ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕೊರೋನಾ ಕ್ರೌರ್ಯ: ಗರ್ಭಿಣಿಗೆ ಚಿಕಿತ್ಸೆ ನೀಡದ ಆರೋಪ, ಹೊಟ್ಟೆಯಲ್ಲೇ ಮಗು ಸಾವು

ಕ್ವಾರಂಟೈನ್‌ನಲ್ಲಿದ್ದ ಗರ್ಭಿಣಿಗೆ ಸೂಕ್ತ ಚಿಕಿತ್ಸೆ ಸಿಗದೆ ಹೊಟ್ಟೆಯಲ್ಲೇ ಮಗು ಮೃತಪಟ್ಟ ದಾರುಣ ಘಟನೆ ಮಂಗಳೂರಿನಲ್ಲಿ ನಡೆದಿದೆ.

ಮಂಗಳೂರು: ಕ್ವಾರಂಟೈನ್‌ನಲ್ಲಿದ್ದ ಗರ್ಭಿಣಿಗೆ ಸೂಕ್ತ ಚಿಕಿತ್ಸೆ ಸಿಗದೆ ಹೊಟ್ಟೆಯಲ್ಲೇ ಮಗು ಮೃತಪಟ್ಟ ದಾರುಣ ಘಟನೆ ಮಂಗಳೂರಿನಲ್ಲಿ ನಡೆದಿದೆ.

ಹೌದು.. ಮೂಲಗಳ ಪ್ರಕಾರ ಮೇ 12ರಂದು ದುಬೈನಿಂದ ದಕ್ಷಿಣ ಕನ್ನಡದ ಮಂಗಳೂರು ಏರ್‌ಪೋರ್ಟ್‌ಗೆ ಬಂದಿದ್ದ ಗರ್ಭಿಣಿಯನ್ನು ಹೋಟೆಲ್ ನಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಈ ವೇಳೆ ಗರ್ಭಿಣಿ ಮಹಿಳೆಯ ಸ್ವಾಬ್ ಟೆಸ್ಟ್ (ಗಂಟಲು ದ್ರವ ಪರೀಕ್ಷೆ) ಮಾಡಿಸಲಾಗಿತ್ತು. ಅದರಲ್ಲಿ  ಕೊರೋನಾ ನೆಗೆಟಿವ್ ಬಂದಿತ್ತು. ಆದರೂ ಗರ್ಭಿಣಿಗೆ ಚಿಕಿತ್ಸೆ ನೀಡಲು ಕೆಲ ಖಾಸಗಿ ಆಸ್ಪತ್ರೆ ವೈದ್ಯರು ನಿರಾಕರಿಸಿದ್ದಾರೆ. ಅಲ್ಲದೆ ಸರಿಯಾದ ಚಿಕಿತ್ಸೆ ಸಿಗದೆ ಹೊಟ್ಟೆಯಲ್ಲೇ ಮಗು ಮೃತಪಟ್ಟಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಕ್ವಾರಂಟೈನ್‌ನಲ್ಲಿ ಇದ್ದಾಗ ವೈದ್ಯರು ಆಕೆ ಗರ್ಭಿಣಿ ಎಂದು ಹೆಚ್ಚಿನ ಕಾಳಜಿ ವಹಿಸಿದ್ದರೆ ಹೀಗಾಗುತ್ತಿರಲಿಲ್ಲ. ಟರ್ಮಿನೇಶನ್‌ ಡೆಲಿವರಿಗೂ ಒಂದು ಗಂಟೆ ಮೊದಲು ಮಗು ಹೊಟ್ಟೆಯಲ್ಲೇ ಸತ್ತು ಹೋಗಿತ್ತು ಎಂದು ಕುಟುಂಬಸ್ಥರು ಹೇಳಿದ್ದಾರೆ.

ಆರೋಪ ನಿರಾಕರಿಸಿದ ಆಸ್ಪತ್ರೆ ವೈದ್ಯರು
ಇನ್ನು ಗರ್ಭಿಣಿ ಮಹಿಳೆಯ ಕುಟುಂಬಸ್ಥರ ಆರೋಪಗಳನ್ನು ಆಸ್ಪತ್ರೆ ವೈದ್ಯರು ನಿರಾಕರಿಸಿದ್ದಾರೆ. ನಿನ್ನೆ ಖಾಸಗಿ ಆಸ್ಪತ್ರೆಯಲ್ಲಿ ಹೆರಿಗೆಯಾಗಿದೆ. ಹೆರಿಗೆ ಬಳಿಕ 6 ತಿಂಗಳ ಮಗು ಗರ್ಭಿಣಿಯ ಹೊಟ್ಟೆಯಲ್ಲಿ ಮೃತಪಟ್ಟಿರುವುದು ದೃಢವಾಗಿದೆ. ಗರ್ಭಿಣಿ ದೇಹದಲ್ಲಿ ಹೆಚ್ಚಿನ ನೀರು ತುಂಬಿಕೊಂಡ  ಕಾರಣ ತೊಂದರೆಯಾಗಿದೆ. ಆರೋಗ್ಯದ ತೊಂದರೆ ಇತ್ತು ಎಂದು ಹೇಳಿದ್ದಾರೆ. 

ವೈದ್ಯರ ಪ್ರಕಾರ, ಗರ್ಭಿಣಿಯ ಮೊದಲ ಗಂಟಲ ದ್ರವ ಮಾದರಿ ವರದಿ ಬಂದ 5ನೇ ದಿನದಿಂದಲೇ ಲೇಡಿಗೋಶನ್‌ ಆಸ್ಪತ್ರೆ ಮತ್ತು ಮೂಲ್ಕಿ ಸಮುದಾಯ ಆರೋಗ್ಯ ಕೇಂದ್ರದ ಸ್ತ್ರೀರೋಗ ತಜ್ಞರು ಗರ್ಭಿಣಿಯ ಆರೋಗ್ಯದ ಬಗ್ಗೆ ಗಮನ ಹರಿಸಿದ್ದಾರೆ. ಆಗ ಆಕೆಯಲ್ಲಿ ಅಧಿಕ ರಕ್ತದೊತ್ತಡ  ಇರುವುದು ಪತ್ತೆಯಾಗಿದ್ದು, ಇದೇ ಕಾರಣದಿಂದ ಮಗುವಿನ ಬೆಳವಣಿಗೆಯೂ ಕುಂಠಿತಗೊಂಡಿತ್ತು. ಬಳಿಕ ಮೇ 26ರಂದು ಗರ್ಭಿಣಿಯನ್ನು ಕ್ವಾರಂಟೈನ್‌ನಿಂದ ಬಿಡುಗಡೆಗೊಳಿಸಲಾಗಿದ್ದು, ಖಾಸಗಿ ಆಸ್ಪತ್ರೆಗೆ ತೆರಳಿದ್ದಾರೆ.

ಅದೇ ದಿನ ಆಕೆಗೆ ಸ್ಕ್ಯಾನಿಂಗ್‌ ಕೂಡ ನಡೆಸಲಾಗಿದೆ. ಸ್ಕ್ಯಾನಿಂಗ್‌ನಲ್ಲಿ  ಮಗು ಜೀವಂತ ಇರುವುದು ಗೊತ್ತಾಗಿತ್ತು. ಆದರೆ ಮಗುವಿನ ಬೆಳವಣಿಗೆ ಕುಂಠಿತವಾಗಿರುವುದರಿಂದ ಮತ್ತು ತಾಯಿಯಲ್ಲಿ ಅಧಿಕ ರಕ್ತದೊತ್ತಡವಿರುವ ಪರಿಣಾಮ ಮಗುವಿನ ಮುಂದಿನ ಬೆಳವಣಿಗೆಗೂ ಸಮಸ್ಯೆಯಾಗುವುದನ್ನರಿತು ಹಾಗೂ ತಾಯಿಯ ಜೀವ ಉಳಿಯಬೇಕಾದರೆ ಮಗುವನ್ನು  “ಟರ್ಮಿನೇಶನ್‌ ಡೆಲಿವರಿ’ ಮುಖಾಂತರ ತೆಗೆಯುವುದು ಅನಿವಾರ್ಯ ವಾದ ಹಿನ್ನೆಲೆಯಲ್ಲಿ ವೈದ್ಯರು ಆಕೆಯ ಕುಟುಂಬಿಕರೊಂದಿಗೆ ಚರ್ಚಿಸಿ ಮೇ 27ರಂದು “ಟರ್ಮಿನೇಶನ್‌ ಡೆಲಿವರಿ’ ಮುಖಾಂತರ ಮಗುವನ್ನು ಹೊರ ತೆಗೆದಿದ್ದಾರೆ. ಈ ವೇಳೆ ಭ್ರೂಣದ ಜೀವ ಹೋಗಿತ್ತು. ಈ ಬಗ್ಗೆ  ಕುಟುಂಬದವರಿಗೆ ಮನವರಿಕೆ ಮಾಡಲಾಗಿದೆ ಎಂದು ಲೇಡಿಗೋಶನ್‌ ಆಸ್ಪತ್ರೆ ಮೂಲಗಳು ತಿಳಿಸಿವೆ.

ಅಪಾರ್ಟ್‌ಮೆಂಟ್‌ಗೆ ನೋಟಿಸ್‌
ಕ್ವಾರಂಟೈನ್‌ನಲ್ಲಿದ್ದ ಗರ್ಭಿಣಿಯನ್ನು ಆಕೆ ವಾಸಿಸುತ್ತಿದ್ದ ಅಪಾರ್ಟ್‌ಮೆಂಟ್‌ನೊಳಗೆ ಪ್ರವೇಶಿಸಲು ನಿರಾಕರಿಸಿದ್ದ ಕಾರಣಕ್ಕೆ ಶಿವಬಾಗ್‌ನ ಅಪಾರ್ಟ್‌ ಮೆಂಟ್‌ಗೆ ಮಹಾನಗರ ಪಾಲಿಕೆ ನೋಟಿಸ್‌ ಜಾರಿಗೊಳಿಸಿದೆ. ಮೂರು ದಿನದೊಳಗೆ ಸೂಕ್ತ ಸಮಜಾಯಿಷಿ ನೀಡಬೇಕು. ಜತೆಗೆ ತತ್‌ಕ್ಷಣಕ್ಕೆ  ಅಪಾರ್ಟ್‌ ಮೆಂಟ್‌ಗೆ ಹೋಗಲು ಆಕೆಗೆ ಅವಕಾಶ ಕಲ್ಪಿಸಬೇಕು. ಇಲ್ಲದಿದ್ದರೆ ಅಪಾರ್ಟ್‌ಮೆಂಟ್‌ನ ಅಸೋಸಿಯೇಶನ್‌ ವಿರುದ್ಧ ಕಾನೂನು ಕ್ರಮ ಕೈಕೊಳ್ಳ ಲಾಗುವುದು ಎಂದು ನೋಟಿಸ್‌ನಲ್ಲಿ ಎಚ್ಚರಿಸಲಾಗಿದೆ.

ಸೂಕ್ತ ತನಿಖೆಗೆ ಭರವಸೆ ನೀಡಿದ ಡಿಸಿ!
ಮಹಿಳೆಯ ಕುಟುಂಬದ ಸದಸ್ಯರು ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್‌ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದು, ಘಟನೆ ಬಗ್ಗೆ ವಿವರ ಪಡೆದುಕೊಂಡು ಜಿಲ್ಲಾಧಿಕಾರಿ, ಸೂಕ್ತ ತನಿಖೆ ನಡೆಸಲಾಗುವುದು ಎಂದು ಭರವಸೆ ನೀಡಿದರು. 

Related Stories

No stories found.

Advertisement

X
Kannada Prabha
www.kannadaprabha.com