂರು ನಿರ್ದೇಶಕ ಸಿ.ಎಸ್.ಪಾಟೀಲ್ ಅವರು ಮಾತನಾಡಿ, ಅರಬ್ಬಿ ಸಮುದ್ರದ ಪೂರ್ವಭಾಗದಲ್ಲಿ ಮೇಲ್ಮೈ ಸುಳಿಗಾಳಿ ಉಂಟಾಗಿರುವುದರಿಂದ ರಾಜ್ಯದಲ್ಲಿ ಮಾನ್ಸೂನ್ ಮತ್ತಷ್ಟು ತೀವ್ರಗೊಂಡಿದೆ. ಉತ್ತರ ಮತ್ತು ದಕ್ಷಿಣ ಕರ್ನಾಟಕದಲ್ಲಿ ಮುಂದಿನ ದಿನಗಳಲ್ಲಿ ಮತ್ತಷ್ಟು ಮಳೆಯಾಗಲಿದೆ. ಬೆಂಗಳೂರಿನಲ್ಲಿ ಮುಂದಿನ ಐದು ದಿನಗಳ ಕಾಲ ಸಾಧಾರಣ ಮಳೆ ಮುಂದುವರೆಯರಿದೆ. ಈ ಮಳೆಯಿಂದ ವಾತಾವರಣ ತಂಪಾಗಲಿದೆ ಎಂದು ಹೇಳಿದ್ದಾರೆ. 

ನಿನ್ನೆ ಸಂಜೆ 5.30ರ ಸುಮಾರಿನ ವರೆಗೂ ಬೆಂಗಳೂರು ನಗರದಲ್ಲಿ 8.4 ಎಂಎಂ ಮಳೆಯಾಗಿದೆ. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 5.8 ಎಂಎಂ ಮತ್ತು ಹೆಚ್ಎಎಲ್ ವಿಮಾನ ನಿಲ್ದಾಣದಲ್ಲಿ 10ಎಂಎಂ ಮಳೆಯಾಗಿದೆ. 

ಇನ್ನು ರಾಜ್ಯದಲ್ಲಿ ಸುರಿಯುತ್ತಿರುವ ಮಳೆ ಆರೋಗ್ಯಾಧಿಕಾರಿಗಳು ಹಾಗೂ ವೈದ್ಯಕೀಯ ವೃತ್ತಿಪರರಲ್ಲಿ ಆತಂಕ ಹೆಚ್ಚಾಗುವಂತೆ ಮಾಡಿದೆ. ಈಗಾಗಲೇ ರಾಜ್ಯದಲ್ಲಿ ಸೋಂಕು ವ್ಯಾಪಕವಾಗುತ್ತಿದ್ದು, ಈ ನಡುವಲ್ಲೇ ರಾಜ್ಯದಲ್ಲಿ ಮಳೆ ಸುರಿಯುತ್ತಿರುವುದರಿಂದ ಈ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಅಧಿಕಾರಿಗಳು ಎಚ್ಚರ ನೀಡಿದ್ದು, 10 ವರ್ಷದೊಳಗಿನ ಮಕ್ಕಳು, 60 ವರ್ಷದ ಮೇಲ್ಪಟ್ಟ ವೃದ್ಧರು ಹಾಗೂ ದೀರ್ಘಕಾಲಿಕ ರೋಗಗಳಿಂದ ಬಳಲುತ್ತಿರುವವರು ಪ್ರಮುಖವಾಗಿ ಶ್ವಾಸಕೋಶಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದ ಬಳಲುತ್ತಿರುವವರು ಮನೆಯಲ್ಲಿಯೇ ಇದ್ದು ಬಹಳ ಎಚ್ಚರದಿಂದಿರುವಂತೆ ಸೂಚಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com