ಇಲ್ಲೇ ಇದ್ದರೆ, ಬೇರೆ ರೋಗ ಬರುವ ಸಾಧ್ಯತೆ ಇದೆ. ದಯವಿಟ್ಟು ನನ್ನನ್ನು ಅಥಣಿಗೆ ಸ್ಥಳಾಂತರಿಸಿ: ಸರ್ಕಾರಿ ಆಸ್ಪತ್ರೆ ದುಃಸ್ಥಿತಿ ಕಂಡು ಸೋಂಕಿತ ವ್ಯಕ್ತಿ ಆತಂಕ

ಇಲ್ಲೇ ಇದ್ದರೆ, ನನಗೆ ಬೇರೆ ರೋಗಗಳು ಬರುವ ಸಾಧ್ಯತೆಗಳಿವೆ. ದಯವಿಟ್ಟು ನನ್ನನ್ನು ನನ್ನೂರು ಅಥಣಿಗೆ ಸ್ಥಳಾಂತರಿಸಿ ಎಂದು ಸೋಂಕಿತ ವ್ಯಕ್ತಿಯೊಬ್ಬ ಕೋವಿಡ್ ಆಸ್ಪತ್ರೆಯಾಗಿ ಮಾರ್ಪಟ್ಟಿರುವ ಜಿಲ್ಲಾಸ್ಪತ್ರೆಯ ದುಃಸ್ಥಿತಿ ಕಂಡು ಆತಂಕ ಹೊರಹಾಕಿದ್ದು, ಆಸ್ಪತ್ರೆಯಲ್ಲಿನ ಅವ್ಯವಸ್ಥೆ ಕುರಿತ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಳಗಾವಿ: ಇಲ್ಲೇ ಇದ್ದರೆ, ನನಗೆ ಬೇರೆ ರೋಗಗಳು ಬರುವ ಸಾಧ್ಯತೆಗಳಿವೆ. ದಯವಿಟ್ಟು ನನ್ನನ್ನು ನನ್ನೂರು ಅಥಣಿಗೆ ಸ್ಥಳಾಂತರಿಸಿ ಎಂದು ಸೋಂಕಿತ ವ್ಯಕ್ತಿಯೊಬ್ಬ ಕೋವಿಡ್ ಆಸ್ಪತ್ರೆಯಾಗಿ ಮಾರ್ಪಟ್ಟಿರುವ ಜಿಲ್ಲಾಸ್ಪತ್ರೆಯ ದುಃಸ್ಥಿತಿ ಕಂಡು ಆತಂಕ ಹೊರಹಾಕಿದ್ದು, ಆಸ್ಪತ್ರೆಯಲ್ಲಿನ ಅವ್ಯವಸ್ಥೆ ಕುರಿತ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. 

ಜಿಲ್ಲಾಸ್ಪತ್ರೆಗೆ ದಾಖಲಾಗಿರುವ ಅಥಣಿ ತಾಲೂಕಿನ ಸೋಂಕಿತ ವ್ಯಕ್ತಿಯೊಬ್ಬ ಫೋಟೋಗಳನ್ನು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಅಪ್ಲೋಡ್ ಮಾಡಿದ್ದಾರೆ. 

ಬಿಮ್ಸ್ ವಾರ್ಡಿನ ದುಃಸ್ಥಿತಿ, ಇಲ್ಲಿನ ಪರಿಸ್ಥಿತಿ ನೋಡಿದರೆ ನನಗೆ ಬೇರೆ ರೋಗಗಳು ಬರುವ ಸಾಧ್ಯತೆಗಳಿವೆ. ದಯವಿಟ್ಟು ನನ್ನನ್ನು ಅಥಣಿಗೆ ಸ್ಥಳಾಂತರಿಸಿ ಎಂದು ಮನವಿ ಮಾಡಿಕೊಂಡಿರುವುದು ಕಂಡು ಬಂದಿದೆ. 

ಫೋಟೋಗಳಲ್ಲಿ ಮುರಿದುಹೋಗಿರುವ ಕಿಟಕಿಗಳು, ಮಲಗಲು ಯೋಗ್ಯವಾಗಿರದ ಹಾಸಿಗೆಗಳು, ಸ್ವಚ್ಛತೆ ಇಲ್ಲದಿರುವುದು ಕಂಡು ಬಂದಿದೆ. ಈ ಫೋಟೋಗಳನ್ನು ವ್ಯಕ್ತಿ ಆರೋಗ್ಯ ಸಚಿವರು ಹಾಗೂ ಉಪ ಮುಖ್ಯಮಂತ್ರಿಗಳಿಗೆ ಟ್ಯಾಗ್ ಮಾಡಿದ್ದಾರೆ. 

ಈ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದ 65 ವರ್ಷದ ಸೋಂಕಿತ ವ್ಯಕ್ತಿಯೊಬ್ಬ ಹೊಟ್ಟೆ ನೋವು ತಾಳಲಾರದೆ, ನರಳಾಡಿ ಸಾವನ್ನಪ್ಪಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಆಸ್ಪತ್ರೆಯ ನಿರ್ಲಕ್ಷ್ಯದ ವಿರುದ್ಧ ಹಲವರು ಟೀಕೆಗಳನ್ನು ಮಾಡಿದ್ದರು. 

ಮತ್ತೊಂದೆಡೆ ಆಸ್ಪತ್ರೆಯ ಸಿಬ್ಬಂದಿಗಳ ನಿರ್ಲಕ್ಷ್ಯ ಕುರಿತಂತೆಯೂ ಟೀಕೆಗಳು ವ್ಯಕ್ತವಾಗತೊಡಗಿವೆ. ವ್ಯಕ್ತಿಯೊಬ್ಬರು ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡು ಬೇಸರ ವ್ಯಕ್ತಪಡಿಸಿದ್ದಾರೆ. 

ನನ್ನ ಸಂಬಂಧಿಕರೊಬ್ಬರು ಬಿಮ್ಸ್ ಕೋವಿಡ್ ವಾರ್ಡ್ ನಲ್ಲಿ ದಾಖಲಾಗಿದ್ದರು. ಮಧುಮೇಹ ಇದ್ದ ಕಾರಣ ಇನ್ಸುಲಿನ್ ನೀಡುವಂತೆ ಹಾಗೂ ಮಧುಮೇಹ ಪರಿಶೀಲಿಸುವಂತೆ ನರ್ಸ್ ಒಬ್ಬರಿಗೆ ತಿಳಿಸಲಾಗಿತ್ತು. ಇದಕ್ಕೆ ನಿರಾಕರಿಸಿದ ಅವರು, ಆಸ್ಪತ್ರೆಯಲ್ಲಿ ರೋಗಿಗಳ ಮಧುಮೇಹ ಪರಿಶೀಲಿಸುವ ವ್ಯವಸ್ಥೆಗಳಿಲ್ಲ. ಪ್ರತೀ ವಾರ್ಡ್ ನಲ್ಲಿಯೂ 100 ರೋಗಿಗಳಿದ್ದು, ಪ್ರತೀಯೊಬ್ಬರನ್ನು ಪ್ರತ್ಯೇಕವಾಗಿ ನೋಡಿಕೊಳ್ಳಲು ಸಾಧ್ಯವಿಲ್ಲ. ಸೋಂಕಿತ ವ್ಯಕ್ತಿಗಳ ಶೌಚಾಲಯ, ಆಹಾರ ಹಾಗೂ ಇತರೆ ವ್ಯವಸ್ಥೆಗಳನ್ನು ನೀವೇ ನೋಡಿಕೊಳ್ಳಬೇಕೆಂದು ತಿಳಿಸಿದರು ಎಂದು ಹೇಳಿದ್ದಾರೆ. 

ಆರೋಪಗಳ ಬಗ್ಗೆ ಹೇಳಿಕೆ ನೀಡಿರುವ ಬಿಮ್ಸ್ ನಿರ್ದೇಶಕ ವಿನಯ್ ಅವರು, ಪ್ರತೀಯೊಬ್ಬ ಸೋಂಕಿತ ವ್ಯಕ್ತಿಯನ್ನು ನೋಡಿಕೊಳ್ಳಲು ಆಸ್ಪತ್ರೆಯಲ್ಲಿ ಸಾಕಷ್ಟು ಸಿಬ್ಬಂದಿಗಳಿದ್ದಾರೆ. ಸೋಂಕಿತ ವ್ಯಕ್ತಿಗಳು ನೋಡಿಕೊಳ್ಳಲು ವ್ಯಕ್ತಿಯೊಬ್ಬರನ್ನು ಇಟ್ಟುಕೊಳ್ಳುವಂತೆ ನಾವು ಯಾರಿಗೂ ತಿಳಿಸಿಲ್ಲ. ಮಕ್ಕಳು ಇದ್ದರೆ ಮಾತ್ರ ಅಂಟೆಂಡರ್ ಗಳಿರಬೇಕೆಂದು ಹೇಳುತ್ತೇವೆ. ಕೊರೋನಾ ಸೋಂಕಿತರಿಗೆ ಪರಿಣಾಮಕಾರಿಯಾಗಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ. 

ಉಪ ಆಯುಕ್ತ ಎಂ.ಜಿ ಹಿರೇಮಠ್ ಅವರು ಮಾತನಾಡಿ, ಬೆಳಗಾವಿಯ 10 ತಾಲೂಕುಗಳಲ್ಲಿ ಕೋವಿಡ್ ಕೇರ್ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಇಲ್ಲಿ ಲಕ್ಷಣ ರಹಿತ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಗಂಭೀರ ಹಾಗೂ ಲಕ್ಷಣ ಇರುವಂತಹ ರೋಗಿಗಳನ್ನು ಮಾತ್ರ ಬಿಮ್ಸ್'ಗೆ ಸ್ಥಳಾಂತರಿಸಲಾಗುತ್ತಿದೆ. ಸೋಂಕಿತರಿಗೆ ಚಿಕಿತ್ಸೆ ನೀಡಲು ಬೆಳಗಾವಿಯ ಕೆಎಲ್ಇ ಹಾಗೂ ಇಎಸ್ಐ ಆಸ್ಪತ್ರೆಗಳಲ್ಲೂ ವ್ಯವಸ್ಥೆ ಕಲ್ಪಿಸಲಾಗುತ್ತಿದೆ ಎಂದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com