ಸುಧಾಕರ್ ಬಳಸಿದ ಷಡ್ಯಂತ್ರ ಪದದಿಂದ ಹಕ್ಕುಚ್ಯುತಿಯಾಗಿದೆ, ಅವರ ವಿರುದ್ಧ ಕ್ರಮಕೈಗೊಳ್ಳಿ: ಸಿದ್ದರಾಮಯ್ಯ ಒತ್ತಾಯ

ಸಚಿವ ಡಾ.ಕೆ ಸುಧಾಕರ್ ತಮಗೆ "ಸ್ಪೀಕರ್ ಪೀಠದಿಂದ ಅನ್ಯಾಯವಾಗಿದೆ. ಸ್ಪೀಕರ್ ಅವರು ಷಡ್ಯಂತ್ರ ಮಾಡಿದ್ದಾರೆ" ಎಂಬ ಪದ ಉಪಯೋಗಿಸಿರುವುದು ಸ್ಪೀಕರ್ ಪೀಠ, ಸದನದ ಹಕ್ಕುಚ್ಯುತಿಯಾಗಿದೆ. ಆದ್ದರಿಂದ ಅವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದರು.
ಸುಧಾಕರ್-ಸಿದ್ದರಾಮಯ್ಯ
ಸುಧಾಕರ್-ಸಿದ್ದರಾಮಯ್ಯ
Updated on: 

ಬೆಂಗಳೂರು: ಸಚಿವ ಡಾ.ಕೆ ಸುಧಾಕರ್ ತಮಗೆ "ಸ್ಪೀಕರ್ ಪೀಠದಿಂದ ಅನ್ಯಾಯವಾಗಿದೆ. ಸ್ಪೀಕರ್ ಅವರು ಷಡ್ಯಂತ್ರ ಮಾಡಿದ್ದಾರೆ" ಎಂಬ ಪದ ಉಪಯೋಗಿಸಿರುವುದು ಸ್ಪೀಕರ್ ಪೀಠ, ಸದನದ ಹಕ್ಕುಚ್ಯುತಿಯಾಗಿದೆ. ಆದ್ದರಿಂದ ಅವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದರು.

ವಿಧಾನಸಭೆಯಲ್ಲಿ ಸಂವಿಧಾನ ಕುರಿತ ವಿಶೇಷ ಅಧಿವೇಶನದ ಸಂದರ್ಭದಲ್ಲಿ ಡಾ.ಸುಧಾಕರ್ ಈ ಹೇಳಿಕೆ ನೀಡಿದ್ದರು. 
ಪ್ರಶ್ನೋತ್ತರ ಕಲಾಪದ ಬಳಿಕ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಕ್ಕುಚ್ಯುತಿ ವಿಯಷದ ಬಗ್ಗೆ ಮಾತನಾಡಿ, 17 ಮಂದಿ ಶಾಸಕರ ವಿರುದ್ಧ ಅಂದಿನ ಸ್ಪೀಕರ್ ಆಗಿದ್ದ ರಮೇಶ್ ಕುಮಾರ್ ಸಂವಿಧಾನದ 10 ಶೆಡ್ಯೂಲ್ ನ ಅಡಿಯಲ್ಲಿ ಕ್ರಮಕೈಗೊಂಡಿದ್ದಾರೆ. ಅದು ಅವರ ಜವಾಬ್ದಾರಿಯೂ ಆಗಿತ್ತು. ಅವರು ಒಬ್ಬ ವ್ಯಕ್ತಿಯಾಗಿ ತೀರ್ಪು ನೀಡಿರಲಿಲ್ಲ. ಅವರು ಸ್ಪೀಕರ್ ಸ್ಥಾನದಿಂದ ವಾದ-ವಿವಾದ ಆಲಿಸಿದ ಬಳಿಕ ತೀರ್ಪು ನೀಡಿದ್ದರು. ಆದರೆ ಇದನ್ನು ಷಡ್ಯಂತ್ರ ಎಂದು ಹೇಳುವುದು ಹಕ್ಕುಚ್ಯುತಿಯ ವ್ಯಾಪ್ತಿಗೆ ಬರುತ್ತದೆ. ಸ್ಪೀಕರ್ ಸ್ಥಾನ ಸಾಂವಿಧಾನಿಕ ಸ್ಥಾನಮಾನವಾಗಿದೆ ಎಂದರು.

ಸ್ಪೀಕರ್ ತೀರ್ಪನ್ನು ಷಡ್ಯಂತ್ರ ಎಂದು ಹೇಳಿರುವುದು ಗಂಭೀರ ವಿಷಯವಾಗಿರುವುದರಿಂದ ಅವರ ವಿರುದ್ಧ ಗಂಭೀರ ಕ್ರಮಕೈಗೊಳ್ಳಬೇಕು. ಹಕ್ಕುಚ್ಯುತಿಯ ಕುರಿತ ತಮ್ಮ ವಾದವನ್ನು ನಿಮಗೆ ಮನವರಿಕೆ ಮಾಡಿಕೊಟ್ಟಿದ್ದೇನೆ. ಸುಧಾಕರ್ ವಿರುದ್ಧ ಕಾನೂನು ಪ್ರಕಾರ ಕ್ರಮಕೈಗೊಳ್ಳಬೇಕು. ಕಾನೂನಿನಡಿ ಅವರಿಗೆ ಛೀಮಾರಿ ಹಾಕಬಹುದು, ಅಮಾನತುಗೊಳಿಸಬಹುದು, ವಜಾಗೊಳಿಸಬಹುದು ಅಥವಾ ಹಕ್ಕುಚ್ಯುತಿ ಸಮಿತಿಗೆ ಈ ವಿಷಯವನ್ನು ಕಳುಹಿಸಬಹುದು ಎಂದು ಸಿದ್ದರಾಮಯ್ಯ ವಿವರಿಸಿದರು.

ಇದಕ್ಕೂ ಮೊದಲು ಜಗದೀಶ್ ಶೆಟ್ಟರ್, ಮೊನ್ನೆ ಸದನದಲ್ಲಿ ನಡೆದ ವಿಷಯವನ್ನು ನಿಯಮ 363ರಡಿ ಕೈಗೆತ್ತಿಕೊಳ್ಳಬೇಕು ಎಂದು ಒತ್ತಾಯಿಸಿದರು. ಅದಕ್ಕೆ ಉತ್ತರಿಸಿದ ಸಿದ್ದರಾಮಯ್ಯ, ಅದಕ್ಕೆ ತಮ್ಮದೇನೂ ಅಕ್ಷೇಪವಿಲ್ಲ ಎಂದರು. 

ಕಾಂಗ್ರೆಸ್‌ನ ಕೃಷ್ಣಬೈರೇಗೌಡ ಸೇರಿದಂತೆ ಇತರ ಸದಸ್ಯರು, ಇದು ಕಲಾಪ ನುಂಗುವ ಪ್ರಯತ್ನ. ಬಿಜೆಪಿಯವರಿಗೆ ಕಲಾಪ ನಡೆಸುವ ಆಸಕ್ತಿ ಇಲ್ಲ ಎಂದು ಟೀಕಿಸಿದರು. ಮುಖ್ಯಮಂತ್ರಿ ಯಡಿಯೂರಪ್ಪ ಮಧ್ಯಪ್ರವೇಶಿಸಿ, ಹಕ್ಕುಚ್ಯುತಿ ವಿಷಯಕ್ಕೆ ಸಂಬಂಧಿಸಿ ಸಿದ್ದರಾಮಯ್ಯ ಅವರಿಗೆ ಮಾತನಾಡಲು ಸ್ಪೀಕರ್ ಅವಕಾಶ ನೀಡಿದ್ದಾರೆ. ಆದ್ದರಿಂದ ಮೊದಲು ಅವರು ಮಾತನಾಡಲಿ, ಬಳಿಕ ಇತರರಿಗೆ ಅವಕಾಶ ಸಿಗಲಿದೆ. ಇಲ್ಲಿ ಏನೆಲ್ಲಾ ನಡೆಯುತ್ತಿದೆ ಎಂಬುದು ರಾಜ್ಯದ ಆರೂವರೆ ಕೋಟಿ ಜನರಿಗೆ ತಿಳಿಯಲಿ ಎಂದು ಹೇಳಿ ಆಡಳಿತ ಪಕ್ಷದವರನ್ನು ಸುಮ್ಮನಿರುವಂತೆ ಸೂಚಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com