ರಾಜ್ಯದಲ್ಲಿ ಕೊರೋನಾ ಅಟ್ಟಹಾಸ: ಮೊದಲ ಬಾರಿಗೆ ಒಂದೇ ದಿನ 10 ಸಾವಿರಕ್ಕೂ ಹೆಚ್ಚು ಕೇಸ್ ಪತ್ತೆ, ಹೆಚ್ಚಿದ ಆತಂಕ 

ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಒಂದೇ ದಿನ 10 ಸಾವಿರಕ್ಕಿಂತಲೂ ಹೆಚ್ಚು ಕೊರೋನಾ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, ಜನತೆಯಲ್ಲಿನ ಆತಂಕ ಮತ್ತಷ್ಟು ಹೆಚ್ಚಾಗುವಂತೆ ಮಾಡಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಒಂದೇ ದಿನ 10 ಸಾವಿರಕ್ಕಿಂತಲೂ ಹೆಚ್ಚು ಕೊರೋನಾ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, ಜನತೆಯಲ್ಲಿನ ಆತಂಕ ಮತ್ತಷ್ಟು ಹೆಚ್ಚಾಗುವಂತೆ ಮಾಡಿದೆ. 

ಕೆಲ ದಿನಗಳಿಂದ ಇಳಿಕೆ ಪ್ರಮಾಣದಲ್ಲಿದ್ದ ಕೊರೋನಾ ಹೊಸ ಸೋಂಕಿನ ಪ್ರಮಾಣ ನಿನ್ನೆ ಏಕಾಏಕಿ ದಾಖಲೆ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಬರೋಬ್ಬರಿ 10,453 ಮಂದಿಗೆ ಸೋಂಕು ತಗುಲಿದೆ. ಇದು ರಾಜ್ಯದಲ್ಲಿ ಒಂದು ದಿನದಲ್ಲಿ ಅತೀ ಹೆಚ್ಚು ಸೋಂಕು ಪತ್ತೆಯಾದ ದಾಖಲೆಯಾಗಿದೆ. 

ಕಳೆದ ಸೆಪ್ಟೆಂಬರ್ 13ರಂದು ದಾಖಲಾಗಿದ್ದ 9,894 ಹೊಸ ಪ್ರಕರಣಗಳು ಈವರೆಗಿನ ಏಕದಿನದ ದಾಖಲೆಯಾಗಿತ್ತು. ರಾಜ್ಯದಲ್ಲಿ ಒಟ್ಟು ಕೊರೋನಾ ಪ್ರಕರಣಗಳ ಸಂಖ್ಯೆ 5.92ಲಕ್ಷ ತಲುಪಿದೆ. ಇನ್ನು ಮಂಗಳವಾರ 136 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. 

5.92ಲಕ್ಷ ಮಂದಿ ಸೋಂಕಿತರ ಪೈಕಿ ರಾಜ್ಯದಲ್ಲಿ 1,07,737 ಸಕ್ರಿಯ ಪ್ರಕರಣಗಳಿದ್ದು, ದೇಶದಲ್ಲಿ ಅತೀ ಹೆಚ್ಚು ಸಕ್ರಿಯ ಪ್ರಕರಣಗಳ ಪಟ್ಟಿಯಲ್ಲಿ 2,65,033ಗಳೊಂದಿಗೆ ಮಹಾರಾಷ್ಟ್ರ ಮೊದಲ ಸ್ಥಾನ ಪಡೆದುಕೊಂಡಿದ್ದರೆ, ಕರ್ನಾಟಕ ಎರಡನೇ ಸ್ಥಾನದಲ್ಲಿದೆ. 

ಕೊರೋನಾ ಸೋಂಕು ಈಮಟ್ಟದಲ್ಲಿ ಏರಿಕೆಯಾಗುತ್ತಿದ್ದರೂ, ಆರೋಗ್ಯಾಧಿಕಾರಿಗಳು ಹಾಗೂ ಆರೋಗ್ಯ ತಜ್ಞರು ಪರೀಕ್ಷೆಗಳ ಸಂಖ್ಯೆ ಪರಿಣಾಮಕಾರಿಯಾಗಿರುವುದರಿಂದ ಸೋಂಕಿತರು ಹೆಚ್ಚಾಗಿ ಪತ್ತೆಯಾಗುತ್ತಿದ್ದಾರೆ. ಇದರಿಂದ ಆತಂಕಪಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ. ಸೋಮವಾರ ಒಂದೇ ದಿನ ರಾಜ್ಯದಲ್ಲಿ 87,475 ಕೊರೋನಾ ಸ್ಯಾಂಪಲ್ಸ್ ಗಳನ್ನು ಪರೀಕ್ಷೆ ನಡೆಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಈ ನಡುವೆ ಹೇಳಿಕೆ ನೀಡಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತ ಪಂಕಜ್ ಕುಮಾರ್ ಪಾಂಡೆಯವರು, ಹೆಚ್ಚೆಚ್ಚು ಸಂಖ್ಯೆಯ ಪರೀಕ್ಷೆಗಳನ್ನು ನಡೆಸುತ್ತಿರುವುದಿರಂದ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಸೋಂಕಿತರ ಸಂಖ್ಯೆಗೆ ಹೆಚ್ಚು ಆತಂಕಕ್ಕೊಳಗಾಗಬಾರದು. ಮತ್ತಷ್ಟು ಪರೀಕ್ಷೆಗಳನ್ನು ನಡೆಸುವ ಅಗತ್ಯವಿದೆ. ಇದರಿಂದ ಸೋಂಕಿತರನ್ನು ಶೀಘ್ರಗತಿಯಲ್ಲಿ ಗುರ್ತಿಸಿ ಐಸೋಲೇಷನ್ ನಲ್ಲಿರಿಸಬಹುದು ಹಾಗೂ ಕೊರೋನಾ ಸರಪಳಿಯನ್ನು ಕಡಿದು ಹಾಕಲು ಇದು ಸಹಾಯಕವಾಗಲಿದೆ ಎಂದು ತಿಳಿಸಿದ್ದಾರೆ.

ಪಂಕಜ್ ಪಾಂಡೆಯವರ ಹೇಳಿಕೆಯನ್ನು ಪ್ರೊ.ಗಿರಿಧರ್ ಬಾಬು ಅವರೂ ಕೂಡ ಒಪ್ಪಿದ್ದು, ಹೆಚ್ಚೆಚ್ಚು ಪರೀಕ್ಷೆ ನಡೆಸಿದಾಗ ಮಾತ್ರ ಹೆಚ್ಚೆಚ್ಚು ಪ್ರಕರಣಗಳನ್ನು ಪತ್ತೆಹಚ್ಚಲು ಸಾಧ್ಯ. ಇದೀಗ ರಾಜ್ಯದಲ್ಲಿ ಲಕ್ಷಣ ರಹಿತ ಪ್ರಕರಣಗಳ ಸಂಖ್ಯೆ ಹೆಚ್ಚಾಗಿ ಕಂಡು ಬರುತ್ತಿದೆ. ಪರೀಕ್ಷೆಗಳ ಸಂಖ್ಯೆಯನ್ನು ಮತ್ತಷ್ಟು ಹೆಚ್ಚಾಗುವಂತೆ ಮಾಡಿ, ಲಕ್ಷಣರಹಿತ ಪ್ರಕರಣಗಳನ್ನು ಪತ್ತೆಹಚ್ಚಬೇಕಿದೆ ಎಂದಿದ್ದಾರೆ. 

ಸೋಂಕಿತರ ಸಂಖ್ಯೆಗಿಂತಲೂ ಸಾವಿನ ಸಂಖ್ಯೆ ಹೆಚ್ಚಾದರೆ, ಆತಂಕಪಡಬೇಕಿದೆ. ಸೋಮವಾರದವರೆಗೂ ರಾಜ್ಯದಲ್ಲಿ ಸಾವಿನ ಪ್ರಮಾಣ ಶೇ.1.48ರಷ್ಟಿದೆ. ಕೆಲ ದಿನಗಳಿಂದ ಈ ಪ್ರಮಾಣ ಇಳಿಕೆ ಕಾಣುತ್ತಿದೆ ಎಂದು ವರದಿಗಳು ತಿಳಿಸಿವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com