ಡ್ರಗ್ಸ್ ಪ್ರಕರಣ: ಮಹತ್ವದ ವಿಚಾರಣೆ ಬಾಕಿ ಇದೆ, ಮತ್ತಷ್ಟು ಬಂಧನ ಸಾಧ್ಯತೆ: ಗೃಹ ಸಚಿವ ಬೊಮ್ಮಾಯಿ

ಕನ್ನಡ ಚಿತ್ರರಂಗವನ್ನೇ ಬೆಚ್ಚಿ ಬೀಳಿಸಿರುವ ಡ್ರಗ್ಸ್ ಜಾಲ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದಿನವಾರ ಮಹತ್ವದ ತನಿಖೆ ನಡೆಯಲಿದ್ದು, ಮತ್ತಷ್ಟು ಬಂಧನವಾಗುವ ಸಾಧ್ಯತೆ ಇದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. 
ಗೃಹ ಸಚಿವ ಬಸವರಾಜ್ ಬೊಮ್ಮಾಯಿ
ಗೃಹ ಸಚಿವ ಬಸವರಾಜ್ ಬೊಮ್ಮಾಯಿ

ಬೆಂಗಳೂರು: ಕನ್ನಡ ಚಿತ್ರರಂಗವನ್ನೇ ಬೆಚ್ಚಿ ಬೀಳಿಸಿರುವ ಡ್ರಗ್ಸ್ ಜಾಲ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದಿನವಾರ ಮಹತ್ವದ ತನಿಖೆ ನಡೆಯಲಿದ್ದು, ಮತ್ತಷ್ಟು ಬಂಧನವಾಗುವ ಸಾಧ್ಯತೆ ಇದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. 

ಈ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈವರೆಗೂ ಒಂದು ಹಂತದ ತನಿಖೆ ಮಾತ್ರ ನಡೆದಿದೆ. ಮುಂದಿನ ವಾರದಿಂದ ಮಹತ್ವದ ತನಿಖೆ ನಡೆಯಲಿದ್ದು, ಯಾರ್ಯಾರು ಈ ಜಾಲದಲ್ಲಿ ಭಾಗಿಯಾಗಿದ್ದಾರೋ ಅವರೆಲ್ಲರ ಹೆಸರುಗಳು ಬಹಿರಂಗಗೊಳ್ಳಲಿವೆ. ಈವರೆಗೂ ನಡೆದಿರುವ ತನಿಖೆಗಿಂತ  ಮುಂದಿನ ವಾರ ನಡೆಯುವ ತನಿಖೆ ಅತ್ಯಂತ ಮಹತ್ವದ್ದು, ಯಾರ್ಯಾರು ಇದರಲ್ಲಿ ಭಾಗಿಯಾಗಿದ್ದಾರೆ ಎಂಬುದನ್ನು ನಾನು ಸದ್ಯದ ಮಟ್ಟಿಗೆ ಬಹಿರಂಗ ಪಡಿಸುವುದಿಲ್ಲ. ಏಕೆಂದರೆ ತನಿಖೆ ಪ್ರಗತಿಯಲ್ಲಿರುವುದರಿಂದ ಅದು ಬೇರೆ ರೀತಿಯ ಪರಿಣಾಮ ಬೀರುತ್ತದೆ. ಎಲ್ಲವನ್ನೂ ಮಾಧ್ಯಮಗಳ ಮುಂದೆ ಬಹಿರಂಗ  ಪಡಿಸುವುದಿಲ್ಲ. ಎಲ್ಲವೂ ನಿಮಗೆ ಗೊತ್ತಾಗಲಿದೆ ಎಂದು ಸೂಚ್ಯವಾಗಿ ಹೇಳಿದ್ದಾರೆ. ಡ್ರಗ್ಸ್ ಜಾಲ ಪ್ರಕರಣವನ್ನು ನಿಷ್ಪಕ್ಷಪಾತ ತನಿಖೆ ನಡೆಸಲು ಸಿಸಿಬಿ ಅಧಿಕಾರಿಗಳಿಗೆ ಮುಕ್ತ ಸ್ವಾಂತಂತ್ರ್ಯ ನೀಡಲಾಗಿದೆ. ಯಾರೇ ಇರಲಿ, ಎಷ್ಟೇ ಪ್ರಭಾವಿಗಳಿರಲಿ ಯಾವುದಕ್ಕೂ ಬಗ್ಗದೆ ವಿಚಾರಣೆ ನಡೆಸುವಂತೆ ಖುದ್ದು ನಾನೇ  ನಿರ್ದೇಶನ ನೀಡಿದ್ದೇನೆ ಎಂದು ಹೇಳಿದರು.

ಅಂತೆಯೇ ಇದರಲ್ಲಿ ಯಾವ ಪ್ರಭಾವವೂ ಕೆಲಸ ಮಾಡುವುದಿಲ್ಲ. ಪ್ರಕರಣ ಮುಂದಿನ ವಾರ ಅತ್ಯಂತ ಮಹತ್ವದ್ದಾಗಲಿದೆ. ಈ ವಾರದಲ್ಲಿ ತನಿಖೆ ಇನ್ನಷ್ಟು ಚುರುಕುಗೊಳ್ಳಲಿದೆ. ಮುಂದೆ ನೀವೇ ಕಾದು ನೋಡಿ ಎಂದು ಬೊಮ್ಮಾಯಿ ಹೇಳಿದರು.

ಸಿಸಿಬಿಯನ್ನು ಇನ್ನಷ್ಟು ಬಲಪಡಿಸಲು ಕ್ರಮ ಕೈಗೊಳ್ಳಲಾಗಿದೆ. ಡ್ರಗ್ಸ್ ಜಾಲ ಸೇರಿದಂತೆ ಬೇರೆ ಬೇರೆ ಪ್ರಕರಣಗಳನ್ನು ಗುಪ್ತಚರ ಇಲಾಖೆ ಸಹಕಾರದೊಂದಿಗೆ ತನಿಖೆ ನಡೆಸಲು ಸೂಚಿಸಿದ್ದೇನೆ. ಎಲ್ಲವೂ ಕೆಲವೇ ದಿನಗಳಲ್ಲಿ ತಾರ್ಕಿಕ ಅಂತ್ಯಕ್ಕೆ ಬರಲಿದೆ.

ಗಡಿಯಲ್ಲಿ ಭಿಗಿ ಭದ್ರತೆ
ಅಂತೆಯೇ ಈಗಾಗಲೇ ಗಡಿಭಾಗದ ಜಿಲ್ಲೆಗಳಲ್ಲಿರುವ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಕಳೆದ ಸಭೆಯಲ್ಲೇ ಕಟ್ಟುನಿಟ್ಟಿನ ಸೂಚನೆ ಕೊಡಲಾಗಿದ್ದು, ನಿಮ್ಮ ನಿಮ್ಮ ಜಿಲ್ಲಾ ವ್ಯಾಪ್ತಿಗಳಲ್ಲಿ ಇರುವ ಚೆಕ್‍ಪೋಸ್ಟ್ ಗಳನ್ನು ಬಿಗಿಗೊಳಿಸುವುದು, ಗಡಿ ಠಾಣೆಗಳಲ್ಲಿ ಸಿಬ್ಬಂದಿ ಹೆಚ್ಚಳ ಸೇರಿದಂತೆ ಬಿಗಿ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com