ಕೊರೋನಾ, ಹಕ್ಕಿಜ್ವರ, ಮಂಗನಕಾಯಿಲೆದಂತಹ ಸಾಂಕ್ರಾಮಿಕ ಕಾಯಿಲೆ ತಡೆಗೆ ಕ್ರಮ; ಸಿಎಂ ಬಿಎಸ್ ವೈ

ರಾಜ್ಯದಲ್ಲಿ ಹಂದಿಜ್ವರ, ಹಕ್ಕಿ ಜ್ವರ, ಮಂಗನ ಕಾಯಿಲೆ, ಕೊರೋನಾ ಸೋಂಕಿನಂತಹ ಮಾರಕ ಕಾಯಿಲೆಗಳು ಹರಡದಂತೆ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ವಿಧಾನಸಭೆಗೆ ಬುಧವಾರ ಭರವಸೆ ನೀಡಿದರು. 
ಸಿಎಂ ಯಡಿಯೂರಪ್ಪ (ಸಂಗ್ರಹ ಚಿತ್ರ)
ಸಿಎಂ ಯಡಿಯೂರಪ್ಪ (ಸಂಗ್ರಹ ಚಿತ್ರ)

ಬೆಂಗಳೂರು: ರಾಜ್ಯದಲ್ಲಿ ಹಂದಿಜ್ವರ, ಹಕ್ಕಿ ಜ್ವರ, ಮಂಗನ ಕಾಯಿಲೆ, ಕೊರೋನಾ ಸೋಂಕಿನಂತಹ ಮಾರಕ ಕಾಯಿಲೆಗಳು ಹರಡದಂತೆ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ವಿಧಾನಸಭೆಗೆ ಬುಧವಾರ ಭರವಸೆ ನೀಡಿದರು. 

ಶೂನ್ಯವೇಳೆಯ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು, ಸರ್ಕಾರ ಈ ಕಾಯಿಲೆಗಳನ್ನು ತಡೆಯಲು ತೆಗೆದುಕೊಂಡಿರುವ ಕ್ರಮಗಳೇನು? ಇಲ್ಲಿಯವರೆಗೆ ಎಷ್ಟು ಜನರಿಗೆ ತೊಂದರೆಯಾಗಿದೆ. ಎಲ್ಲೆಲ್ಲಿ ಚಿಕಿತ್ಸೆ ಲಭ್ಯವಿದೆ ? ಹಕ್ಕಿ ಜ್ವರ ಕಾಣಿಸಿಕೊಂಡಲ್ಲಿ ಎಷ್ಟು ಕೋಳಿಗಳನ್ನು ನಾಶ ಮಾಡಲಾಗಿದೆ ಎಂಬುದರ ಕುರಿತು ಮಾಹಿತಿ ನೀಡಬೇಕು ಎಂದು ಒತ್ತಾಯಿಸಿದರು. 

ಇದಕ್ಕೆ ಉತ್ತರಿಸಿದ ಯಡಿಯೂರಪ್ಪ, ರಾಜ್ಯದಲ್ಲಿ ಎಲ್ಲಾ ಕಾಯಿಲೆಗಳು ಒಂದರ ಹಿಂದೊಂದು ಕಾಣಿಸಿಕೊಳ್ಳುತ್ತಿದ್ದ ಜನರನ್ನು ಆತಂಕಕ್ಕೆ ದೂಡಿದೆ. ಮೈಸೂರಿನಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿದ್ದು, ಆ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ. ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಈಗಾಗಲೇ ಎರಡು ಬಾರಿ ಜಿಲ್ಲೆಗೆ ಭೇಟಿ ನೀಡಿ ಪರಿಸ್ಥಿತಿ ಗಮನಿಸಿದ್ದಾರೆ. ಇದು ಹರಡದಂತೆ ತಡೆಯಲು ಸಮಗ್ರ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಇಲಾಖೆಗೆ ನಿರ್ದೇಶನ ನೀಡಲಾಗಿದೆ. ಅದರಲ್ಲೂ ವಿಶೇಷವಾಗಿ ಕೊರೋನಾ ವೈರಾಣು ಸೋಂಕು ಗಂಭೀರ ಸಮಸ್ಯೆಯಾಗಿದೆ. ಇದು ಕೈಮೀರಿ ಹೋದರೆ ನಿಯಂತ್ರಿಸುವುದು ಕಷ್ಟವಾಗಲಿದೆ. ಆದ್ದರಿಂದ ಈ ಹಂತದಲ್ಲಿ ಸರ್ಕಾರದ ರಕ್ಷಣೆಗೆ ನಿಲ್ಲುವುದು ಸರ್ಕಾರ ಕರ್ತವ್ಯ. ಎಲ್ಲರೂ ಒಟ್ಟಾಗಿ ಈ ನಿಟ್ಟನಲ್ಲಿ ಯುದ್ಧೋಪಾದಿಯಲ್ಲಿ ಕೆಲಸ ಮಾಡಬೇಕು. ಈ ಕುರಿತು ಚರ್ಚಿಸಲು ಸರ್ವ ಸದಸ್ಯರ ತುರ್ತು ಸಭೆ ಕರೆಯಲಾಗಿದೆ ಎಂದು ಯಡಿಯೂರಪ್ಪ ಮಾಹಿತಿ ನೀಡಿದರು. 

ಮಾರ್ಚ್ 31ರವರೆಗೂ ತಾತ್ಕಾಲಿಕ ನಿರ್ಬಂಧ ಮುಂದುವರಿಕೆ
ಇದೇ ವೇಳೆ ವೈರಸ್ ಸೋಂಕು ಹರಡುವುದನ್ನು ನಿರ್ಬಂಧಿಸುವ ನಿಟ್ಟಿನಲ್ಲಿ ಸರ್ಕಾರ ಕೈಗೊಂಡಿರುವ ಮಾರ್ಚ್ 31ರವರೆಗೂ ತಾತ್ಕಾಲಿಕ ನಿರ್ಬಂಧವನ್ನು ಮುಂದುವರಿಕೆ ಮಾಡಲಾಗುತ್ತದೆ. ಈ ಹಿಂದಿನ ಮಾರ್ಗಸೂಚಿಯನ್ನೇ ಮುಂದುವರೆಸಲು ನಿರ್ಧರಿಸಲಾಗಿದ್ದು, ಅದರಂತೆ ಈ ಸಂದರ್ಭದಲ್ಲಿ ಶಾಪಿಂಗ್ ಮಾಲ್ ಗಳು, ಚಿತ್ರ ಮಂದಿರ ಸಂಪೂರ್ಣ ಬಂದ್ ಆಗಿರಲಿದೆ ಎಂದು ಹೇಳಿದರು.

ಇದಕ್ಕೂ ಮುನ್ನ ಶಾಸಕ ಎಸ್.ರಾಮಪ್ಪ ಹರಿಹರ ಕ್ಷೇತ್ರದಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿದೆ ಎಂದು ಆತಂಕ ವ್ಯಕ್ತಪಡಿಸಿದರು. ನಂತರ ಇತರ ಶಾಸಕರು ಕೂಡ ತಮ್ಮ ಕ್ಷೇತ್ರದಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿದೆ ಎಂಬ ವಿಷಯವನ್ನು ಸದನಕ್ಕೆ ಗಮನಕ್ಕೆ ತಂದರು. 

ನಂತರ ಶಾಸಕ ಅಜಯ್ ಸಿಂಗ್, ಇಟಲಿ ಮತ್ತು ಇರಾನ್ ದೇಶಗಳಲ್ಲಿ ಮೊದಲೆರಡು ವಾರಗಳಲ್ಲಿ ಕಡಿಮೆಯಿದ್ದ ಸೋಂಕಿನ ಪ್ರಕರಣಗಳು ನಂತರ ಏಕಾಏಕಿ ಹೆಚ್ಚಳವಾಗಿದೆ. ಭಾರತದಲ್ಲಿ ಈಗ ಸೋಂಕಿತರ ಸಂಖ್ಯೆ ಕಡಿಮೆಯಿದೆ. ಆದರೆ, ಅದು ಮುಂದಿನ ದಿನಗಳಲ್ಲಿ ಹೆಚ್ಚಾಗುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ. ಆದ್ದರಿಂದ ಈಗಲೇ ತುರ್ತು ಕ್ರಮಗಳನ್ನು ಕೈಗೊಳ್ಳುವುದು ಅತ್ಯಗತ್ಯ ಎಂದರು.  ಕಲಬುರಗಿಯಲ್ಲಿ ಸೋಂಕಿನಿಂದ ಮೃತಪಟ್ಟ ವ್ಯಕ್ತಿಯ ಸಂಬಂಧಿಕರು, ಮತ್ತು ಇತರ ಸೋಂಕಿತರು ಸಂಪರ್ಕಿಸಿದವರನ್ನು ಪತ್ತೆ ಮಾಡಿ ತಪಾಸಣೆ ನಡೆಸಲಾಗುತ್ತಿದೆ. ಜಿಲ್ಲೆಯಲ್ಲಿ 21 ಜನರನ್ನು ಆಸ್ಪತ್ರೆಯಲ್ಲಿ 71 ಜನರನ್ನು ಮನೆಯಲ್ಲಿ ಪ್ರತ್ಯೇಕವಾಗಿರಿಸಲಾಗಿದೆ. ಆದರೆ, ಇಲ್ಲಿಯವರೆಗೂ ಕಲಬುರಗಿಗೆ ತಪಾಸಣಾ ಕೇಂದ್ರ ಸ್ಥಾಪಿಸಿಲ್ಲ ಎಂದು ಆರೋಪಿಸಿದರು. 

ಮುಂಬೈ ಹಾಗೂ ಹೈದರಾಬಾದ್ ನಿಂದ ಕಲಬುರಗಿಗೆ ಆಗಮಿಸುವ ವಿದೇಶಿಯರು ಹಾಗೂ ಭಾರತೀಯರ ಕುರಿತು ಜಿಲ್ಲಾಧಿಕಾರಿಗಳಿಗೆ ಮಾಹಿತಿ ದೊರೆಯುತ್ತಿಲ್ಲ. ಅವರ ತಪಾಸಣೆ ಕೂಡ ನಡೆಸುತ್ತಿಲ್ಲ . ಇದರಿಂದ ಸೋಂಕು ಹರಡುವ ಭೀತಿ ಹೆಚ್ಚಿರುತ್ತದೆ. ತಕ್ಷಣ ಸರ್ಕಾರ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ನಂತರ ಶಾಸಕ ಕರುಣಾಕರ ರೆಡ್ಡಿ, ಬೆಂಗಳೂರಿನಲ್ಲಿ ಹೊರತುಪಡಿಸಿದರೆ ಉಳಿದೆಡೆ ವೆಂಟಿಲೇಟರ್ ಗಳ ಕೊರತೆಯಿದೆ. ತಕ್ಷಣ ವೆಂಟೆಲೇಟರ್ ಗಳನ್ನು ಖರೀದಿ ಮಾಡಿ ಅಳವಡಿಸಬೇಕು ಎಂದು ಮನವಿ ಮಾಡಿದರು.  ಕಾಂಗ್ರೆಸ್ ನ ಪ್ರಿಯಾಂಕಾ ಖರ್ಗೆ, ತಪಾಸಣಾ ಕೇಂದ್ರ ಆರಂಭಿಸಲು ರಿಜೆಂಟ್ ಗಳು ಬಂದಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ. ಈ ಕುರಿತು ಮಾಹಿತಿ ನೀಡಬೇಕು. ಜೊತೆಗೆ, ವೈದ್ಯಕೀಯ ಶಿಕ್ಷಣ ಹಾಗೂ ಆರೋಗ್ಯ ಇಲಾಖೆಯಿಂದ ಜಂಟಿಯಾಗಿ ಒಂದು ಕಾರ್ಯಪಡೆ ಸಮಿತಿ ರಚಿಸಬೇಕು ಎಂದು ಸಲಹೆ ನೀಡಿದರು. 

ಇದಕ್ಕೆ ಉತ್ತರಿಸಿದ ಆರೋಗ್ಯ ಸಚಿವ ಶ್ರೀರಾಮುಲು, ಕಲಬುರಗಿಯಲ್ಲಿ ತಪಾಸಣಾ ಕೇಂದ್ರ ಆರಂಭಿಸಲು ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆಯಿಂದ ರಿಜೆಂಟ್ ದೊರೆತಿದ್ದು, ಶೀಘ್ರದಲ್ಲೇ ಅದನ್ನು ಬೆಂಗಳೂರಿನ ಅದನ್ನು ಕಲಬುರಗಿಗೆ ಕಳುಹಿಲಾಗುವುದು ಎಂದರು. ಬೆಂಗಳೂರಿನಲ್ಲಿ 2, ಮೈಸೂರಿನಲ್ಲಿ 1, ಹಾಸನದಲ್ಲಿ 1 ಹಾಗೂ ಶಿವಮೊಗ್ಗದಲ್ಲಿ 1 ತಪಾಸಣಾ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಕಲಬುರಗಿ, ಮಂಗಳೂರು, ಬಳ್ಳಾರಿ, ಹುಬ್ಭಳ್ಳಿ, ಬೀದರ್ ಜಿಲ್ಲೆಗಳಿಗೂ ಕೇಂದ್ರ ಬೇಕು ಎಂಬ ಬೇಡಿಕೆ ಇದೆ. ಅವುಗಳನ್ನು ಪರಿಶೀಲಿಸಲಾಗುವುದು ಎಂದು ಹೇಳಿದರು. 

ರಾಜ್ಯ ಸರ್ಕಾರ ಸೋಂಕು ತಡೆಯಲು ಸರ್ವಸನ್ನದ್ಧವಾಗಿದೆ. ವೈದ್ಯರು, ಆರೋಗ್ಯ ಸಿಬ್ಬಂದಿ ಕೂಡ ಸಮರೋಪಾಧಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ನಮ್ಮಲ್ಲಿ ಮಾಸ್ಕ್ ಗಳ ಕೊರತೆಯಿಲ್ಲ. ಈಗಾಗಲೇ 4.5 ಲಕ್ಷ ಮಾಸ್ಕ್, 6.50 ಲಕ್ಷ ಎನ್ 95 ಮಾಸ್ಕ್ ಕಿಟ್, 2 ಲಕ್ಷ ಉಪಕರಣಗಳು ಹಾಗೂ 80 ಸಾವಿರ ಥರ್ಮಲ್ ಸ್ಕ್ರೀನಿಂಗ್ ಉಪಕರಣಗಳಿವೆ. ತಾವು ಎಲ್ಲಾ ಜಿಲ್ಲೆಗಳಿಗೂ ಭೇಟಿ ನೀಡಿ ಜನರಿಗೆ ಅಭಯ ನೀಡುತ್ತಿದ್ದೇವೆ. ಜನರು ಯಾವುದೇ ಕಾರಣಕ್ಕೂ ಆತಂಕ ಪಡಬೇಕಿಲ್ಲ ಎಂದು ಭರವಸೆ ನೀಡಿದರು. ವಿದೇಶದಲ್ಲಿರುವ ಕನ್ನಡಿಗ ವಿದ್ಯಾರ್ಥಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಅವರನ್ನು ಮರಳಿ ಕರೆತರಲು ಪ್ರಯತ್ನ ನಡೆದಿದೆ. ಈ ಕುರಿತು ಕೇಂದ್ರ ಸಚಿವರೊಂದಿಗೆ ಕೂಡ ಮಾತುಕತೆ ನಡೆಸಿರುವೆ ಎಂದರು. ಜಗತ್ತಿನ 155 ದೇಶಗಳು ಸೊಂಕು ಪೀಡಿತವಾಗಿದ್ದು, 7500 ಜನರು ಮೃತಪಟ್ಟಿದ್ದಾರೆ. ಭಾರತದಲ್ಲಿ 139 ಜನರಲ್ಲಿ ಸೋಂಕು ದೃಢಪಟ್ಟಿದ್ದು,ಮೂವರು ಸಾವನ್ನಪ್ಪಿದ್ದಾರೆ. 13 ಜನರು ಗುಣಮುಖರಾಗಿದ್ದಾರೆ. ರಾಜ್ಯದಲ್ಲಿ 11 ಜನರಲ್ಲಿ ಸೋಂಕು ಕಂಡುಬಂದಿದ್ದು, ಓರ್ವರು ಸಾವನ್ನಪ್ಪಿದ್ದಾರೆ. ಕಲಬುರಗಿಯಲ್ಲಿ ಜನರು ಗಾಬರಿಗೊಂಡು ಒಂದೇ ದಿನದಲ್ಲಿ 3ರಿಂದ 4ಸಾವಿರ ಜನರು ತಪಾಸಣೆಗೊಳಪಟ್ಟಿದ್ದಾರೆ ಎಂದರು. ಇಲ್ಲಿಯವರೆಗೆ 943 ಜನರು ಕಫದ ಮಾದರಿಯನ್ನು ಸಂಗ್ರಹಿಸಿ ತಪಾಸಣೆಗೆ ಕಳುಹಿಸಲಾಗಿದೆ. ಇವರಲ್ಲಿ 766 ಜನರಲ್ಲಿ ಸೋಂಕು ಇಲ್ಲ ಎಂದು ತಿಳಿದುಬಂದಿದೆ. 177 ಜನರ ಫಲಿತಾಂಶವನ್ನು ನಿರೀಕ್ಷಿಸಲಾಗುತ್ತಿದೆ. ವಿಮಾನ ನಿಲ್ದಾಣಗಳಲ್ಲಿ ಇಲ್ಲಿಯವರೆಗೆ 1.17 ಜನರ ಸ್ಕ್ರೀನಿಂಗ್ ನಡೆಸಲಾಗಿದೆ ಎಂದು ಆರೋಗ್ಯ ಸಚಿವ ಮಾಹಿತಿ ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com