ಸಂಚಾರ ದಟ್ಟಣೆ ಸಮಸ್ಯೆ: ಟೌನ್'ಹಾಲ್'ನಲ್ಲಿ ಪ್ರತಿಭಟನೆಗಳಿಗೆ ನಿಷೇಧ

ನಗರದ ಪುರಭವನದ ಮುಂಭಾಗದಲ್ಲಿ ಇನ್ನು ಮುಂದೆ ಯಾವುದೇ ಪ್ರತಿಭಟನೆ, ಮುಷ್ಕರಗಳಿಗೆ ಅನುಮತಿ ಸಿಗುವುದಿಲ್ಲ. ಪ್ರತಿಭಟನೆ, ಮುಷ್ಕರ ನಡೆಸುವವರು ಸ್ವಾತಂತ್ರ್ಯ ಉದ್ಯಾನ ಇಲ್ಲವೇ, ಮೌರ್ಯ ವೃತ್ತದಲ್ಲಿ ಪ್ರತಿಭಟನೆ ನಡೆಸಬೇಕಾಗುತ್ತದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ನಗರದ ಪುರಭವನದ ಮುಂಭಾಗದಲ್ಲಿ ಇನ್ನು ಮುಂದೆ ಯಾವುದೇ ಪ್ರತಿಭಟನೆ, ಮುಷ್ಕರಗಳಿಗೆ ಅನುಮತಿ ಸಿಗುವುದಿಲ್ಲ. ಪ್ರತಿಭಟನೆ, ಮುಷ್ಕರ ನಡೆಸುವವರು ಸ್ವಾತಂತ್ರ್ಯ ಉದ್ಯಾನ ಇಲ್ಲವೇ, ಮೌರ್ಯ ವೃತ್ತದಲ್ಲಿ ಪ್ರತಿಭಟನೆ ನಡೆಸಬೇಕಾಗುತ್ತದೆ. 

ಇನ್ನು ಮುಂದೆ ಪುರಭವನದ ಮುಂಭಾಗ ಯಾವುದೇ ಪ್ರತಿಭಟನೆ, ಮುಷ್ಕರಗಳಿಗೆ ಅವಕಾಶ ನೀಡಬಾರದೆಂದು ಬೆಂಗಳೂರು ನಗರ ಪೊಲೀಸ್ ಆಯುಕ್ತರ ಗಮನಕ್ಕೆ ತಂದು ಪಾಲಿಕೆ ಆಯುಕ್ತರು ಕ್ರಮ ಕೈಗೊಳ್ಲಬೇಕೆಂಬ ನಿರ್ಣಯಕ್ಕೆ ಶನಿವಾರ ನಡೆದ ಬಿಬಿಎಂಪಿ ಕೌನ್ಸಿಲ್ ಸಭೆಯಲ್ಲಿ ಅಂಗೀಕಾರ ದೊರೆಯಿತು. 

ಮೇಯರ್ ಗೌತಮ್ ಕುಮಾರ್ ನೇತೃತ್ವದ ಸಭೆಯಲ್ಲಿ ಮಂಡನೆಯಾದ ನಿರ್ಣಯಕ್ಕೆ ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರು ಸರ್ವಾನುಮತದ ಒಪ್ಪಿಗೆ ನೀಡಿದರು. 

ಸಭೆ ಬಳಿಕ ಈ ಸಂಬಂಧ ಸ್ಪಷ್ಟನೆ ನೀಡಿದ ಮೇಯರ್ ಅವರು, ಸಾರ್ವಜನಿಕರು ಸಭೆ, ಸಮಾರಂಭಗಳನ್ನು ನಡೆಸಲು ಪುಟ್ಟಣ್ಣಚೆಟ್ಟಿ ಪುರಭವನದ ಸಭಾಂಗಣವನ್ನು ಮುಂಗಡವಾಗಿ ಪಾಲಿಕೆಗೆ ಹಣ ಪಾವತಿಸಿ ಕಾಯ್ದಿರಿಸುತ್ತಾರೆ. ಆದರೆ, ಪುರಭವನದ ಮುಂದೆ ಅನೇಕ ಸಂಘ ಸಂಸ್ಥೆಗಳು ಮುಷ್ಕರ, ಪ್ರತಿಭಟನೆ ನಡೆಸುವುದರಿಂದ ಪೂರ್ವ ನಿಗದಿತ ಕಾರ್ಯ ಕ್ರಮಗಳಿಗೆ ಅಡಚಣೆ ಆಗುತ್ತಿದೆ. ಇದರಿಂದ ಪುರಭವನವನ್ನು ಕಾಯ್ದಿರಿಸಲು ಸಾರ್ವಜನಿಕರು ಹಿಂದೇಟು ಹಾಕುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪಾಲಿಕೆಗೆ ಆರ್ಥಿಕ ನಷ್ಟ ಆಗುತ್ತಿದೆ. ಹಾಗಾಗಿ ಆ ಜಾಗದಲ್ಲಿ ಪ್ರತಿಭಟನೆ ಮುಷ್ಕರ ನಡೆಸಲು ಅವಕಾಶ ನೀಡಬಾರದೆಂಬ ನಿರ್ಣಯ ಕೈಗೊಳ್ಳಲಾಗಿದೆ ಎಂದು ಹೇಳಿದರು. 

ಪ್ರತಿಭಟನೆ ಮುಷ್ಕರ ನಡೆಸಲು ಈಗಾಗಲೇ ನಗರದಲ್ಲಿ ಸ್ವಾತಂತ್ರ್ಯ ಉದ್ಯಾನ, ಮೌರ್ಯ ವೃತ್ತ ಸೇರಿದಂತೆ ಇನ್ನಿತರೆ ಸ್ಥಳಗಳು ನಿಗದಿಯಾಗಿವೆ. ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಸುವವರಿಗೆ ಕುಡಿಯುವ ನೀರು, ಶೌಚಾಲಯ ಸೇರಿದಂತೆ ಪಾಲಿಕೆಯಿಂದ ಸೂಕ್ಯ ವ್ಯವಸ್ಥೆ ಮಾಡಿಕೊಡಲಾಗುತ್ತದೆ. ಮೌರ್ಯ ವೃತ್ತದಲ್ಲೂ ಪ್ರತಿಭಟನಾಕಾರರ ಜನ ಸಂಖ್ಯೆ ಆಧರಿಸಿ ಪೊಲೀಸರು ಅನುಮತಿ ನೀಡುತ್ತಾರೆ. ಆದರೆ, ಪುರಭವನ ಮುಂಭಾಗ ಅನುಮತಿ ಸಿಗುವುದಿಲ್ಲ. ಕೌನ್ಸಿಲ್ ನಿರ್ಣಯದಂತೆ ಪುರಭವನ ಮುಂಭಾಗ ಇನ್ನು ಮುಂದೆ ಯಾವುದೇ ಪ್ರತಿಭಟನೆ, ಇನ್ನಿತರೆ ಚಟುವಟಿಕೆಗೆ ಅನುಮತಿ ನೀಡದಿರಲು ಪೊಲೀಸ್ ಆಯುಕ್ತರ ಗಮನಕ್ಕೆ ತಂದು ಆಯುಕ್ತ ಅಗತ್ಯ ಕ್ರಮ ಕೈಗೊಳ್ಳಲಿದ್ದಾರೆಂದು ತಿಳಿಸಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com