9 ಲಕ್ಷ ರೂ. ಕೊಟ್ಟರಷ್ಟೇ ಮೃತದೇಹ ಕೊಡುತ್ತೇವೆ: ಆಸ್ಪತ್ರೆಯ ದುರ್ವರ್ತನೆ ವಿರುದ್ಧ ಆಕ್ರೋಶ

ಚಿಕಿತ್ಸೆ ಫಲಕಾರಿಯಾಗದೇ ಸಾವಿಗೀಡಾದ ವ್ಯಕ್ತಿಯ ಮೃತದೇಹವನ್ನುನೀಡಲು ಚಿಕಿತ್ಸಾ ವೆಚ್ಚ ರೂ.9 ಲಕ್ಷ ಪಾವತಿಸುವಂತೆ ನಗರದ ಖಾಸಗಿ ಆಸ್ಪತ್ರೆಯೊಂದು ಬೇಡಿಕೆ ಇಟ್ಟಿರುವ ಆರೋಪಗಳು ಕೇಳಿ ಬಂದಿದ್ದು, ಆಸ್ಪತ್ರೆಯ ದುರ್ವರ್ತನೆ ವಿರುದ್ಧ ಆಕ್ರೋಶಗಳು ವ್ಯಕ್ತವಾಗತೊಡಗಿವೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಚಿಕಿತ್ಸೆ ಫಲಕಾರಿಯಾಗದೇ ಸಾವಿಗೀಡಾದ ವ್ಯಕ್ತಿಯ ಮೃತದೇಹವನ್ನುನೀಡಲು ಚಿಕಿತ್ಸಾ ವೆಚ್ಚ ರೂ.9 ಲಕ್ಷ ಪಾವತಿಸುವಂತೆ ನಗರದ ಖಾಸಗಿ ಆಸ್ಪತ್ರೆಯೊಂದು ಬೇಡಿಕೆ ಇಟ್ಟಿರುವ ಆರೋಪಗಳು ಕೇಳಿ ಬಂದಿದ್ದು, ಆಸ್ಪತ್ರೆಯ ದುರ್ವರ್ತನೆ ವಿರುದ್ಧ ಆಕ್ರೋಶಗಳು ವ್ಯಕ್ತವಾಗತೊಡಗಿವೆ. 

ನಗರದ ಆರ್'ಪಿಸಿ ಲೇಔಟ್'ನ ನಿವಾಸಿಯೊಬ್ಬರಿಗೆ ಜ್ವರ ಹಾಗೂ ಉಸಿರಾಟದ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಜು.19ರಂದು ಪರೀಕ್ಷೆಗಾಗಿ ನಗರದ ಕುಮಾರಸ್ವಾಮಿ ಲೇಔಟ್ ನಲ್ಲಿರುವ ಸಾಗರ್ ಆಸ್ಪತ್ರೆ ದಾಖಲಾಗಿದ್ದರು. ಪರೀಕ್ಷೆ ನಡೆಸಿದ್ದ ಆಸ್ಪತ್ರೆಯ ವೈದ್ಯರು ಮೂತ್ರಪಿಂಡ ಮತ್ತು ಶ್ವಾಸಕೋಶದ ಸಮಸ್ಯೆಯಿದೆ ಎಂದು ಚಿಕಿತ್ಸೆ ಮುಂದುವರೆಸಿದ್ದರು. 

ಈ ಮಧ್ಯೆ ರೋಗಿಯ ಆರೋಗ್ಯದಲ್ಲಿ ಏರುಪೇರಾಗಿದೆ ಎಂದು ತಿಳಿಸಿದ್ದ ವೈದ್ಯರು ತುರ್ತು ನಿಗಾಘಟಕದಲ್ಲಿ ಚಿಕಿತ್ಸೆ ನೀಡುತ್ತಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾದೆ ಆ.7ರಂದು ರೋಗಿಗೆ ರೋಗಿಯು ಸಾವನ್ನಪ್ಪಿದ್ದಾರೆ. ಈ ವೇಳೆ ಆಸ್ಪತ್ರೆ ಸಿಬ್ಬಂದಿ, ರೋಗಿಗೆ ಈವರೆಗೂ ಚಿಕಿತ್ಸೆ ನೀಡುವುದಕ್ಕೆ ವೆಚ್ಚವಾಗಿರುವ ರೂ.9 ಲಕ್ಷಗಳನ್ನು ಪಾವತಿ ಮಾಡಿದಲ್ಲಿ ಮಾತ್ರ ಮೃತದೇಹ ಹಸ್ತಾಂತರಿಸಲಾಗುವುದು ಎಂದು ತಿಳಿಸಿದ್ದಾರೆ. 

ಜ್ವರ ಹಾಗೂ ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ ಹಿನ್ನೆಲೆಯಲ್ಲಿ ಸಹೋದರನನ್ನು ಕುಮರಸ್ವಾಮಿ ಲೇಔಟ್ ನಲ್ಲಿರುವ ಸಾಗರ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಜು.19ರಂದು ಕೊರೋನಾ ಪಾಸಿಟಿವ್ ಬಂದಿತ್ತು. ಸಾಗರ್ ಆಸ್ಪತ್ರೆಯಲ್ಲಿಯೇ ನನ್ನ ಸಹೋದರ ಕಳೆದ 20 ವರ್ಷಗಳಿಂದ ಕ್ಯಾಷಿಯರ್ ಆಗಿ ಕೆಲಸ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಅಲ್ಲಿಯೇ ಅವರನ್ನು ದಾಖಲು ಮಾಡಲಾಗಿತ್ತು. ಆಗಸ್ಟ್ 7 ರಂದು ಆಸ್ಪತ್ರೆಯಿಂದ ದೂರವಾಣಿ ಕರೆ ಬಂದಿತ್ತು. ಈ ವೇಳೆ ಸಹೋದರ ಸಾವನ್ನಪ್ಪಿದ್ದಾರೆಂದು ಹೇಳಿದ್ದರು. ಬಳಿಕ ಮೃತದೇಹ ನೀಡುವಂತೆ ಕೇಳಿದಾಗ ಚಿಕಿತ್ಸಾ ವೆಚ್ಚ ರೂ.8.96 ಲಕ್ಷ ನೀಡುವಂತೆ ತಿಳಿಸಿದರು. ವಿಮಾ ಹಣ ರೂ.1.84 ಲಕ್ಷ ಬಿಡುಗಡೆಯಾಗಿದ್ದು, ರೂ.1 ಲಕ್ಷ ನಾವು ನೀಡಿದ್ದೆವು. ಆದರು, ಆಸ್ಪತ್ರೆಯವರು ಮೃತದೇಹ ನೀಡಿಲ್ಲ. 2 ದಿನಗಳಿಂದ ಮೃತ ದೇಹಕ್ಕಾಗಿ ಆಸ್ಪತ್ರೆಯ ಮುಂದೆ ಕಾಯುತ್ತಿದ್ದೇವೆಂದು ಮೃತ ವ್ಯಕ್ತಿಯ ಹಿರಿಯ ಸಹೋದರ ಶ್ರೀನಿವಾಸ್ ಅವರು ಹೇಳಿದ್ದಾರೆ. 

ಇದೀಗ ನಾವು ಮಾಧ್ಯಮದವರನ್ನು ಸಂಪರ್ಕಸಿದ್ದು, ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಅವರಿಗೆ ಮಾಹಿತಿ ನೀಡಲಾಗಿದೆ. ಸಚಿವರು ಆಸ್ಪತ್ರೆಯ ಆಡಳಿತ ಮಂಡಳಿಯೊಂದಿಗೆ ಮಾತುಕತೆ ನಡೆಸಿದ್ದು, ಇದೀಗ ಮೃತದೇಹ ನೀಡಿದ್ದಾರೆ. ಭಾನುವಾರ ಸಂಜೆ 5 ಗಂಟೆ ಸುಮಾರಿಗೆ ಮೃತದೇಹ ಹಸ್ತಾಂತರಿಸಿದ್ದರು. ನಾನು ಅಂಗವಿಕಲನಾಗಿದ್ದು, ಮನೆಯಲ್ಲಿ ನನ್ನ ಸಹೋದರನೊಬ್ಬನೇ ದುಡಿದು ಎಲ್ಲರನ್ನೂ ನೋಡಿಕೊಳ್ಳುತ್ತಿದ್ದ ಎಂದು ತಿಳಿಸಿದ್ದಾರೆ. 

ರೋಗಿಗೆ ಆಕ್ಸಿಜನ್ ನೀಡಲಾಗಿತ್ತು. ಆಗಸ್ಟ್ 7 ರಂದು ವ್ಯಕ್ತಿ ಮೃತಪಟ್ಟಿದ್ದರು. ಬಳಿಕ ಕುಟುಂಬಸ್ಥರನ್ನು ಸುದೀರ್ಘವಾಗಿ ಸಂಪರ್ಕಿಸುವ ಕಾರ್ಯ ನಡೆದಿತ್ತು ಎಂದು ಸಾಗರ್ ಆಸ್ಪತ್ರೆಯ ನಿರ್ದೇಶಕ ಡಾ.ವೆಂಕಟೇಶ್ ವಿಕ್ರಮ್ ಅವರು ಹೇಳಿದ್ದಾರೆ. 

ಆಗಸ್ಟ್ 7 ರಂದು ವ್ಯಕ್ತಿ ಮೃತಪಟ್ಟ ಬಳಿಕ ಕುಟುಂಬಸ್ಥರಾರೂ ಮೃತದೇಹ ತೆಗೆದುಕೊಂಡು ಹೋಗಲು ಬರಲಿಲ್ಲ. ಕುಟುಂಬಸ್ಥರ ಸಂಪರ್ಕಿಸಲು ಸಾಕಷ್ಟು ಬಾರಿ ಯತ್ನ ನಡೆಸಿದೆವು. ಬಳಿಕ ಬಿಬಿಎಂಪಿ, ಆರೋಗ್ಯಾಧಿಕಾರಿಗಳು ಹಾಗೂ ಪೊಲೀಸರಿಗೆ ಮಾಹಿತಿ ನೀಡಿದೆವು. ಕುಟುಂಬಸ್ಥರು ರೂ.1 ಲಕ್ಷ ನೀಡಿದರೂ ಕೂಡ ಬಿಲ್ ಮೊತ್ತ ಕಟ್ಟಿದ ಬಳಿಕವೇ ಮೃತದೇಹ ತೆಗೆದುಕೊಂಡು ಹೋಗುವಂತೆ ನಾವು ತಿಳಿಸಿಲ್ಲ ಎಂದು ತಿಳಿಸಿದ್ದಾರೆ. 

ಹಣ ಪಾವತಿ ಮಾಡಿದ ಬಳಿಕ ಮೃತದೇಹ ಕೊಂಡೊಯ್ಯುವಂತೆ ಹೇಳಿ ಕುಟುಂಬವನ್ನು ಹಿಂಸಿಸುವುದು ಖಂಡನೀಯ. ಖಾಸಗಿ ಆಸ್ಪತ್ರೆಗಳಿಗೆ ಹಣ ಸಂಪಾದಿಸುವುದು ಮಾನದಂಡವಾಗಿರಬಾರದು. ಪ್ರಕರಣ ಸಂಬಂಧ ಆಸ್ಪತ್ರೆಯೊಂದಿಗೆ ಮಾತನಾಡುತ್ತೇನೆ. ಕುಟುಂಬಕ್ಕೆ ನ್ಯಾಯ ಒದಗಿಸಲಾಗುವುದು ಎಂದು ಸಚಿವ ಸುಧಾಕರ್ ಅವರು ಟ್ವೀಟ್ ಮಾಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com