ವಿದೇಶಿ ಉದ್ಯೋಗ ಆಮಿಷ ತೋರಿಸಿ ಟೆಕ್ಕಿಯಿಂದ ರೂ.37 ಲಕ್ಷ ದೋಚಿದ ಸೈಬರ್ ಖದೀಮರು!

ಸೈಬರ್ ಖದೀಮರು ತೋರಿಸಿದ ವಿದೇಶಿ ಉದ್ಯೋಗದ ಆಮಿಷಕ್ಕೆ ಒಳಗಾಗಿ ಸಾಫ್ಟ್ ಎಂಜಿನಿಯರ್ ಒಬ್ಬರೂ ರೂ.37 ಲಕ್ಷ ಕಳೆದುಕೊಂಡಿರುವ ಘಟನೆ ನಗರದ ಮಾಗಡಿ ರಸ್ತೆಯಲ್ಲಿ ನಡೆದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಸೈಬರ್ ಖದೀಮರು ತೋರಿಸಿದ ವಿದೇಶಿ ಉದ್ಯೋಗದ ಆಮಿಷಕ್ಕೆ ಒಳಗಾಗಿ ಸಾಫ್ಟ್ ಎಂಜಿನಿಯರ್ ಒಬ್ಬರೂ ರೂ.37 ಲಕ್ಷ ಕಳೆದುಕೊಂಡಿರುವ ಘಟನೆ ನಗರದ ಮಾಗಡಿ ರಸ್ತೆಯಲ್ಲಿ ನಡೆದಿದೆ. 

ಮೋಹನ್ ರಾವ್ (34) (ಹೆಸರು ಬದಲಿಸಲಾಗಿದೆ) ಹಣ ಕಳೆದಕೊಂಡ ಟೆಕ್ಕಿಯಾಗಿದ್ದಾರೆ. ವಿದೇಶಿ ಉದ್ಯೋಗ ಕೊಡಿಸುವ ಆಸೆ ತೋರಿಸಿರುವ ಸೈಬರ್ ಖದೀಮರು, ಉದ್ಯೋಗ ದೊರಕಿರುವುದರಿಂದ ಉಳಿದುಕೊಳ್ಳಲು ಮನೆ ಹಾಗೂ ಇತರೆ ವ್ಯವಸ್ಥೆಗಳನ್ನು ಮಾಡುವ ಅಗತ್ಯತೆ ಇರುವುದರಿಂದ ರೂ.25 ಲಕ್ಷ ನೀಡುವಂತೆ ತಿಳಿಸಿದ್ದಾರೆ. ಇದರಂತೆ ಆಮಿಷಕ್ಕೊಳಗಾದ ಮೋಹನ್ ಅವರು ಬ್ಯಾಂಕ್ ಖಾತೆ ಮೂಲಕ ಹಣವನ್ನು ರವಾನೆ ಮಾಡಿದ್ದಾರೆ. ಇದಾದ ಬಳಿಕ ಮೋಹನ್ ಅವರಿಗೆ ಯಾವುದೇ ರೀತಿಯ ಕರೆಗಳಾಗಲೀ, ಸಂದೇಶಗಳಾಗಲೀ ಬಂದಿಲ್ಲ. 

ಕೆಲ ದಿನಗಳ ಬಳಿಕ ಯಾವುದೇ ಪ್ರತಿಕ್ರಿಯೆಗಳು ಬರದಿದ್ದಾಗ ವಂಚನೆಯಾಗಿದೆ ಎಂಬುದು ಮೋಹನ್ ಅವರಿಗೆ ಖಾತರಿಯಾಗಿದೆ. ಬಳಿಕ ಮೋಹನ್ ಅವರು, ಸೈಬರ್ ಕ್ರೈಂ ಪೊಲೀಸರಿಗ ದೂರು ನೀಡುವ ಬದಲಾಗಿ ಆನ್ ಲೈನ್ ಮೂಲಕ ಖದೀಮರನ್ನು ಹುಡುಕುವ ಪ್ರಯತ್ನಕ್ಕೆ ಮುಂದಾಗಿದ್ದಾರೆ. 

ಇದರಂತೆ ಡಾರ್ಕ್ ನೆಟ್ ಮೂಲಕ ಖದೀಮರನ್ನು ಕಂಡು ಹಿಡಿಯುವ ಪ್ರಯತ್ನ ಮಾಡಿದ್ದಾರೆ. ಈ ವೇಳೆ ಲೂಸಿ ಎಂಬ ಮಹಿಳೆಯ ಪರಿಚಯವಾಗಿದ್ದು, ಮಹಿಳೆ ಸಹಾಯ ಮಾಡುವುದಾಗಿ ತಿಳಿಸಿ, ಆಪ್ತಳಂತೆ ಮಾತನಾಡಿದ್ದಾಳೆ. ಇದರಂತೆ ಮಹಿಳೆ ರೂ.12 ಲಕ್ಷ ತನ್ನ ಖಾತೆಗೆ ಹಾಕಿದರೆ, ರೂ.25 ಲಕ್ಷವನ್ನು ಖದೀಮರಿಂದ ಸುಲಭವಾಗಿ ಪಡೆದುಕೊಳ್ಳಬಹುದು ಎಂದು ಮೋಹನ್ ಅವರನ್ನು ನಂಬಿಸಿದ್ದಾಳೆ. ಮಹಿಳೆ ಆಪ್ತಳಂತೆ ಮಾತನಾಡಿದ್ದ ಹಿನ್ನೆಲೆಯಲ್ಲಿ ಮಾತುಗಳನ್ನು ನಂಬಿದ್ದ ಮೋಹನ್ ಅವರು ಪತ್ನಿಗೆ ತಿಳಿಯದಂತೆ ಮನೆ ಮಾರಾಟ ಮಾಡಿ ರೂ.12 ಲಕ್ಷವನ್ನು ಲೂಸಿ ಖಾತೆಗೆ ಹಾಕಿದ್ದಾರೆ. ಬಳಿಕ ಮಹಿಳೆ ಸಂಪರ್ಕಕ್ಕೆ ಸಿಕ್ಕಿಲ್ಲ. 

ಈ ನಡುವೆ ಅಪರಿಚಿತ ಮಹಿಳೆಯೊಂದಿಗೆ ಮೋಹನ್ ಅವರು ಆಪ್ತನಂತೆ ನಡೆಸಿರುವ ಮಾತುಕತೆಗಳು ಪತ್ನಿಗೆ ತಿಳಿದಿದೆ. ಇದರಿಂದ ಆಕ್ರೋಶಗೊಂಡಿರುವ ಮೋಹನ್ ಅವರ ಪತ್ನಿ, ತಮ್ಮ 6 ತಿಂಗಳ ಮಗುವನ್ನು ಎತ್ತಿಕೊಂಡು ಮನೆ ಬಿಟ್ಟು ಹೋಗಿದ್ದಾರೆ. ಅಲ್ಲದೆ, ಪತಿಗೆ ವಿಚ್ಛೇದನ ನೀಡಲು ನಿರ್ಧರಿಸಿದ್ದಾರೆ. ಇದೀಗ ವಿಚ್ಛೇದನ ಅರ್ಜಿ ವಿಚಾರಣೆಯಲ್ಲಿದೆ. ಇದೀಗ ಮೋಹನ್ ಅವರು ಪ್ರಕರಣ ಸಂಬಂಧ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com