

ಬೆಂಗಳೂರು: ಕೊರೋನಾ ವೈರಸ್ ಲಾಕ್ ಡೌನ್ ಹಿನ್ನಲೆಯಲ್ಲಿ ಕಳೆದ 43 ದಿನಗಳಿಂದ ಮುಚ್ಚಲ್ಪಟ್ಟಿದ್ದ ಬೆಂಗಳೂರಿನ ಗಾರ್ಮೆಂಟ್ಸ್ ಗಳು ಮತ್ತೆ ಇಂದಿನಿಂದ ಪುನಾರಂಭಗೊಂಡಿವೆ,
ಕೊರೋನಾ ವೈರಸ್ ಲಾಕ್ ಡೌನ್ ನಿಯಮಾವಳಿಗಳಲ್ಲಿ ಕೇಂದ್ರ ಸರ್ಕಾರ ಆರ್ಥಿಕತೆ ಉತ್ತೇಜನಕ್ಕಾಗಿ ಕೆಲವೊಂದು ನಿಯಮಗಳನ್ನು ಸಡಿಲಗೊಳಿಸಿದ್ದು, ಅದರಂತೆ ಇಂದಿನಿಂದ ಗಾರ್ಮೆಂಟ್ಸ್ ಗಳು ಸೇರಿದಂತೆ ಖಾಸಗಿ ಕಾರ್ಖಾನೆಗಳ ಕಾರ್ಯ ಪುನಾರಂಭಗೊಂಡಿವೆ. ಗಾರ್ಮೆಂಟ್ಸ್ ಗಳಲ್ಲಿನ ಎಲ್ಲ ಕಾರ್ಮಿಕರನ್ನು ಕಡ್ಡಾಯವಾಗಿ ಥರ್ಮಲ್ ಸ್ಕ್ರೀನಿಂಗ್ ಗೆ ಒಳಪಡಿಸಿ ಗಾರ್ಮೆಂಟ್ಸ್ ಕೆಲಸಕ್ಕೆ ನಿಯೋಜನೆ ಮಾಡಲಾಗುತ್ತಿದೆ. ಅಂತೆಯೇ ಗಾರ್ಮೆಂಟ್ಸ್ ಗಳಲ್ಲಿ ಸ್ಯಾನಿಟೈಸರ್ಸ್ ಗಳ ಬಳಕೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ ಮತ್ತು ಮಾಸ್ಕ್ ಗಳನ್ನು ಕಡ್ಡಾಯಮಾಡಲಾಗಿದೆ.
ಈ ಬಗ್ಗೆ ಮಾತನಾಡಿರುವ ಗಾರ್ಮೆಂಟ್ಸ್ ಉದ್ಯೋಗಿಯೊಬ್ಬರು ನಾನು ಟೈಲರ್ ಆಗಿ ಕೆಲಸ ಮಾಡುತ್ತಿದ್ದೇನೆ. ನಮ್ಮ ಗಾರ್ಮೆಂಟ್ಸ್ ನಲ್ಲಿ ಎಲ್ಲ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕೆಲಸದ ಸ್ಥಳದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲಾಗುತ್ತಿದೆ. ಮಾಸ್ಕ್ ಮತ್ತು ಸ್ಯಾನಿಟೈಸರ್ಸ್ ಗಳ ಬಳಕೆ ಕಡ್ಡಾಯ ಮಾಡಲಾಗಿದೆ. ಗಾರ್ಮೆಂಟ್ಸ್ ಆವರಣ ಪ್ರವೇಶದ ಗೇಟ್ ನಲ್ಲಿಯೇ ಥರ್ಮಲ್ ಸ್ಕ್ರೀನ್ ಮಾಡಲಾಗುತ್ತಿದೆ. ಕೆಲಸದ ಸ್ಥಳದಲ್ಲಿ ಗಾರ್ಡ್ ಗಳು ಆಗಾಗ್ಗೆ ಬಂದು ನಿಯಮಗಳ ಪಾಲನೆಯನ್ನು ಪರಿಶೀಲಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಭಾನುವಾರವಷ್ಟೇ ಕರ್ನಾಟಕ ಸರ್ಕಾರ ಅಂತರ್ ಜಿಲ್ಲಾ ಸಂಚಾರಕ್ಕೆ ವಾಹನಗಳಿಗೆ ಅನುಮತಿ ನೀಡಿತ್ತು. ಆರ್ಥಿಕ ಚಟುವಟಿಕೆ ಉತ್ತೇಜಿಸುವ ನಿಟ್ಟಿನಲ್ಲಿ ಪಾಸ್ ಪಡೆದ ವಾಹನಗಳ ಅಂತರ್ ಜಿಲ್ಲಾ ಸಂಚಾರಕ್ಕೆ ಸರ್ಕಾರ ಅನುಮತಿ ನೀಡಿತ್ತು.