

ಬೆಂಗಳೂರು: ರಾಜ್ಯ ಕೊರೋನಾ ಪರಿಸ್ಥಿತಿ ಕುರಿತಂತೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ಬುಧವಾರ ಮಾತುಕತೆ ನಡೆಸಿದ್ದು, ಮಾತುಕತೆ ವೇಳೆ ಮತ್ತಷ್ಟು ಕ್ಷೇತ್ರಗಳ ಚಟುವಟಿಕೆಗಳಿಗೆ ವಿನಾಯಿತಿ ನೀಡುವಂತೆ ಯಡಿಯೂರಪ್ಪ ಅವರು ಮನವಿ ಮಾಡಿಕೊಂಡಿದ್ದು, ಇದಕ್ಕೆ ಪ್ರಧಾನಿ ಮೋದಿಯವರು ಸಕಾರಾತ್ಮಕವಾಗಿ ಸ್ಪಂದನೆ ನೀಡಿದ್ದಾರಂದು ತಿಳಿದುಬಂದಿದೆ.
ಬುಧವಾರ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವಿಡಿಯೇ ಸಂವಾದ ನಡೆಸಿದ ವೇಳೆ, ಇದೇ ರೀತಿ ಹಲವು ರಾಜ್ಯಗಳ ಮುಖ್ಯಮಂತ್ರಿಗಳು ಮನವಿ ಮಾಡಿಕೊಂಡಿದ್ದಾರಂದು ವರದಿಗಳು ತಿಳಿಸಿವೆ.
ಯಡಿಯೂರಪ್ಪ ಕೂಡ ಆರ್ಥಿಕ ಚಟುವಟಿಕೆ ಮೊದಲಿನ ಪರಿಸ್ಥಿತಿ ಬರಬೇಕಾದರೆ ಕೆಲವೊಂದು ಕ್ಷೇತ್ರಗಳಿಗೆ ಒಪ್ಪಿಗೆ ನೀಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.
ಮುಖ್ಯಮಂತ್ರಿಗಳ ಮನವಿಗೆ ಸಕಾರಾತ್ಮಕವಾಗಿ ಸ್ಪಂದನೆ ನೀಡಿರುವ ಮೋದಿಯವರು, ಮತ್ತಷ್ಟು ವಿನಾಯಿಟಿ ನೀಡುವ ಕುರಿತು ಸುಳಿವು ನೀಡಿದರು ಎಂದು ಮೂಲಗಳು ತಿಳಿಸಿವೆ.
ಕೊರೋನಾ ನಿಯಂತ್ರಣದ ಜೊತೆಗೆ ಆರ್ಥಿಕ ಚಟುವಟಿಕೆಗಳ ಪುನಶ್ಚೇತನಕ್ಕೆ ಒತ್ತು ನೀಡುತ್ತಿರುವ ರಾಜ್ಯ ಸರ್ಕಾರಗಳ ಕ್ರಮಕ್ಕೆ ಮೆಚ್ಚುಗೆ ಸೂಚಿಸಿದ ಮೋದಿಯವರು, ದೇಶದ ಎಲ್ಲಾ ರಾಜ್ಯಗಳು ಇನ್ನು ಮುಂದೆ ಅನ್'ಲಾಕ್ ನತ್ತ ಹೆಜ್ಜೆ ಇಡಬೇಕು ಮತ್ತು ವಿಧಿಸಿರುವ ನಿರ್ಬಂಧಗಳನ್ನು ಹಂತ ಹಂತವಾಗಿ ಸಡಿಲಗೊಳಿಸಿ ಆತ್ಮನಿರ್ಭರ್ ಪ್ಯಾಕೇಜ್'ನ ಆರ್ಥಿಕ ಚಟುವಟಿಕೆ ಚುರುಕಾಗುವಂತೆ ನೋಡಿಕೊಳ್ಳಬೇಕೆಂಬ ಸಲಹೆ ನೀಡಿದರು ಎಂದು ತಿಳಿದುಬಂದಿದೆ.
ಯಡಿಯೂರಪ್ಪ ಅವರು ಮೋದಿಯವರೊಂದಿಗೆ ಸುಮಾರು 10 ನಿಮಿಷಗಳ ಕಾಲ ರಾಜ್ಯದಲ್ಲಿನ ಕೊರೋನಾ ಪರಿಸ್ಥಿತಿ ಕುರಿತು ವಿವರಣೆ ನೀಡಿದ್ದಾರೆ.