ಬೆಂಗಳೂರು: ಸಾರ್ವಜನಿಕರಿಂದಲೇ ರಸ್ತೆ ದುರಸ್ತಿ; ಕನಕಗಿರಿ ನಿವಾಸಿಗಳ ಕಾರ್ಯಕ್ಕೆ ಮೆಚ್ಚುಗೆ

ಬಿಬಿಎಂಪಿಯ ನಿರ್ಲಕ್ಷ್ಯ, ಜನಪ್ರತಿನಿಧಿಗಳ ಪೊಳ್ಳು ಭರವಸೆಗಳಿಂದ ಬೇಸತ್ತಿದ್ದ ಬೆಂಗಳೂರಿನ ಕನಕಗಿರಿ ಲೇಔಟ್ ನ ನಿವಾಸಿಗಳು ಮಳೆಯಿಂದಾಗಿ ಹದಗೆಟ್ಟು ಕರುಣಾಜನಕ ಸ್ಥಿತಿಯಲ್ಲಿದ್ದ ತಮ್ಮ ರಸ್ತೆಯನ್ನು ಸ್ವಂತ ಹಣದಲ್ಲಿ ದುರಸ್ತಿ ಮಾಡಿಸುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.
ಕನಕಗಿರಿ ಲೇಔಟ್ ರಸ್ತೆ ದುರಸ್ತಿ
ಕನಕಗಿರಿ ಲೇಔಟ್ ರಸ್ತೆ ದುರಸ್ತಿ

ಬೆಂಗಳೂರು: ಬಿಬಿಎಂಪಿಯ ನಿರ್ಲಕ್ಷ್ಯ, ಜನಪ್ರತಿನಿಧಿಗಳ ಪೊಳ್ಳು ಭರವಸೆಗಳಿಂದ ಬೇಸತ್ತಿದ್ದ ಬೆಂಗಳೂರಿನ ಕನಕಗಿರಿ ಲೇಔಟ್ ನ ನಿವಾಸಿಗಳು ಮಳೆಯಿಂದಾಗಿ ಹದಗೆಟ್ಟು ಕರುಣಾಜನಕ ಸ್ಥಿತಿಯಲ್ಲಿದ್ದ ತಮ್ಮ ರಸ್ತೆಯನ್ನು ಸ್ವಂತ ಹಣದಲ್ಲಿ ದುರಸ್ತಿ ಮಾಡಿಸುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.

ಬೆಂಗಳೂರಿನ ಹೊರಮಾವು ಪ್ರದೇಶದ ರಾಮಮೂರ್ತಿ ನಗರದ ವಾರ್ಡ್ ನಂಬರ್ 26ರ ಕನಕಗಿರಿ ಲೇಔಟ್ ನ ರಸ್ತೆ ಮಳೆ ಮತ್ತು ಇತರೆ ಕಾರಣಗಳಿಂದಾಗಿ ತೀವ್ರ ಹದಗೆಟ್ಟಿತ್ತು. ಹೀಗಾಗಿ ಇಲ್ಲಿ ಸಂಭವಿಸುತ್ತಿದ್ದ ಅಫಘಾತಗಳ ಸಂಖ್ಯೆ ಕೂಡ ಏರುತ್ತಿತ್ತು. ಇದೇ ಕಾರಣಕ್ಕೆ ಇಲ್ಲಿನ ನಿವಾಸಿಗಳು ಸಾಕಷ್ಟು ಬಾರಿ  ಬಿಬಿಎಂಪಿ, ಕಾರ್ಪೋರೇಟರ್, ಶಾಸಕರಿಗೆ ಅರ್ಜಿ ಸಲ್ಲಿಸಿ ದುರಸ್ತಿಗೆ ಮನವಿ ಮಾಡಿದ್ದರು. ಆದರೆ ಕಳೆದ 3 ವರ್ಷಗಳಿಂದ ಯಾರೂ ಕೂಡ ಈ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ. ಹೀಗಾಗಿ ಸ್ಥಳೀಯ ನಿವಾಸಿಗಳೇ ಒಗ್ಗೂಡಿ ಹಣ ಸಂಗ್ರಹಣ ಮಾಡಿ ತಮ್ಮ ರಸ್ತೆಯನ್ನು ದುರಸ್ತಿ ಮಾಡಿಸಿಕೊಳ್ಳುತ್ತಿದ್ದಾರೆ.

ಮೊದಲು ಮುಖ್ಯರಸ್ತೆ ಸರಿ ಮಾಡಿ, ನಂತರ ಅಡ್ಡರಸ್ತೆಗಳನ್ನು ದುರಸ್ತಿ ಮಾಡಲು ನಿವಾಸಿಗಳು ಮುಂದಾಗಿದ್ದಾರೆ. ಇದಕ್ಕಾಗಿ ಶಾಂತಲಾ ಕಷ್ಣಮೂರ್ತಿ ಫೌಂಡಶೇನ್ ಸಹಯೋಗದಲ್ಲಿ ಶ್ರೀಕನಕಗಿರಿ ನಿವಾಸಿಗಳ ಸಂಘ ಎಂಬ ಸಂಘ ಸ್ಥಾಪಿಸಿರುವ ನಿವಾಸಿಗಳು ರಸ್ತೆ ದುರಸ್ತಿಗಾಗಿ ಸುಮಾರು 1 ಲಕ್ಷ ರೂಗಳನ್ನು  ಸಂಗ್ರಹಿಸಿದ್ದಾರೆ. ಈ ಹಣದಲ್ಲಿ ಜಲ್ಲಿಕಲ್ಲುಗಳನ್ನು, ಸಿಮೆಂಟ್ ಖರೀದಿ ಮಾಡಿದ್ದು, ರೋಡ್ ರೋಲರ್ ಅನ್ನು ಬಾಡಿಗೆ ಪಡೆದಿದ್ದಾರೆ. 

ಈ ಬಗ್ಗೆ ಮಾತನಾಡಿರುವ ಶ್ರೀಕನಕಗಿರಿ ನಿವಾಸಿಗಳ ಸಂಘದ ಅಧಅಯಕ್ಷ ಸತೀಶ್‌ಚಂದ್ರ ಅವರು, ಬಿಬಿಎಂಪಿಯಿಂದ ಕೆಲಸ ಮಾಡುವಾಗ ದುರಸ್ತಿ ಸರಿ ಮಾಡಿರುವುದಿಲ್ಲ. ಗುಂಡಿಗಳನ್ನೂ ಸರಿಯಾಗಿ ಮುಚ್ಚುವುದಿಲ್ಲ. ರಸ್ತೆ ಹಳ್ಳದಂತಾಗಿರುತ್ತಿತ್ತು. ಮಳೆ ಬಂದಾಗ ವಾಹನಗಳು ಕೆಸರಿನಲ್ಲಿ ಸಿಕ್ಕಿಕೊಳ್ಳುತ್ತಿದ್ದವು.  ಬಿಬಿಎಂಪಿ ಎಂಜಿನಿಯರ್‌ಗಳು ಸ್ಪಂದಿಸಿದರೂ, ಕೆಲಸ ಮಾತ್ರ ಬೇಗ ಪ್ರಾರಂಭವಾಗಲಿಲ್ಲ. ಈ ಕುರಿತು ಸಾಕಷ್ಟು ಬಾರಿ ದೂರು ದಾಖಲಿಸಿದರೂ, ಪ್ರಯೋಜನವಾಗಿಲ್ಲ. ರಸ್ತೆ ಪರಿಸ್ಥಿತಿಯಿಂದಾಗಿ ನಾವು ಕೆಲಸ ಕಾರ್ಯಗಳಿಗೆ ತೆರಳಲು ಸಾಧ್ಯವಾಗುತ್ತಿರಲಿಲ್ಲ. 

ಅದಕ್ಕೆ ನಾವೇ ದುರಸ್ತಿ ಮಾಡುವ ನಿರ್ಧಾರ ಮಾಡಿದೆವು. ಶಾಂತಾ ಕೃಷ್ಣಮೂರ್ತಿ ಫೌಂಡೇಷನ್‌ ಸಹಯೋಗದೊಂದಿಗೆ ಈ ಕಾರ್ಯ ಕೈಗೆತ್ತಿಕೊಂಡಿದ್ದೇವೆ. ನಮ್ಮ ಸಂಘದ ಸದಸ್ಯರೆಲ್ಲ ಸೇರಿ ಹಣ ಸೇರಿಸಿದ್ದೇವೆ. ಸುಮಾರು ಒಂದೂವರೆ ಕಿ.ಮೀ. ಉದ್ದದ ರಸ್ತೆ ದುರಸ್ತಿಗೆ 1.25 ಲಕ್ಷ ರೂ ಖರ್ಚು ಬಂದಿದೆ ಎಂದು  ಹೇಳಿದರು. ಅಂತೆಯೇ ಇಲ್ಲಿ ವಾಹನಗಳನ್ನು ಓಡಿಸಲು ಸಾಧ್ಯವೇ ಆಗುತ್ತಿರಲಿಲ್ಲ. ಈಗ ಪಾಲಿಕೆ ಸದಸ್ಯರ ಅಧಿಕಾರಾವಧಿ ಬೇರೆ ಮುಗಿದಿದೆ. ಅಧಿಕಾರಿಗಳನ್ನು ಕಾಯುತ್ತಾ ಕುಳಿತರೆ ಕೆಲಸ ಆಗುವುದಿಲ್ಲ ಎಂಬ ಕಾರಣದಿಂದ ನಾವೇ ಈ ನಿರ್ಧಾರ ಮಾಡಿದೆವು. ಹಿರಿಯ ನಾಗರಿಕರೂ ಸೇರಿದಂತೆ ಸಂಘದ ಎಲ್ಲ  ಸದಸ್ಯರೂ ದುರಸ್ತಿ ಕಾರ್ಯಕ್ಕೆ ಕೈಜೋಡಿಸಿದ್ದಾರೆ. ರಸ್ತೆಯಲ್ಲಿನ ಕೆಸರನ್ನು ತೆರವುಗೊಳಿಸುವ, ಅದನ್ನು ಸಾಗಿಸುವ, ಜಲ್ಲಿ ಕಲ್ಲುಗಳನ್ನು ಹಾಕುವ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.

ಇನ್ನು ಈ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಬಿಬಿಎಂಪಿ ಎಂಜಿನಿಯರ್ ಚಂದ್ರಶೇಖರ್ ಅವರು ನಿಯಮಗಳ ಅನ್ವಯ ಬಿಬಿಎಂಪಿ ವ್ಯಾಪ್ತಿಯಲ್ಲಿ ರಸ್ತೆಗಳನ್ನು ದುರಸ್ತಿ ಮಾಡಲು ಯಾರಿಗೂ ಅವಕಾಶವಿಲ್ಲ. ಖಾಸಗಿ ಲೇಔಟ್ ಗಳಲ್ಲಿ ಮಾತ್ರ ಇದಕ್ಕೆ ಅನುಮತಿ ಇದೆ. ಆದರೆ ಒಮ್ಮೆ BWSSB ರಸ್ತೆ ದುರಸ್ತಿ  ಕಾರ್ಯದ ಜವಾಬ್ದಾರಿ ನೀಡಿದರೆ ಅದರ ಸಂಪೂರ್ಣ ಹೊಣೆಗಾರಿಕೆ ಅವರದ್ದಾಗಿರುತ್ತದೆ. ಒಂದು ವೇಳೆ ನಿವಾಸಿಗಳು ರಸ್ತೆಯನ್ನು ದುರಸ್ತಿ ಮಾಡಿಸಿಕೊಂಡಿದ್ದರೂ, ಕೆಲ ಕಾರಣಗಳಿಗಾಗಿ ಅಂದರೆ ಒಳಚರಂಡಿ, ನೀರಿನ ಪೈಪ್, ವಿದ್ಯುತ್ ಕೇಬಲ್ ಕಾಮಗಾರಿ ಇತ್ಯಾದಿ ಕಾರಣಗಳಿಂದಾಗಿ ಅದನ್ನು ತೆಗೆದು ಮತ್ತೆ ದುರಸ್ತಿ  ಕಾರ್ಯ ಮಾಡಲಾಗುತ್ತದೆ. ಪ್ರಸ್ತುತ ನಾನು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತೇನೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com