ಕನ್ನಡ ರಾಜ್ಯೋತ್ಸವ: ಈ ವರ್ಷ ಸಾಧಕರಿಗೆ ಪ್ರಶಸ್ತಿ ಪ್ರದಾನ ಅನಿಶ್ಚಿತ?

ಕನ್ನಡ ರಾಜ್ಯೋತ್ಸವ ಹಬ್ಬಕ್ಕೆ ಇನ್ನು ಕೆಲವೇ ದಿನಗಳು ಬಾಕಿಯಿದ್ದು, ಈ ಬಾರಿಯ ಸಂಭ್ರಮಕ್ಕೆ ಕೊರೋನಾ ನೆರಳು ಬಿದ್ದಿದೆ. ಇದರಂತೆ ಪ್ರಸಕ್ತ ಸಾಲಿನಲ್ಲಿ ಸಾಧಕರಿಕೆ ಪ್ರಶಸ್ತಿ ನೀಡುವುದು ಅನುಮಾನವೆಂದೇ ಹೇಳಲಾಗುತ್ತಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಕನ್ನಡ ರಾಜ್ಯೋತ್ಸವ ಹಬ್ಬಕ್ಕೆ ಇನ್ನು ಕೆಲವೇ ದಿನಗಳು ಬಾಕಿಯಿದ್ದು, ಈ ಬಾರಿಯ ಸಂಭ್ರಮಕ್ಕೆ ಕೊರೋನಾ ನೆರಳು ಬಿದ್ದಿದೆ. ಇದರಂತೆ ಪ್ರಸಕ್ತ ಸಾಲಿನಲ್ಲಿ ಸಾಧಕರಿಕೆ ಪ್ರಶಸ್ತಿ ನೀಡುವುದು ಅನುಮಾನವೆಂದೇ ಹೇಳಲಾಗುತ್ತಿದೆ. 

ಕೊರೋನಾ ಸೋಂಕು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಈ ಬಾರಿಯ ಕನ್ನಡ ರಾಜ್ಯೋತ್ಸವವನ್ನು ಸರಳವಾಗಿ ಆಚರಿಸಲು ನಿರ್ಧರಿಸಲಾಗಿದ್ದು, ನವೆಂಬರ್ 1 ರಂದು ಪ್ರಶಸ್ತಿ ನೀಡುವ ಬಗ್ಗೆ ಸರ್ಕಾರ ಇನ್ನೂ ಅಧಿಕೃತ ನಿರ್ಧಾರ ಕೈಗೊಂಡಿಲ್ಲ ಎಂದು ತಿಳಿದುಬಂದಿದೆ. 

ಪ್ರಸಕ್ತ ಸಾಲಿನ ಪ್ರಶಸ್ತಿ ಪ್ರದಾನಕ್ಕೆ ಸಾಧಕರನ್ನು ಆಯ್ಕೆ ಮಾಡಲಾಗಿದ್ದು, ಈ ಸಾಧಕರಿಗೆ ಈ ವರ್ಷ ಅಲ್ಲದೆ, ಮುಂದಿನ ವರ್ಷ ಅಂದರೆ 2021ನೇ ಸಾಲಿನ ಕನ್ನಡ ರಾಜ್ಯೋತ್ಸವದ ಸಾಧಕರೊಂದಿಗೆ ಪ್ರಶಸ್ತಿ ನೀಡಲು ಚಿಂತನೆಗಳು ನಡೆಯುತ್ತಿವೆ ಎಂದು ತಿಳಿದುಬಂದಿದೆ. 

ಪ್ರತಿ ವರ್ಷ ಮುಖ್ಯಮಂತ್ರಿಯವರ ಅಧ್ಯಕ್ಷತೆಯ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿ ರಾಜ್ಯ ಸರ್ಕಾರದ ವ್ಯಾಪ್ತಿಯಲ್ಲಿರುವ ವಿವಿಧ ಅಕಾಡೆಮಿಗಳ ಅಧ್ಯಕ್ಷರು ಹಾಗೂ ರಾಜ್ಯ ಸರ್ಕಾರದ ಪ್ರಮುಖ ಸಚಿವರನ್ನು ಸೇರಿಸಲಾಗುತ್ತಿತ್ತು. ಆದರೆ, ಈ ವರ್ಷ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರನ್ನು ಹೊರತುಪಡಿಸಿ ಬೇರೆ ಯಾವುದೇ ಹಿರಿಯ ಸಚಿವರನ್ನು ಈ ಸಮಿತಿಗೆ ಸೇರ್ಪಡೆ ಮಾಡಿಲ್ಲ. 

ಅಂತಿಮ ಆಯ್ಕೆ ಸಮಿತಿಯಲ್ಲಿ ಸಲಹಾ ಸಮಿತಿಯಲ್ಲಿದ್ದ ಸದಸ್ಯರ ಜೊತೆಗೆ ಡಾ. ವಾಮನಾಚಾರ್ಯ, ಸಾಹಿತಿ ದೊಡ್ಡರಂಗೇಗೌಡ, ವಾರ್ತಾ ಇಲಾಖೆ ನಿವೃತ್ತ ನಿರ್ದೇಶಕ ಭೃಂಗೀಶ್, ಆಯೇಷಾ ಖಾನಂ ಅವರನ್ನು ಸದಸ್ಯರನ್ನಾಗಿ ನೇಮಿಸಲಾಗಿದೆ.

ಈಗಾಗಲೇ 2021ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ 65 ಗಣ್ಯರ ಹೆಸರನ್ನು ಅಂತಿಮಗೊಳಿಸಲಾಗಿದ್ದು, ಒಪ್ಪಿಗೆಗಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಕಳುಹಿಸಿಕೊಡಲಾಗಿದೆ ಎಂದು ತಿಳಿದುಬಂದಿದೆ. 

ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಒಟ್ಟಾರೆ ಪ್ರಶಸ್ತಿಗಳಿಗಾಗಿ 1,500 ಕ್ಕೂ ಹೆಚ್ಚು ಅರ್ಜಿಗಳು ಬಂದಿದ್ದು, ಇದರಂತೆ ಒಟ್ಟು 130 ಹೆಸರುಗಳನ್ನು ಇಲಾಖೆ ಶಾರ್ಟ್ ಲಿಸ್ಟ್ ಮಾಡಿತ್ತು. ಇದರಲ್ಲಿ ಇದೀಗ 65 ಹೆಸರುಗಳನ್ನು ಅಂತಿಮಗೊಳಿಸಲಾಗಿದೆ. 

ಪ್ರಸ್ತುತ ರಾಜ್ಯದಲ್ಲಿ ಎರಡು ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯುತ್ತಿದ್ದು, ನೀತಿ ಸಂಹಿತೆ ಜಾರಿಯಲ್ಲಿದೆ. ಈ ಹಿನ್ನೆಲೆಯಲ್ಲಿ ಪ್ರಶಸ್ತಿ ಕಾರ್ಯಕ್ರಮ ನಡೆಸಲು ಸರ್ಕಾರ ಮನಸು ಮಾಡುತ್ತಿಲ್ಲ ಎನ್ನಲಾಗುತ್ತಿದೆ. ಪ್ರಮುಖವಾಗಿ ಉತ್ತರ ಕರ್ನಾಟಕ ಭಾಗದಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದ್ದು, ಕೊರೋನಾ ಸಾಂಕ್ರಾಮಿಕ ರೋಗ ಇರುವ ಕಾರಣ ಇಂತಹ ಸಂದರ್ಭದಲ್ಲಿ ಪ್ರಶಸ್ತಿ ಕಾರ್ಯಕ್ರಮ ಆಯೋಜಿಸುವುದು ಸರಿಯಲ್ಲ ಎಂಬುದು ಹಲವು ನಾಯಕರ ಅಭಿಪ್ರಾಯವಾಗಿದೆ ಎಂದು ಮೂಲಗಳು ತಿಳಿಸಿವೆ. 

ಸಾಮಾನ್ಯವಾಗಿ ಪ್ರಶಸ್ತಿಗಳನ್ನು ಹಿರಿಯರಿಗೆ ನೀಡಲಾಗುತ್ತದೆ. ಕೊರೋನಾ ಸಾಂಕ್ರಾಮಿಕ ಇರುವ ಕಾರಣ ಅಂತಹವರನ್ನು ಜನ ಸಂದಣಿ ಇರುವಂತಹ ಪ್ರದೇಶಗಳಿಗೆ ಕರೆಸುವುದು ಸೂಕ್ತವಲ್ಲ ಎಂಬುದು ಸರ್ಕಾರ ಭಾವನೆಯಾಗಿದೆ. 2008-09ರಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲೂ ಭಾರಿ ಪ್ರವಾಹ ಪರಿಸ್ಥಿತಿ ಎದುರಾಗಿದ್ದು, ಈ ಸಂದರ್ಭದಲ್ಲಿ ರಾಜ್ಯೋತ್ಸವ ಪ್ರಶಸ್ತಿಗಳನ್ನು ಘೋಷಿಸಲಾಗಿರಲಿಲ್ಲ. ನಂತರದ ವರ್ಷದಲ್ಲಿ ಪ್ರಶಸ್ತಿಗಳನ್ನು ಘೋಷಿಸಲಾಗಿತ್ತು ಮತ್ತು ಎರಡೂ ವರ್ಷಗಳ ಸಾಧಕರಿಗೆ ಒಟ್ಟಿಗೆ ಪ್ರಶಸ್ತಿ ಪ್ರದಾನ ಮಾಡಲಾಗಿತ್ತು. 

2018 ರಲ್ಲಿಯೂ, ಹೆಚ್ ಡಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ, ಜಮಖಂಡಿ ಮತ್ತು ರಾಮನಗರದಲ್ಲಿ ಉಪಚುನಾವಣೆಗಳ ಜೊತೆಗೆ ಬಳ್ಳಾರಿ, ಮಂಡ್ಯ ಮತ್ತು ಶಿವಮೊಗ್ಗದಲ್ಲಿ ಲೋಕಸಭಾ ಉಪಚುನಾವಣೆಗಳು ಎದುರಾಗಿದ್ದು. ಈ ವೇಳೆಯೂ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಮುಂದೂಡಲಾಗಿತ್ತು. ಚುನಾವಣೆ ಪೂರ್ಣಗೊಂಡ ಬಳಿಕ ಪ್ರಶಸ್ತಿ ಪ್ರದಾನ ಮಾಡಲಾಗಿತ್ತು.  

ಈ ಕುರಿತು ಪ್ರತಿಕ್ರಿಯೆ ನೀಡಿರುವ ಸಚಿವ ಸಿಟಿ ರವಿಯವರು, ಸಮಾರಂಭ ನಡೆಸುವ ಕುರಿತು ಶೀಘ್ರದಲ್ಲೇ ಮಾತುಕತೆಗಳನ್ನು ನಡೆಸಲಾಗುತ್ತದೆ. ಈ ಬಗ್ಗೆ ಅಕ್ಟೋಬರ್ 27 ರಂದು ಸಭೆ ನಡೆಸಲಾಗುತ್ತದೆ ಎಂದು ಹೇಳಿದ್ದಾರೆ. 

ಮುಖ್ಯ ಚುನಾವಣಾಧಿಕಾರಿ ಸಜೀವ್ ಕುಮಾರ್ ಮಾತನಾಡಿ, ಪ್ರಶಸ್ತಿ ಪ್ರದಾನ ಸಮಾರಂಭ ನಡೆಸಲು ವಿನಾಯಿತಿ ನೀಡುವಂತೆ ಈಗಾಗಲೇ ರಾಜ್ಯ ಸರ್ಕಾರ ಮನವಿ ಮಾಡಿಕೊಂಡಿದೆ. ಆದರೆ, ಆ ಬಗ್ಗೆ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com