ಕೋವಿಡ್ ಆತಂಕ: ಲಸಿಕೆ ಪ್ರಮಾಣಪತ್ರ ಬದಲು ಆರ್'ಟಿ-ಪಿಸಿಆರ್ ಪರೀಕ್ಷೆ ಕಡ್ಡಾಯಗೊಳಿಸಿದ ಸರ್ಕಾರ, ಕರ್ನಾಟಕ-ಕೇರಳ ಗಡಿಯಲ್ಲಿ ಗೊಂದಲ ಸೃಷ್ಟಿ

ಕೊರೋನಾ ಸೋಂಕು ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಆದೇಶದಂತೆ ಕೊರೋನಾ ನೆಗೆಟಿವ್ ವರದಿ ರಹಿತರಿಗೆ ಕರ್ನಾಟಕ ಗಡಿ ಪ್ರವೇಶಕ್ಕೆ ಸೋಮವಾರ ಸಂಪೂರ್ಣ ನಿರ್ಬಂಧ ಹೇರಲಾಗಿದ್ದು, ಈ ನಿರ್ಧಾರಕ್ಕೆ ಗಡಿ ಪ್ರದೇಶದಲ್ಲಿ ಹಲವರು ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ ಘಟನೆ ನಡೆಯಿತು. 
ಗಡಿ ಭಾಗದಲ್ಲಿ ನಿಂತಿರುವ ವಾಹನಗಳು
ಗಡಿ ಭಾಗದಲ್ಲಿ ನಿಂತಿರುವ ವಾಹನಗಳು
Updated on

ಮಂಗಳೂರು: ಕೊರೋನಾ ಸೋಂಕು ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಆದೇಶದಂತೆ ಕೊರೋನಾ ನೆಗೆಟಿವ್ ವರದಿ ರಹಿತರಿಗೆ ಕರ್ನಾಟಕ ಗಡಿ ಪ್ರವೇಶಕ್ಕೆ ಸೋಮವಾರ ಸಂಪೂರ್ಣ ನಿರ್ಬಂಧ ಹೇರಲಾಗಿದ್ದು, ಈ ನಿರ್ಧಾರಕ್ಕೆ ಗಡಿ ಪ್ರದೇಶದಲ್ಲಿ ಹಲವರು ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ ಘಟನೆ ನಡೆಯಿತು. 

ಸೋಮವಾರ ಬೆಳಗ್ಗಿನಿಂದಲೇ ಕಾಸರಗೋಡು-ಕರ್ನಾಟಕ ಮಧ್ಯೆ ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಳಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಕೇರಳ-ಕರ್ನಾಟಕದ ತಲಪಾಡಿ ಗಡಿಯಲ್ಲೇ ಪ್ರಯಾಣಿಕರನ್ನು ಬಸ್'ಗಳು ಇಳಿಸಿ ಹೋಗಿದ್ದವು. 

ಗಡಿಭಾಗದಲ್ಲಿ ಬಸ್ ಇಳಿದು ಗಡಿ ದಾಟುವವರಿಗೆ ಗಡಿಯಲ್ಲೇ ಪೊಲೀಸರು ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ತಪಾಸಣೆ ನಡೆಸುವ ಕಾರ್ಯ ನಡೆಸಿದ್ದರು. ಪ್ರಯಾಣಿಕರ ನೆಗೆಟಿವ್ ವರದಿ ಪರಿಶೀಲನೆ ಕೂಡ ನಡೆಸಲಾಯಿತು. 

ತುರ್ತು ಭೇಟಿ ಹಾಗೂ ಕೇರಳ ಭಾಗದ ವಿದ್ಯಾರ್ಥಿಗಳು ಪರೀಕ್ಷಾ ಹಾಲ್ ಟಿಕೆಟ್ ತೋರಿಸಿದರೆ ಮಾತ್ರ ರಾಜ್ಯ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತಿತ್ತು. ಸರತಿ ಸಾಲಿನಲ್ಲಿ ನಿಲ್ಲಿಸಿ ತಪಾಸಣೆ ನಡೆಸಿದ ಬಳಿಕವೇ ರಾಜ್ಯದ ಬಸ್ಸುಗಳ ಹತ್ತಲು ಪೊಲೀಸರು ಅವಕಾಶ ಮಾಡಿಕೊಡುತ್ತಿದ್ದರು. 

ಇದರಂತೆ ಕೇರಳಿಗರ ಜನಸಂದಣಿ ಹೆಚ್ಚಾದ ಬಳಿಕ ತಲಪಾಡಿಯಲ್ಲಿ ಮಾಡಲಾಗಿದ್ದ ಟೆಸ್ಟಿಂಗ್ ಸೆಂಟರನ್ನು ಸಂಪೂರ್ಣ ಸ್ಥಗಿತಗೊಳಿಸಲಾಯಿತು. ಬಳಿಕ ಕೇರಳದಿಂದಲೇ ಆರ್'ಟಿಪಿಸಿಆರ್ ನೆಗೆಟಿವ್ ವರದಿ ತರಲು ಸೂಚನೆ ನೀಡಲಾಯಿತು. ವರದಿ ತರದ ನೂರಾರು ಜನರನ್ನು ಹಿಂದಕ್ಕೆ ಕಳುಹಿಸಲಾಯಿತು. ಈ ಬೆಳವಣಿಗೆ ಸ್ಥಳದಲ್ಲಿ ಕೆಲ ಕಾಲ ಗೊಂದಲವನ್ನು ಸೃಷ್ಟಿಸಿತು. ಕೆಲವರು ಸರ್ಕಾರದ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದರು. 

ಈ ಸಂಬಂಧ ರಾಜ್ಯದ ಸರ್ಕಾರಿ ಅಧಿಕಾರಿಗಳ ಪ್ರತಿಕ್ರಿಯೆ ಪಡೆಯಲು ಸಂಪರ್ಕಿಸಿದರೂ, ಯಾರೊಬ್ಬರೂ ಸಂಪರ್ಕಕಕೆ ಸಿಕ್ಕಿಲ್ಲ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಜಾವೈದ್ ಅಖ್ತರ್ ಅವರಿಗೆ ಸಾಕಷ್ಟು ಬಾರಿ ಕರೆ ಮಾಡಿ ಸಂಪರ್ಕಕ್ಕೆ ಯತ್ನಿಸಿದರೂ ಸಂಪರ್ಕಕ್ಕೆ ಸಿಕ್ಕಿಲ್ಲ  

ಘಟನೆ ವೇಳೆ ಸ್ಥಳಕ್ಕೆ ಬಂದ ಜಿಲ್ಲಾಧಿಕಾರಿ ಡಾ. ಕೆ.ವಿ. ರಾಜೇಂದ್ರ ಅವರು, ಲಸಿಕೆ ಪಡೆದ ವ್ಯಕ್ತಿಯಿಂದಲೂ ಸೋಂಕು ಹರಡುವ ಸಾಧ್ಯತೆಗಳಿವೆ ಹೀಗಾಗಿಯೇ ಹೆಚ್ಚು ಸೋಂಕಿರುವ ಕೇರಳ ಹಾಗೂ ಮಹಾರಾಷ್ಟ್ರ ರಾಜ್ಚಗಳಿಂದ ಬರುವವರಿಗೆ ಆರ್'ಟಿ-ಪಿಸಿಆರ್ ನೆಗೆಟಿವ್ ವರದಿಯನ್ನು ಕಡ್ಡಾಯಗೊಳಿಸಲಾಗಿದೆ ಎಂದು ಹೇಳಿದರು. 

ಜಿಲ್ಲಾ ಸರ್ವೆಲೆನ್ಸ್ ಅಧಿಕಾರಿ ಡಾ.ಎ.ಟಿ.ಮನೋಜ್ ಅವರು ಮಾತನಾಡಿ, ನಮ್ಮಲ್ಲಿ ಮರು ಸೋಂಕಿನ ಪ್ರಮಾಣ ಶೇ.0.03ರಷ್ಟಿದೆ. ಹೀಗಾಗಿ ಕೇರಳದಲ್ಲಿ, ಸಂಪೂರ್ಣ ಲಸಿಕೆ ಹಾಕಿಸಿಕೊಂಡವರು ಬೇರೆ ರಾಜ್ಯದಿಂದ ಬಂದಾಗ ಅಂತಹವರು ಕ್ವಾರಂಟೈನ್‌ನಲ್ಲಿರುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ. 

ಕಾಸರಗೋಡು ಶಾಸಕರಾದ ಎನ್‌ಎ ನೆಲ್ಲಿಕುನ್ನು ಅವರು ಮಾತನಾಡಿ, ಕರ್ನಾಟಕ ಸರ್ಕಾರದ ಈ ನಿರ್ಧಾರವು ಭಾರತದಲ್ಲಿ ತಯಾರಿಸಿದ ಲಸಿಕೆಗಳ ಪರಿಣಾಮಕಾರಿತ್ವವನ್ನು ಅದು ನಂಬುತ್ತಿಲ್ಲ ಎಂಬುದನ್ನು ಸಾಬೀತುಪಡಿಸಿದೆ ಎಂದು ತಿಳಿಸಿದ್ದಾರೆ.

ಈ ನಡುವೆ ತಲಪಾಡಿ ಗಡಿ ಬಂದ್ ವಿರೋಧಿಸಿ ಕೆಲ ಕೇರಳಿಗರು ಮಂಗಳವಾರ ಪ್ರತಿಭಟನೆ ನಡೆಸಿದ ಬೆಳವಣಿಗೆಗಳು ಕಂಡು ಬಂದವು. 

ಎಡಿಜಿಪಿ ಪ್ರತಾಪ್ ರೆಡ್ಡಿ ಭೇಟಿ ವೇಳೆ, ಕೇರಳ ಭಾಗದ ರಸ್ತೆ ಬಂದ್ ಮಾಡಿ ಗಡಿಭಾಗದಲ್ಲಿ ಕೇರಳಿಗರು ಪ್ರತಿಭಟನೆ ನಡೆಸಿದರು. ನೆಗೆಟಿವ್ ವರದಿ ಕಡ್ಡಾಯ ಆದೇಶನ್ನು ಹಿಂಪಡೆಯಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com