ಮಂಗಳೂರು: ಲಾರಿಯಲ್ಲಿ ಊರಿಗೆ ಹೊರಟಿದ್ದ 120 ಕಾರ್ಮಿಕರು ಪೊಲೀಸ್ ವಶಕ್ಕೆ

ಮಂಗಳೂರಿನಿಂದ ಅಕ್ರಮವಾಗಿ ಉತ್ತರ ಭಾರತದ ಕಡೆಗೆ ಲಾರಿಯಲ್ಲಿ ಹೊರಟಿದ್ದ 120 ಕಾರ್ಮಿಕರನ್ನು ಪೊಲೀಸರು ವಶಕ್ಕೆ ಪಡೆದು ಹಾಸ್ಟೆಲ್ ಒಂದರಲ್ಲಿ ಇರಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮಂಗಳೂರು: ಮಂಗಳೂರಿನಿಂದ ಅಕ್ರಮವಾಗಿ ಉತ್ತರ ಭಾರತದ ಕಡೆಗೆ ಲಾರಿಯಲ್ಲಿ ಹೊರಟಿದ್ದ 120 ಕಾರ್ಮಿಕರನ್ನು ಪೊಲೀಸರು ವಶಕ್ಕೆ ಪಡೆದು ಹಾಸ್ಟೆಲ್ ಒಂದರಲ್ಲಿ ಇರಿಸಿದ್ದಾರೆ.

120 ವಲಸೆ ಕಾರ್ಮಿಕರು ಎರಡು ಲಾರಿಗಳಲ್ಲಿ ಹೋಗುತ್ತಿದ್ದಾಗ ಗುಂಡ್ಯ ಚೆಕ್‌ಪೋಸ್ಟ್‌ನಲ್ಲಿ ಪೊಲೀಸರು ತಡೆದು ಪರಿಶೀಲಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಹರ್ಯಾಣ ನೋಂದಣಿಯ ಎರಡೂ ಲಾರಿಗಳಿಗೆ ಮೇಲ್ಭಾಗದಲ್ಲಿ ಟರ್ಪಾಲ್ ಹೊದಿಸಲಾಗಿದ್ದು, ಅಗತ್ಯ ವಸ್ತುಗಳ ಸಾಗಾಟದ  ಸ್ಟಿಕ್ಕರ್ ಸಹ ಅಂಟಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಮೇ 8ರಂದು ಮುಂಜಾನೆ 3 ಗಂಟೆ ಸುಮಾರಿಗೆ ಗುಂಡ್ಯ ಚೆಕ್‌ಪೋಸ್ಟ್ ತಲುಪಿದ ಈ ಲಾರಿಗಳನ್ನು ಪೊಲೀಸರು ತಪಾಸಣೆ ನಡೆಸಿದಾಗ ಅಕ್ರಮವಾಗಿ ಜನರನ್ನು ಸಾಗಿಸುತ್ತಿರುವುದು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಲಾರಿಗಳನ್ನು ಪೊಲೀಸರು ತಡೆದು ಅದರಲ್ಲಿದ್ದ ಕಾರ್ಮಿಕರನ್ನು ಗುಂಡ್ಯ  ಪಿಲಿಕಜೆ ಶಾಲೆಗೆ ಕರೆದೊಯ್ದರು. ಆದರೆ ಕಾರ್ಮಿಕರು ತಮ್ಮನ್ನು ಊರಿಗೆ ಕಳುಹಿಸಿಕೊಡುವಂತೆ ಪಟ್ಟುಹಿಡಿದು ಕುಳಿತಿದ್ದರು. ವಿಷಯ ತಿಳಿದ ಪುತ್ತೂರು ಸಹಾಯಕ ಆಯುಕ್ತ ಡಾ.ಯತೀಶ್ ಉಳ್ಳಾಲ್ ಮಧ್ಯಾಹ್ನದ ವೇಳೆಗೆ ಸ್ಥಳಕ್ಕೆ ಆಗಮಿಸಿ ಕಾರ್ಮಿಕರ ಮನವೊಲಿಸಲು ಪ್ರಯತ್ನಿಸಿದರು.  ಮಂಗಳೂರಿಗೆ ಬಟ್ಟೆ ವ್ಯಾಪಾರಕ್ಕೆಂದು ನಾವು ಬಂದಿದ್ದೇವೆ. ಲಾಕ್‌ಡೌನ್‌ನಿಂದಾಗಿ ಕಳೆದ ಒಂದೂವರೇ ತಿಂಗಳಿನಿಂದ ಕೆಲಸವೂ ಇಲ್ಲದೇ ಹಣವೂ ಇಲ್ಲದೇ ಸಂಕಷ್ಟಕ್ಕೆ ಸಿಲುಕಿದ್ದೇವೆ. ವಾಸ್ತವ್ಯಕ್ಕೆ ಸರಿಯಾದ ವ್ಯವಸ್ಥೆಯೂ ಇಲ್ಲ. ಆದ್ದರಿಂದ ನಮ್ಮನ್ನು ಊರಿಗೆ ಕಳುಹಿಸಿಕೊಡಬೇಕು ಎಂದು  ಪಟ್ಟು ಹಿಡಿದರು. 

ಇದಕ್ಕೆ ಒಪ್ಪದ ಸಹಾಯಕ ಆಯುಕ್ತರು, ನೀವು ಹೊರ ರಾಜ್ಯಕ್ಕೆ ಪ್ರಯಾಣಿಸಲು ಇಲ್ಲಿನ ಜಿಲ್ಲಾಧಿಕಾರಿಯಿಂದ ಅನುಮತಿ ಪತ್ರ ಪಡೆದುಕೊಳ್ಳಬೇಕು. ನಂತರ ನಿಮ್ಮ ಊರಿನ ಜಿಲ್ಲಾಧಿಕಾರಿಗಳಿಂದಲೂ ಅನುಮತಿ ಸಿಗಬೇಕು. ಕೊರೋನ ಹರಡದಂತೆ ಎಲ್ಲ ರಾಜ್ಯಗಳಲ್ಲೂ ಕಟ್ಟುನಿಟ್ಟಿನ  ಕ್ರಮಗಳಿರುವುದರಿಂದ ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಅನುಮತಿ ಪತ್ರವಿಲ್ಲದೇ ಹೋಗುವಂತಿಲ್ಲ. ಆದ್ದರಿಂದ ಜಿಲ್ಲಾಡಳಿತದಿಂದ ಅನುಮತಿ ಪಡೆದು ಬಳಿಕ ನಿಮ್ಮೂರಿಗೆ ಕಳುಹಿಸಿಕೊಡಲಾಗುವುದು. ಅಲ್ಲಿಯ ತನಕ ಮಂಗಳೂರಿನಲ್ಲಿ ತಂಗಲು ಹಾಗೂ ಊಟಕ್ಕೆ ಸೂಕ್ತ ವ್ಯವಸ್ಥೆ  ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು. ಬಳಿಕ ಕಾರ್ಮಿಕರನ್ನು ಕೆಎಸ್ಆರ್‌ಟಿಸಿ ಬಸ್‌ನಲ್ಲಿ ಮಂಗಳೂರಿಗೆ ಕರೆತಂದು ಹಾಸ್ಟೆಲ್‌ ಒಂದರಲ್ಲಿ ಇರಿಸಲಾಗಿದೆ. ಅವರನ್ನು ಊರಿಗೆ ಕಳುಹಿಸಲು ಎಲ್ಲಾ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com