ಟಿವಿ ಚಾನಲ್ ಕಚೇರಿ ಮೇಲೆ ಸಿಸಿಬಿ ದಾಳಿ: ಲೈವ್ ಪ್ರಸಾರ ಸ್ಥಗಿತ!

ಹಿರಿಯ ರಾಜಕಾರಣಿಯ ಕುಟುಂಬ ಸದಸ್ಯರು ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವ ಕುರಿತು ಕುಟುಕು ಕಾರ್ಯಾಚರಣೆ ನಡೆಸಿದ ಸುದ್ದಿ ಪ್ರಸಾರ ಮಾಡಿದ ಹಿನ್ನೆಲೆಯಲ್ಲಿ ಪ್ರಾದೇಶಿಕ ಸುದ್ದಿವಾಹಿನಿಯ ಕಚೇರಿ ಮೇಲೆ ಕೇಂದ್ರ ಅಪರಾಧ ವಿಭಾಗದ ಪೊಲೀಸರು ದಾಳಿ ನಡೆಸಿದ್ದು, ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆಂದು ಹೇಳಲಾಗುತ್ತಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಹಿರಿಯ ರಾಜಕಾರಣಿಯ ಕುಟುಂಬ ಸದಸ್ಯರು ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವ ಕುರಿತು ಕುಟುಕು ಕಾರ್ಯಾಚರಣೆ ನಡೆಸಿದ ಸುದ್ದಿ ಪ್ರಸಾರ ಮಾಡಿದ ಹಿನ್ನೆಲೆಯಲ್ಲಿ ಪ್ರಾದೇಶಿಕ ಸುದ್ದಿವಾಹಿನಿಯ ಕಚೇರಿ ಮೇಲೆ ಕೇಂದ್ರ ಅಪರಾಧ ವಿಭಾಗದ ಪೊಲೀಸರು ದಾಳಿ ನಡೆಸಿದ್ದು, ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆಂದು ಹೇಳಲಾಗುತ್ತಿದೆ. 

ಮೆ. ರಾಮಲಿಂಗಮ್ ಕನ್ಸ್ಟ್ರಕ್ಷನ್ ಕಂಪನಿ ಪ್ರೈವೆಟ್ ಲಿಮಿಟೆಡ್‌ನ ಡೈರೆಕ್ಷರ್ ಚಂದ್ರಕಾಂತ್ ರಾಮಲಿಂಗಮ್ ಎಂಬುವರು ಕೊಟ್ಟಿರುವ ದೂರಿನ ಅನ್ವಯ ಎಸಿಎಂಎಂ ನ್ಯಾಯಾಲಯ ಸರ್ಚ್‌ ವಾರೆಂಟ್ ಕೊಟ್ಟಿದೆ.

ಖಾಸಗಿ ವಾಹಿನಿಯ ಎಂಡಿ ರಾಕೇಶ್ ಶೆಟ್ಟಿ ಎಂಬುವರು ಹಣಕಾಸು ವ್ಯವಹಾರದಲ್ಲಿ ಮೋಸ ಮಾಡಿದ್ದಾರೆಂದು ಆರೋಪಿಸಿ ಚಂದ್ರಕಾಂತ್ ರಾಮಲಿಂಗಂ ಎಂಬುವರು ದೂರು ಕೊಟ್ಟಿದ್ದರು.

ಅದಾದ ಬಳಿಕ ಸಿಸಿಬಿನ ಪೊಲೀಸರು ಪವರ್ ಟಿವಿ ಎಂಡಿ ರಾಕೇಶ್ ಶೆಟ್ಟಿ ಸಂಪರ್ಕಿಸಲು ಪ್ರಯತ್ನಿಸಿದ್ದರು ಎನ್ನಲಾಗಿದೆ. ಅವರು ಸಿಗದೇ ಇದ್ದಾಗ ನ್ಯಾಯಾಲಯದಿಂದ ಸರ್ಚ್‌ ವಾರೆಂಟ್ ಪಡೆದು ಮತ್ತಿಕೆರೆ ರಸ್ತೆಯಲ್ಲಿರುವ ಪವರ್ ಟಿವಿ ಸುದ್ದಿ ವಾಹಿನಿಯ ಕಚೇರಿಯಲ್ಲಿ ತಪಾಸಣೆ ನಡೆಸಿದ್ದರು.

ಬಿಡಿಎದಿಂದ ನಮ್ಮ ಕಂಪನಿಗೆ ಬರಬೇಕಾಗಿದ್ದ 140 ಕೋಟಿ ರೂ. ಹಣದ ಬಗ್ಗೆ ತಿಳಿದುಕೊಂಡು, ಆ ಹಣವನ್ನು ಬಿಡುಗಡೆ ಮಾಡಿಸುತ್ತೇನೆಂದು ಹೇಳಿ ನಂಬಿಸಿದ್ದಾರೆ. ಜೊತೆಗೆ ಬಿಡಿಎದಿಂದ ನಮ್ಮ ಕಂಪನಿಗೆ ಬಿಡುಗಡೆಯಾಗಿದ್ದ 7.79 ಕೋಟಿ ರೂಪಾಯಿಗಳನ್ನು ನಾನೇ ಬಿಡುಗಡೆ ಮಾಡಿಸಿದ್ದೇನೆಂದು ಕಮಿಷನ್ ಕೊಡುವಂತೆ ಬಲವಂತ ಮಾಡಿದ್ದಾರೆ. ನಮ್ಮ ಹಣ ಕೊಡದಿದ್ದರೆ ನಮ್ಮ ಕಂಪನಿಯ ಹೆಸರನ್ನು ಹಾಳು ಮಾಡುವುದಾಗಿ ಬೆದರಿಕೆ ಹಾಕಿದ್ದರು. 

ಹೀಗಾಗಿ ರಾಕೇಶ್ ಶೆಟ್ಟಿ ಅವರಿಗೆ ಕಳೆದ ಸೆ. 22 ರಂದು 25 ಲಕ್ಷ ರೂ. ಹಣವನ್ನು ಕೊಟ್ಟಿದ್ದೇವೆ. ನಂತರವೂ ನಮ್ಮ ಕಂಪನಿಯ ಹೆಸರನ್ನು ಟಿವಿಯಲ್ಲಿ ಬಿತ್ತರಿಸಿ ನಮ್ಮ ಕಂಪನಿಯು ಕೆಲವು ರಾಜಕೀಯ ವ್ಯಕ್ತಿಗಳೊಂದಿಗೆ ಸಂಪರ್ಕದಲ್ಲಿರುವುದಾಗಿ ಬಲವಂತವಾಗಿ ನನ್ನಿಂದ ಹೇಳಿಸಿ, ಅದನ್ನು ರೆಕಾರ್ಡ್‌ ಮಾಡಿಕೊಂಡು ಅದನ್ನು ಪ್ರಸಾರ ಮಾಡಿ ತಮ್ಮ ಚಾನಲ್‌ನ ಟಿಆರ್‌ಪಿಯನ್ನು ಹೆಚ್ಚಿಸಿಕೊಂಡಿದ್ದಾರೆ. 

ಹೀಗಾಗಿ ನನ್ನಿಂದ ಬಲವಂತವಾಗಿ ಹಣವನ್ನು ಕಿತ್ತುಕೊಂಡು ಮೋಸ ಮಾಡಿರುವ ರಾಕೇಶ್ ಶೆಟ್ಟಿ ಹಾಗೂ ಇತರರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಮೆ. ರಾಮಲಿಂಗಂ ಕನ್ಸ್ಟ್ರಕ್ಟನ್ ಕಂಪನಿಯ ನಿರ್ದೇಶಕ ಚಂದ್ರಕಾಂತ್ ರಾಮಲಿಂಗಂ ಅವರು ದೂರು ಸಲ್ಲಿಸಿದ್ದರು.

ಈ ಸಂಬಂಧ ಕೆಪಿ ಅಗ್ರಹಾರ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದು, ಪ್ರಕರಣವನ್ನು ಸಿಸಿಬಿ ತನಿಖೆಗೆ ನೀಡಿದ್ದಾರೆ. 

ಪ್ರಕರಣ ಸಂಬಂಧ ಇದೀಗ ಪೊಲೀಸರು ರಾಕೇಶ್ ಶೆಟ್ಟಿ ಹಾಗೂ ವಾಹಿನಿ ನಿರೂಪಕರೊಬ್ಬರನನ್ನು ವಿಚಾರಣೆ ನಡೆಸಿದ್ದಾರೆ. 

ವಶಪಡಿಸಿಕೊಂಡ ವಸ್ತುಗಳನ್ನು ತಪಾಸಣೆ ನಡೆಸಲು ಸೈಬರ್ ಫೊರೆನ್ಸಿಕ್ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಮೂಲಗಳು ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com