ಒಂದು ವರ್ಷದಲ್ಲಿ ಬೆಂಗಳೂರು ನಗರದ ಚಿತ್ರಣ ಬದಲಾವಣೆ: ಮುಖ್ಯಮಂತ್ರಿ ಯಡಿಯೂರಪ್ಪ

ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ರಾಜ್ಯ ಸರ್ಕಾರ ಬದ್ಧವಾಗಿದ್ದು, ಒಂದು ವರ್ಷದಲ್ಲಿ ಬೆಂಗಳೂರು ನಗರದ ಚಿತ್ರಣವನ್ನೇ ಬದಲಾಯಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
ಯಡಿಯೂರಪ್ಪ
ಯಡಿಯೂರಪ್ಪ

ಬೆಂಗಳೂರು: ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ರಾಜ್ಯ ಸರ್ಕಾರ ಬದ್ಧವಾಗಿದ್ದು, ಒಂದು ವರ್ಷದಲ್ಲಿ ಬೆಂಗಳೂರು ನಗರದ ಚಿತ್ರಣವನ್ನೇ ಬದಲಾಯಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ರಾಜ್ಯ ಮತ್ತು ರಾಷ್ಟ್ರದಲ್ಲಿ ದಿನೇ ದಿನೇ ತನ್ನ ಸಾಧನೆಯನ್ನು ಉತ್ತಮಗೊಳಿಸುತ್ತಾ ಮುನ್ನಡೆಯುತ್ತಿದೆ. ಪ್ರಸ್ತುತ ರಾಜ್ಯದಲ್ಲಿ ನಡೆದ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಶೇಕಡಾ 60ಕ್ಕಿಂತ ಹೆಚ್ಚಿನ ಸ್ಥಾನ ಗಳಿಸಿದ್ದಾರೆ. ಇದಕ್ಕೆ ಪಕ್ಷದ ಸಾಮೂಹಿಕ ನಾಯಕತ್ವ ಮತ್ತು ಕಾರ್ಯಕರ್ತರು ಕಾರಣ ಎಂದು ಅವರು ಹೇಳಿದರು.

5728 ಗ್ರಾಂ ಪಂಚಾಯತ್ ಗಳ ಪೈಕಿ ಅತಿಹೆಚ್ಚು ಗ್ರಾಮ 3800 ಗ್ರಾಮ ಪಂಚಾಯತ್ ಗಳಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಜಯಗಳಿಸಿದ್ದಾರೆ. ಇದು ದೊಡ್ಡ ಸಾಧನೆಯಾಗಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಎನ್ ಡಿಎ ಸರ್ಕಾರ 2022ರ ವೇಳೆ ರೈತರ ಆದಾಯ ದ್ವಿಗುಣಗೊಳಿಸುವ ಉದ್ದೇಶ ಹೊಂದಿದೆ. ರೈತರ ಶ್ರೆಯೋಭಿವೃದ್ಧಿಗಾಗಿ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದು ರೈತರು ತಮ್ಮ ಉತ್ಪನ್ನಗಳನ್ನು ಎಲ್ಲಿ ಬೇಕಾದರು ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗಿದೆ. ಎಂಎಸ್ ಪಿ ವ್ಯವಸ್ಥೆ ಮುಂದುವರಿಯುತ್ತದೆ. ಈ ಬಗ್ಗೆ ಯಾರೂ ಆತಂಕ ಪಡುವ ಅಗತ್ಯವಿಲ್ಲ ಎಂದು ಹೇಳಿದರು.

ಚೈನಾ ಮತ್ತು ಅಮೆರಿಕದಂತಹ ಮುಂದುವರಿದ ದೇಶಗಳೊಂದಿಗೆ ಸ್ಪರ್ಧಿಸಲು ನಮ್ಮ ಹಳೆಯ ಕಾನೂನುಗಳಿಗೆ ತಿದ್ದುಪಡಿ ತರುವುದು ಅಗತ್ಯವಾಗಿದೆ. ವಿರೋಧ ಪಕ್ಷದ ನಾಯಕರು ಅನಗತ್ಯವಾಗಿ ಟೀಕೆ ಮಾಡುವ ಮೂಲಕ ರೈತರನ್ನು ದಾರಿತಪ್ಪಿಸುವ, ಪ್ರಗತಿಗೆ ಅಡ್ಡಿಪಡಿಸುವ ಕೆಲಸ ಮಾಡುತ್ತಿವೆ. ಪ್ರಧಾನಿ ರೂಪಿಸಿದ ದೂರದೃಷ್ಟಿಯ ಕಾರ್ಯಕ್ರಮಗಳಾದ ಕಿಸಾನ್ ಯೋಜನೆ, ಜಲಜೀವನ್ ಮಿಷನ್, ಮಾಸಿಕ ಪಿಂಚಣಿ, ಬೇಟಿ ಬಚಾವೋ ಬೇಟಿ ಪಡಾವೋ, ಉಜ್ವಲ ಮುಂತಾದ ಯೋಜನೆಗಳನ್ನು ಟೀಕಿಸಲು ಸಾಧ್ಯವಿಲ್ಲ. ಇವೆಲ್ಲವನ್ನು ರೈತರು ಅರ್ಥ ಮಾಡಿಕೊಂಡು ಧರಣಿ ಕೈಬಿಟ್ಟು ಮಾತುಕತೆಗೆ ಮುಂದೆ ಬರಬೇಕು ಎಂದು ಮನವಿ ಮಾಡಿದರು.

ರಾಜ್ಯದಲ್ಲಿ ಈ ಎಲ್ಲಾ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಜಾರಿಗೊಳಿಸಲು ಬದ್ದವಾಗಿದೆ. ದೇಶಾದ್ಯಂತ ನಡೆದ ಎಲ್ಲಾ ಉಪ ಚುನಾವಣೆ, ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಬಿಜೆಪಿ ಉತ್ತಮ ಸಾಧನೆ ಮಾಡಿರುವುದು ಪ್ರಧಾನಿಯವರ ಸ್ಫೂರ್ತಿದಾಯಕ ನಾಯಕತ್ವ ಕಾರಣ ಎಂದು ಬಣ್ಣಿಸಿದ ಮುಖ್ಯಮಂತ್ರಿ, ಕೊರೊನಾದಂತಹ ಸಾಂಕ್ರಾಮಿಕದ ನಡುವೆಯೂ ಪ್ರಗತಿ ಚಕ್ರ ಸರಾಗವಾಗಿ ಮುನ್ನಡೆಯುವಂತೆ ನೋಡಿಕೊಳ್ಳಲಾಗುತ್ತಿದೆ. ಪ್ರಧಾನಿಯವರ ಮಾರ್ಗದರ್ಶನದಲ್ಲಿ ಇಡೀ ದೇಶದಲ್ಲಿ ಕೋವಿಡ್-19 ಅನ್ನು ಯಶಸ್ವಿಯಾಗಿ ನಿಯಂತ್ರಿಸಲಾಗಿದೆ. ರಾಜ್ಯದಲ್ಲೂ ನಮ್ಮ ಸರ್ಕಾರ ಈ ಸೋಂಕು ನಿಯಂತ್ರಣಕ್ಕೆ ಕ್ರಮಕೈಗೊಂಡಿದ. ಲಾಕ್ ಡೌನ್ ಸಂದರ್ಭದಲ್ಲಿ ಸಂಕಷ್ಟಕ್ಕೊಳಗಾದವರಿಗೆ ಪರಿಹಾರ ನೀಡುವ ಮೂಲಕ ಅವರ ಹಿತಾಸಕ್ತಿ ಕಾಪಾಡಲಾಗಿದೆ. ವಿದೇಶ ನೇರ ಬಂಡವಾಳ ಹೂಡಿಕೆಯಲ್ಲಿ ನಮ್ಮ ರಾಜ್ಯ ಮೊದಲ ಸ್ಥಾನದಲ್ಲಿದೆ. 1.54 ಲಕ್ಷ ಕೋಟಿ ರೂ.ಮೊತ್ತದ 95 ಹೂಡಿಕೆ ಪ್ರಸ್ತಾವನೆಗಳು ರಾಜ್ಯಕ್ಕೆ ಬಂದಿದ್ದು, ಕೆಲವು ಕೆಲಸ ಕಾರ್ಯ ಆರಂಭಿಸಿವೆ ಎಂದರು.

ಬಡವರಲ್ಲಿ ಬಡವರ ಆರ್ಥಿಕ ನೆರವು ನೀಡುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆ, ಬೆಂಗಳೂರು ನಗರದ ರಾಜಸ್ವ ಕಾಪಾಡಿಕೊಂಡು ವ್ಯಾಪಾರ ವಹಿವಾಟು ಸುಗಮವಾಗಿ ನಡೆಯಲು ಬೆಂಗಳೂರು ಮಿಷನ್ ಯೋಜನೆ ರೂಪಿಸಲಾಗಿದೆ. ಒಂದು ವರ್ಷದ ಒಳಗಾಗಿ ಬೆಂಗಳೂರು ನಗರದ ಚಿತ್ರಣವನ್ನೇ ಬದಲಾಯಿಸುವ ಕೆಲಸ ಮುಂದಿನ ತಿಂಗಳಲ್ಲೇ ಆರಂಭವಾಗಲಿದೆ. ನಗರವನ್ನು ದೇಶದಲ್ಲಿ ಮಾದರಿ ರಾಜ್ಯವಾಗಿ ರೂಪಿಸಲಾಗುವುದು. ಇದಕ್ಕಾಗಿ ಕಾರ್ಯಕ್ರಮ ರೂಪಿಸಿ ಹಣ ಬಿಡುಗಡೆ ಮಾಡಲಾಗುತ್ತಿದೆ. ರಾಜ್ಯವನ್ನು ಮೊದಲ ಸ್ಥಾನಕ್ಕೆ ಕೊಂಡೊಯ್ಯಲು ನಮ್ಮ ಸರ್ಕಾರ ಕೆಲಸ ಮಾಡಲಿದೆ. ಅತಿವೃಷ್ಟಿ, ಕೋವಿಡ್, ಪ್ರವಾಹದಂತಹ ಅಗ್ನಿ ಪ್ರವೇಶವನ್ನು ಜಯಿಸಿದ್ದೇವೆ. ಸಮಗ್ರ ಕರ್ನಾಟಕ ನಿರ್ಮಾಣಕ್ಕೆ ಸರ್ಕಾರ ಶ್ರಮವಹಿಸಲಿದೆ ಎಂದು ಮುಖ್ಯಮಂತ್ರಿ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com