ವಿಧಾನಸೌಧದಲ್ಲಿ ಕೊರೋನಾ ಸೋಂಕು ತಡೆಗೆ ವ್ಯಾಪಕ ಮುನ್ನೆಚ್ಚರಿಕೆ: ವೈರಾಣು ನಿರೋಧಕ ಸಿಂಪಡಣೆ

ವಿಧಾನಸೌಧ, ಅದರಲ್ಲೂ ಶಾಸಕರು ಸುಳಿದಾಡುವ ಕರ್ನಾಟಕದ ವಿಧಾನಮಂಡಲದ ಪ್ರಾಂಗಣದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. 
ವಿಧಾನಸೌಧದಲ್ಲಿ ವೈರಾಣು ನಿರೋಧಕ ಸಿಂಪಡಣೆ
ವಿಧಾನಸೌಧದಲ್ಲಿ ವೈರಾಣು ನಿರೋಧಕ ಸಿಂಪಡಣೆ

ಬೆಂಗಳೂರು: ವಿಧಾನಸೌಧ, ಅದರಲ್ಲೂ ಶಾಸಕರು ಸುಳಿದಾಡುವ ಕರ್ನಾಟಕದ ವಿಧಾನಮಂಡಲದ ಪ್ರಾಂಗಣದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. 

ವಿಧಾನಸಭೆಯ ಪ್ರಾಂಗಣದಲ್ಲಿ ಕಳೆದ ರಾತ್ರಿ ವೈರಾಣು ನಿರೋಧಕವನ್ನು ಸಿಂಪಡಿಸಿ ಶುಚಿಗೊಳಿಸಲಾಗಿದೆ. ವಿಶ್ವವನ್ನೇ ಕಂಗೆಡಿಸಿರುವ ಮಾರಕ ರೋಗ ಕೊರೋನಾ ಭೀತಿ ದಿನದಿಂದ ದಿನಕ್ಕೆ ರಾಜ್ಯವನ್ನು ಆವರಿಸುತ್ತಿದ್ದು ಹವಾನಿಯಂತ್ರಿತ ಕೊಠಡಿ ಹಾಗೂ ಸಾಕಷ್ಟು ಜನಪ್ರತಿನಿಧಿಗಳು, ಸಾರ್ವಜನಿಕರು ಹಾಗೂ ಮಾಧ್ಯಮ ಪ್ರತಿನಿಧಿಗಳು ಒಂದೆಡೆ ಸೇರುವ ಸ್ಥಳವಾದ ವಿಧಾನಸಭೆ ಪ್ರಾಂಗಣ ಕೂಡ ಆತಂಕ ಮೂಡಿಸುವ ತಾಣವಾಗಿ ಮಾರ್ಪಟ್ಟಿದೆ. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಕಳೆದ ರಾತ್ರಿ ವಿಧಾನಸಭೆ ಪ್ರಾಂಗಣಕ್ಕೆ ಕೊರೋನಾ ವೈರಾಣು ನಿರೋಧಕವನ್ನು ಸಿಂಪಡಿಸಲಾಗಿದೆ.

ಅಧಿವೇಶನ ಸಂದರ್ಭ ಯಾವುದೇ ಸಮಸ್ಯೆ ಉಂಟಾಗದಿರಲಿ ಎನ್ನುವ ಕಾರಣಕ್ಕೆ ಈ ಔಷಧ ಸಿಂಪಡಿಸಿದ್ದು, ಇದಕ್ಕೆ ರಾತ್ರಿ ಸಮಯವೇ ಸೂಕ್ತ ಎಂಬ ನಿರ್ಧಾರಕ್ಕೆ ಬಂದು ಮಂಗಳವಾರ ಕಾರ್ಯ ಪೂರೈಸಲಾಗಿದೆ. ಕಳೆದ ಒಂದು ವಾರದಿಂದ ರಾಜ್ಯದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಕೊರೋನಾ ಆವರಿಸುತ್ತಿದ್ದು, ಜನಪ್ರತಿನಿಧಿಗಳು ಆತಂಕ ವ್ಯಕ್ತಪಡಿಸಿರುವ ಹಿನ್ನೆಲೆ ಈ ಕ್ರಮ ಕೈಗೊಳ್ಳಲಾಗಿದೆ. ನಿನ್ನೆ ಮಧ್ಯಾಹ್ನವಷ್ಟೇ ವಿಧಾನಸೌಧ ಹಾಗೂ ವಿಕಾಸಸೌಧ ಆವರಣದಲ್ಲಿ ಥರ್ಮಲ್ ಸ್ಕ್ರೀನಿಂಗ್ ಯಂತ್ರ ಅಳವಡಿಸುವ ಮೂಲಕ ಕೊರೋನಾ ಸೋಂಕು ಪತ್ತೆಗೆ ಶಕ್ತಿ ಸೌಧದಲ್ಲಿ ಕ್ರಮ ಕೈಗೊಳ್ಳಲಾಗಿತ್ತು. 

ವಿಧಾನಸಭೆ ಮಾದರಿಯಲ್ಲಿಯೇ ವಿಧಾನಪರಿಷತ್ ಪ್ರಾಂಗಣದಲ್ಲಿ ಯೂ ವೈರಾಣು ಸಿಂಪರಣೆ ಮಾಡುವ ಉದ್ದೇಶ ಹೊಂದಲಾಗಿದ್ದು ಇಂದು ರಾತ್ರಿ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ. ಕೊರೋನಾ ವೈರಸ್ ತಡೆಗಟ್ಟಲು ರಾಜ್ಯ ಸರ್ಕಾರ ಕೈಗೊಂಡಿರುವ ಕ್ರಮಕ್ಕೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಸಹ ಸಹಕಾರ ನೀಡಿದರು. ಅಧಿವೇಶನ ನಡೆಯುತ್ತಿರುವ ವಿಧಾನಸೌಧ ಆವರಣದಲ್ಲಿ ಪ್ರತಿಯೊಬ್ಬರಿಗೂ ಪ್ರವೇಶದ್ವಾರದಲ್ಲಿ ಕೈ ಸ್ವಚ್ಛಗೊಳಿಸಿ ಕೊಳ್ಳಲು ಸ್ಯಾನಿಟೈಸರ್ ನೀಡಲಾಗುತ್ತಿದೆ. ವಿಧಾನಸಭೆ ಆವರಣ ಪ್ರವೇಶಿಸುತ್ತಿರುವಂತೆ ಇಂದು ಸಿದ್ದರಾಮಯ್ಯ ಅವರಿಗೂ ಇದನ್ನು ನೀಡಲಾಯಿತು. ನಗುನಗುತ್ತಲೇ ದ್ರಾವಣ ಪಡೆದ ಸಿದ್ದರಾಮಯ್ಯ ಕೈಗಳನ್ನು ಒರೆಸಿಕೊಳ್ಳುತ್ತಾ ಒಳಗೆ ತೆರಳಿದರು. 

ನಿನ್ನೆ ಮಧ್ಯಾಹ್ನದಿಂದ ವಿಧಾನಸೌಧ ಕೆಂಗಲ್ ದ್ವಾರದಲ್ಲಿ ಥರ್ಮಲ್ ಸ್ಕ್ರೀನಿಂಗ್ ಯಂತ್ರದ ಮೂಲಕ ತಪಾಸಣೆ ಮಾಡಲಾಗುತ್ತಿದೆ. ಇದಕ್ಕೂ ಕೂಡ ಸಿದ್ದರಾಮಯ್ಯ ಒಳಗಾದರು. ಸ್ವತಃ ಆರೋಗ್ಯ ತಪಾಸಣೆ ಹಾಗೂ ತನ್ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕೂಡ ಜನಪ್ರತಿನಿಧಿಗಳು ಕೈಗೊಳ್ಳುತ್ತಿರುವ ಈ ಕಾರ್ಯ ಮಾದರಿ ಎನಿಸುತ್ತಿದೆ. ವಿಪರ್ಯಾಸವೆಂದರೆ ಇಂದು ಮಾಜಿ ಸಚಿವ ಹಾಗೂ ಜೆಡಿಎಸ್ ನಾಯಕ ಎಚ್ ಡಿ ರೇವಣ್ಣ ಕೆಂಗಲ್ ಪ್ರವೇಶದ್ವಾರದಲ್ಲಿ ಥರ್ಮಲ್ ಯಂತ್ರದ ಮೂಲಕ ತಪಾಸಣೆಗೆ ಮುಂದಾದ ಸಿಬ್ಬಂದಿಗೆ ಸಹಕರಿಸಲಿಲ್ಲ. ತರ್ಮಲ್ ತಪಾಸಣೆಗೆ ಒಳಗಾಗದೆ ತೆರಳಿದರು. ಆರೋಗ್ಯ ಜಾಗೃತಿ ವಿಚಾರದಲ್ಲಿ ಕೈಗೊಂಡಿರುವ ಈ ಕಾರ್ಯಕ್ಕೆ ರೇವಣ್ಣ ಸಹಕಾರ ನೀಡದಿರುವುದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com