ಚರ್ಚೆ ನಡೆಸದೆ ಬಜೆಟ್ ಅನುಮೋದನೆ: ಕಾಂಗ್ರೆಸ್ ಆಕ್ರೋಶ

ಚರ್ಚೆ ನಡೆಸದೆಯೇ ಬಿಜೆಪಿ ಸರ್ಕಾರ ಬಜೆಟ್ ಗೆ ಅನುಮೋದನೆ ನೀಡಿದೆ ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.
ಕರ್ನಾಟಕ ವಿಧಾನಸಭೆ ಕಲಾಪದಲ್ಲಿ ಸಿದ್ದರಾಮಯ್ಯ
ಕರ್ನಾಟಕ ವಿಧಾನಸಭೆ ಕಲಾಪದಲ್ಲಿ ಸಿದ್ದರಾಮಯ್ಯ

ಬೆಂಗಳೂರು: ಚರ್ಚೆ ನಡೆಸದೆಯೇ ಬಿಜೆಪಿ ಸರ್ಕಾರ ಬಜೆಟ್ ಗೆ ಅನುಮೋದನೆ ನೀಡಿದೆ ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.

ಸರ್ಕಾರ ಪೂರ್ಣ ಪ್ರಮಾಣದ ಬಜೆಟ್ ಗೆ ಅನುಮೋದನೆ ಪಡೆಯಬೇಕು ಎಂದು ಮೊಂಡುತನ ಮಾಡುತ್ತಿದೆ. ಕೊರೋನಾ ಹಿನ್ನೆಲೆಯಲ್ಲಿ ಸದನ ಮುಂದೂಡಲೇಬೇಕಾದ ಅನಿವಾರ್ಯ ಸ್ಥಿತಿ ಇದೆ. ಧನವಿನಿಯೋಗ ವಿಧೇಯಕ ಬಿಟ್ಟು ಬೇರಾವ ವಿಧೆಯಕಗಳನ್ನೂ ತರಬಾರದು. ಪ್ರಮುಖ ವಿಧೇಯಕಗಳು ಚರ್ಚೆ ಆಗದೆ ಅನುಮೋದಿಸುವುದು ಸರಿಯಲ್ಲ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಸಿದ್ದರಾಮಯ್ಯ, ಈಶ್ವರ್ ಖಂಡ್ರೆ, ಎಚ್.ಕೆ. ಪಾಟೀಲ್, ದಿನೇಶ್ ಗುಂಡೂರಾವ್, ಡಾ.ಜಿ. ಪರಮೇಶ್ವರ್, ಅಜಯ್ ಸಿಂಗ್, ರಾಮಲಿಂಗಾರೆಡ್ಡಿ, ರಮೇಶ್ ಕುಮಾರ್ ಅವರು ಬಿಡುಗಡೆ ಮಾಡಿರುವ ಜಂಟಿ ಹೇಳಿಕೆಯಲ್ಲಿ, ಮಾರ್ಚ್ 27 - 28 ರವರೆಗೆ ಸದನ ನಡೆಸಬೇಕು. ಬಜೆಟ್ ಮೇಲೆ ಚರ್ಚೆ, ವಿಧೇಯಕಗಳನ್ನು ಅನುಮೋದಿಸುವುದು ಸರ್ಕಾರದ ಇರಾದೆ ಆಗಿತ್ತು. ಬಜೆಟ್ ಮೇಲೆ ಚರ್ಚೆ ಅಪೂರ್ಣ ಆಗಿದೆ. ಕಾಂಗ್ರೆಸ್, ಜೆಡಿಎಸ್ ಅಲ್ಲಿ ಇನ್ನೂ ಬಹಳಷ್ಟು ಜನ ಮಾತಾಡುವವರಿದ್ದಾರೆ. ಇಲಾಖಾವಾರು ಬೇಡಿಕೆಗಳ ಮೇಲೆ ಚರ್ಚೆ ಆಗಬೇಕಿದೆ. ಸಂವಿಧಾನದ ಚರ್ಚೆಗೆ ಹೆಚ್ಚು ಸಮಯ ಮೀಸಲಿಟ್ಟೆವು. ಅಲ್ಲದೆ, ಬೇರೆ ಕಲಾಪಗಳು ನಡೆದಿವೆ. 13 ಬಜೆಟ್ ಮಾಡಿದಾಗಲೂ ಪೂರ್ಣ ಲೇಖಾನುದಾನ ಪಡೆದಿಲ್ಲ. ಜೂನ್ ಅಥವಾ ಜುಲೈನಲ್ಲಿ ಚರ್ಚಿಸೋಣ. ಜನರ ತೆರಿಗೆ ಹಣ ಸದ್ಬಳಕೆ ಆಗುತ್ತಿದೆಯೋ ಇಲ್ಲವೋ ಚರ್ಚೆ ಆಗಬೇಕು ಎಂದು ತಿಳಿಸಿದ್ದೆವು. ಆದರೆ, ಇದಕ್ಕೊಪ್ಪದ ಸರ್ಕಾರ ಪೂರ್ಣ ಪ್ರಮಾಣದ ಬಜೆಟ್ ಗೆ ಅನುಮೋದನೆ ಪಡೆಯಬೇಕು ಎಂದು ಮೊಂಡುತನ ಮಾಡುತ್ತಿದ್ದಾರೆ. ಕೊರೋನಾ ಹಿನ್ನೆಲೆಯಲ್ಲಿ ಸದನ ಮುಂದೂಡಲೇಬೇಕಾದ ಅನಿವಾರ್ಯ ಸ್ಥಿತಿ ಇದೆ ಎಂದು ತಿಳಿಸಿದೆ.

ಮಾರಕ ಕಾಯಿಲೆ, ಜನರ ಸಾವು-ನೋವಿನ ಪ್ರಶ್ನೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಆವಶ್ಯಕ. ನಿನ್ನೆಯೇ ಧನವಿನಿಯೋಗ ವಿಧೇಯಕ ಅನುಮೋದನೆ ಕೊಡಲು ಸಿದ್ಧ. ಪೂರಕ ಅಂದಾಜುಗಳಿಗೂ ಅನುಮೋದನೆ ಪಡೆದುಕೊಳ್ಳಿ. ಎಲ್ಲ ರೀತಿಯ ಸಹಕಾರ ಕೊಡುತ್ತೇವೆ. ಅನಿರ್ದಿಷ್ಟ ಅವಧಿಗೆ ಮುಂದೂಡಿ ಎಂದು ತಿಳಿಸಿದ್ದೆವು ಎಂದು ಸಿದ್ದರಾಮಯ್ಯ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಧನವಿನಿಯೋಗ ವಿಧೇಯಕ ಬಿಟ್ಟು ಬೇರಾವ ವಿಧೆಯಕಗಳನ್ನೂ ತರಬೇಡಿ. ಪ್ರಮುಖ ವಿಧೇಯಕಗಳು ಚರ್ಚೆ ಆಗದೆ ಅನುಮೋದಿಸುವುದು ಸರಿಯಲ್ಲ. ಆದರೆ, ಅಷ್ಟು ಸಮಯಾವಕಾಶ ಇಲ್ಲ. ಹೀಗಾಗಿ ಬೇಡ ಎಂದು ಹೇಳಿದ್ದೆವು ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

ಪಂಚಾಯತಿಗಳ ಅಧ್ಯಕ್ಷರ ಅವಧಿ ಮೊದಲು 30 ತಿಂಗಳಿತ್ತು. ಪಂಚಾಯತಿ ತಿಳಿದುಕೊಂಡು ಜನರಿಗೆ ಆಡಳಿತ ತಲುಪಿಸಲು ಇಷ್ಟು ಸಮಯ ಸಾಲುವುದಿಲ್ಲ. 2 ವರ್ಷ ಅವಿಶ್ವಾಸ ನಿರ್ಣಯ ಮಂಡಿಸಬಾರದು ಎಂದು ನಿಯಮ ಇತ್ತು. ಈಗ ವಿಧೇಯಕದ ಮೂಲಕ ಇದನ್ನೆಲ್ಲ ಬದಲಿಸಲು ಹೊರಟಿದ್ದಾರೆ. ಯಾರೂ ಕೇಳಿರಲಿಲ್ಲ. ಮುಂಬರುವ ಚುನಾವಣೆಗಾಗಿ ಇದನ್ನೆಲ್ಲ ಮಾಡುತ್ತಿದ್ದಾರೆ. ಅಧಿಕಾರ ವಿಕೇಂದ್ರೀಕರಣದಲ್ಲಿ ನಂಬಿಕೆ ಇಟ್ಟವರು ನಾವು. ಇಡೀ ಪಂಚಾಯತ್ ರಾಜ್ ವ್ಯವಸ್ಥೆ ದುರ್ಬಲಗೊಳಿಸಲು ಹೊರಡಿದ್ದಾರೆ. ಇದಕ್ಕೆ ನಮ್ಮ ವಿರೋಧವಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.

ಬಿಜೆಪಿಯವರಿಗೆ ಅಧಿಕಾರ ವಿಕೇಂದ್ರೀಕರಣದಲ್ಲಿ ನಂಬಿಕೆಯಿಲ್ಲ. ಸರ್ವಾಧಿಕಾರದಲ್ಲಿ ನಂಬಿಕೆ ಇಟ್ಟವರು. ಕೊರೋನಾ ತಹಬದಿಗೆ ಬಂದ ಬಳಿಕ ಚುನಾವಣೆ ಮಾಡಿ ಎಂದಾಗ ಸರ್ಕಾರ ಒಪ್ಪಿಕೊಂಡಿತ್ತು. ಈಗೇಕೆ ಈ ವಿಧೇಯಕ ?. ತುರ್ತು ಇರುವ ವಿಧೇಯಕಗಳ ಮಂಡನೆ, ಚರ್ಚೆ, ಅನುಮೋದನೆ ಬದಲು ಸುಗ್ರೀವಾಜ್ಞೆ ಹೊರಡಿಸಿ ಎಂದು ಸಲಹೆ ಕೊಟ್ಟಿದ್ದೇವೆ. ಕಲಾಪ ಸಲಹಾ ಸಮಿತಿ ಸಭೆಯಲ್ಲಿ ಇಷ್ಟೆಲ್ಲ ಚರ್ಚಿಸಿದ್ದರೂ ಸದನದಲ್ಲಿ ವಿಧೇಯಕ ಮಂಡಿಸಲು ಮುಂದಾಗುತ್ತಾರೆ. ಇದ್ಯಾವ ಲೆಕ್ಕ ? ಭಂಡತನ, ಪ್ರಜಾಪ್ರಭುತ್ವ ವಿರೋಧಿ ಸರ್ಕಾರ. ತೀರ್ಮಾನ ಆದಂತೆ ನಡೆದುಕೊಳ್ಳುವುದು ಸರ್ಕಾರದ ಕರ್ತವ್ಯ. ಸ್ಪೀಕರ್ ಸ್ವತಂತ್ರವಾಗಿ ಕೆಲಸ ಮಾಡುತ್ತಿದ್ದಾರಾ ಅಥವಾ ಪಕ್ಷಪಾತಿಯಾಗಿದ್ದಾರಾ ಎನ್ನುವ ಅನುಮಾನ ಬಂದೇ ಬರುತ್ತದೆ. ಹೀಗಾಗಿ ಬಹಿಷ್ಕರಿಸಿ, ಸಭಾತ್ಯಾಗ ಮಾಡಿದ್ದೇವೆ. ವಿರೋಧ ಪಕ್ಷಗಳ ಬಗ್ಗೆ ಗೌರವ ಇಲ್ಲ ಇವರಿಗೆ. ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇದ್ದವರಿಗೆ ಪ್ರತಿಪಕ್ಷದವರ ಮಾತಿಗೆ ಬೆಲೆ ಕೊಡುತ್ತಾರೆ. ಈ ಎಲ್ಲ ವಿಚಾರಗಳನ್ನಿಟ್ಟುಕೊಂಡ ಜನಗಳ ಮುಂದೆ ಹೋಗುತ್ತೇವೆ.

ಹಬ್ಬ ಇದೆ. ಜನ ಹಬ್ಬ ಮಾಡಬೇಕಿದೆ. ವ್ಯಾಪಾರ ಮಾಡಲಿ. ಅದಕ್ಕಾಗಿ ಲಾಠಿ ಪ್ರಹಾರ ಬೇಡ. ಕೊರೋನಾ ತಡೆಯುವಲ್ಲಿ ವಿಫಲ. ಆರೋಗ್ಯ ಸಚಿವರಿಗೂ ವೈದ್ಯಕೀಯ ಶಿಕ್ಷಣ ಸಚಿವರ ಮಧ್ಯೆ ಸಮನ್ವಯತೆ ಇಲ್ಲ. ಮುಂದಾಗುವುದಕ್ಕೆಲ್ಲ ರಾಜ್ಯ ಸರ್ಕಾರವೇ ಹೊಣೆ. ಆರ್ಥಿಕವಾಗಿ ರಾಜ್ಯ ದಿವಾಳಿಯಾಗಿದೆ. ಬಹುಮತ ಇಲ್ಲದ ಅನೈತಿಕ ಸರ್ಕಾರ. ರಾಜ್ಯದ ಜನ ಇವರನ್ನು ನಂಬಿ 25 ಸಂಸದರನ್ನು ಗೆಲ್ಲಿಸಿಕೊಟ್ಟರು. 15ನೇ ಹಣಕಾಸು ಆಯೋಗದಿಂದ ರಾಜ್ಯಕ್ಕೆ ಅನ್ಯಾಯ. ಇಂತಹ ಕೆಟ್ಟ ಪರಿಸ್ಥಿತಿಯಲ್ಲಿ ಸಂಸದರು ಬಾಯಿ ಮುಚ್ಚಿಕೊಂಡು ಕುಳಿತಿದ್ದಾರೆ. ರಾಜ್ಯ ಹಾಳು ಮಾಡಲೆಂದೇ ಅಧಿಕಾರಕ್ಕೆ ಬಂದಿದ್ದಾರೆ. ಮೂರು ವರ್ಷದಲ್ಲಿ ಕರ್ನಾಟಕವು 20 ವರ್ಷ ಹಿಂದಕ್ಕೆ ಹೋಗಲಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಇತರ ನಾಯಕರಹ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com