ಬಿಬಿಎಂಪಿ ಸಹಾಯ ನಿಯಂತ್ರಣ ಕೊಠಡಿ ನಿರ್ವಹಿಸುತ್ತಿರುವ ಕಂಪನಿಯಿಂದ 11 ಮಂದಿ ನೌಕರರ ವಜಾ!

ಸಹ ಕೆಲಸಗಾರರಲ್ಲಿ ಕೋವಿಡ್ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಸ್ವಯಂಪ್ರೇರಿತರಾಗಿ ಐಸೋಲೇಷನ್ ಗೊಳಗಾಗಿದ್ದ 11 ಮಂದಿ ನೌಕರರನ್ನು ಬಿಬಿಎಂಪಿ ಸಹಾಯ ನಿಯಂತ್ರಣ ಕೊಠಡಿ ನಿರ್ವಹಿಸುತ್ತಿರುವ ಕಂಪನಿ ಕೆಲಸದಿಂದ ವಜಾಗೊಳಿಸಿದೆ ಎಂದು ತಿಳಿದುಬಂದಿದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಸಹ ಕೆಲಸಗಾರರಲ್ಲಿ ಕೋವಿಡ್ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಸ್ವಯಂಪ್ರೇರಿತರಾಗಿ ಐಸೋಲೇಷನ್ ಗೊಳಗಾಗಿದ್ದ 11 ಮಂದಿ ನೌಕರರನ್ನು ಬಿಬಿಎಂಪಿ ಸಹಾಯ ನಿಯಂತ್ರಣ ಕೊಠಡಿ ನಿರ್ವಹಿಸುತ್ತಿರುವ ಕಂಪನಿ ಕೆಲಸದಿಂದ ವಜಾಗೊಳಿಸಿದೆ ಎಂದು ತಿಳಿದುಬಂದಿದೆ. 

ಬಿಬಿಎಂಪಿ ಸಹಾಯ ನಿಯಂತ್ರಣ ಕೊಠಡಿಯಲ್ಲಿ ಮಧ್ಯಾಹ್ನ 2-10 ಗಂಟೆ ಪಾಳಿಯ ಕೆಲಸ ನಿರ್ವಹಿಸುತ್ತಿದ್ದ ಇಬ್ಬರು ನೌಕರರಲ್ಲಿ ಕೆಲ ದಿನಗಳ ಹಿಂದಷ್ಟೇ ಕೊರೋನಾ ಸೋಂಕು ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಸಂಪರ್ಕದಲ್ಲಿದ್ದ ಇನ್ನುಳಿದ 9 ಮಂದಿ ನೌಕರರು ಮುಂಜಾಗ್ರತಾ ಕ್ರಮವಾಗಿ ಸ್ವಯಂಪ್ರೇರಿತರಾಗಿ ಐಸೋಲೇಷನ್ ಗೊಳಗಾಗಿದ್ದರು. ಆದರೆ, ಇದಕ್ಕೆ ಟ್ರಾನ್ಸಾಕ್ಟ್ ಬಿಪಿಒ ಸರ್ವಿಸಸ್ ಇಂಡಿಯಾ ಕಂಪನಿ ಒಪ್ಪಿಗೆ ನೀಡಿರಲಿಲ್ಲ. 

ಅನುಮತಿ ನೀಡದಿದ್ದರೂ, ನೌಕರರು ಐಸೋಲೇಷನ್ ಗೊಳಗಾಗಿದ್ದರು. ಹೀಗಾಗಿ ಕಂಪನಿ 11 ಮಂದಿ ನೌಕರರನ್ನು ಕೆಲಸದಿಂದ ವಜಾಗೊಳಿಸಿದ್ದು, ವೇತನಕ್ಕೂ ತಡೆಹಿಡಿದಿದೆ ಎಂದು ತಿಳಿದುಬಂದಿದೆ. 

ಈ ನಡುವೆ ಹೇಳಿಕೆ ನೀಡಿರುವ ಕಂಪನಿಯು, ಕೋವಿಡ್ ಪಾಸಿಟಿವ್ ಬಂದಿರುವ ಇಬ್ಬರು ನೌಕರರನ್ನೂ ಬಿಟ್ಟಿಲ್ಲ, ಅವರನ್ನೂ ವಜಾಗೊಳಿಸಲಾಗಿದೆ ಎಂದು ತಿಳಿಸಿದೆ. 

ಇನ್ನು ವಜಾ ಶಿಕ್ಷೆಗೆ ಗುರಿಯಾಗಿರುವ ನೌಕರರೊಬ್ಬರು ಮಾತನಾಡಿ, ಸರ್ಕಾರದ ಸೇವೆಯಲ್ಲಿರುವುದರಿಂದ ನೌಕರರಿಗೆ ರಜೆ ನೀಡಲಾಗುವುದಿಲ್ಲ ಎಂದು ಕಂಪನಿ ಹೇಳಿದೆ. ವಜಾ ನಿರ್ಧಾರಿದಿಂದ ಕಂಪನಿ ಹಿಂದಕ್ಕೆ ಸರಿಯಬಹುದು ಎಂದು ಕಾದಿದ್ದೆವು. ಆದರೆ, ಅದು ಆಗಲಿಲ್ಲ. ನಮಗೆ ನೀಡಲು ಬಾಕಿಯಿದ್ದ ವೇತನವನ್ನು ತಡೆಹಿಡಿಯಲಾಗಿದೆ ಎಂದು ಹೇಳಿದ್ದಾರೆ. 

ಮತ್ತೊಬ್ಬ ನೌಕರ ಮಾತನಾಡಿ, ವಾರಗಳ ರಜೆ ಬೇಕೆಂದು ಕೇಳಿದ್ದೆ. ಆದರೆ, ಕಂಪನಿ ಅದಕ್ಕೆ ಅನುಮತಿ ನೀಡಲಿಲ್ಲ. ಇದೀಗ ಕೆಲಸವನ್ನು ಕಳೆದುಕೊಂಡಿದ್ದೇನೆ. ಕುಟುಂಬದಲ್ಲಿ ದುಡಿಯುವ ಕೈ ಎಂದರೆ ಅದು ನನ್ನದು. ಇದೀಗ ಕುಟುಂಬ ನಿರ್ವಹಣೆ ಬಹಳ ಕಷ್ಟಕರವಾಗಿ ಹೋಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ. 

ಕೋವಿಡ್ ಪರೀಕ್ಷೆಗೊಳಗಾಗಲೂ ಕಂಪನಿ ನನಗೆ ರಜೆ ನೀಡಿರಲಿಲ್ಲ. ಅರ್ಧದಿನ ರಜೆ ತೆಗೆದುಕೊಂಡು ಪರೀಕ್ಷೆ ಮಾಡಿಸಿಕೊಂಡಿದ್ದೆ. ಮುಂದಿನ ದಿನ ಕೆಲಸಕ್ಕೆ ಹೋದಾಗ ಅಧಿಕಾರಿಗಳು ಖಾಲಿಯಿದ್ದ ಹುದ್ದೆಗೆ ಬೇರೊಬ್ಬ ಕೆಲಸಗಾರನನ್ನು ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು ಎಂದು ಬೇಸರ ವ್ಯಕ್ತಪಡಿಸಿದ್ದಾರೆ. 

ಇನ್ನು ಕೋವಿಡ್ ಪಾಸಿಟಿವ್ ಬಂದಿರುವ ಇಬ್ಬರು ಮಾತನಾಡಿ, ಕಂಪನಿಯ ಅಧಿಕಾರಿಗಳು, ಸೋಂಕಿನಿಂದ ಗುಣಮುಖರಾದ ಬಳಿಕ ನಮಗೆ ಇಮೇಲ್ ಮೂಲಕ ಕೆಲಸದಿಂದ ವಜಾಗೊಳಿಸಿರುವುದಾಗಿ ತಿಳಿಸಿದ್ದರು ಎಂದು ಹೇಳಿದ್ದಾರೆ. 

ಟ್ರಾನ್ಸ್ಯಾಕ್ಟ್ ಗ್ಲೋಬಲ್ ನ ಸಂಸ್ಥಾಪಕ ಮತ್ತು ನಿರ್ದೇಶಕ ದರ್ಶನ್ ಚೈನಪ್ಪ ಅವರು ಮಾತನಾಡಿ, ಈ ವಿಷಯದ ಬಗ್ಗೆ ನನಗೆ ತಿಳಿದಿರಲಿಲ್ಲ. ಯಾವುದೇ ಸಿಬ್ಬಂದಿಗೆ ಕೋವಿಡ್ ಸೋಂಕು ತಗುಲಿರುವುದು ದೃಢಪಟ್ಟಿದ್ದೇ ಆದರೆ, ಅವರಿಗೆ ವರ್ಕ್ ಫ್ರಂ ಹೋಮ್ ಅವಕಾಶ ನೀಡುವುದಾಗಿ ಕಂಪನಿ ಒಪ್ಪಿಕೊಂಡಿದೆ ಎಂದು ಹೇಳಿದ್ದಾರೆ. 

ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಅವರು ಮಾತನಾಡಿ, ಈ ವಿಚಾರದ ಬಗ್ಗೆ ಗಮನ ಹರಿಸುವಂತೆ ವಿಶೇಷ ಆಯುಕ್ತ ರಂದೀಪ್ ಅವರಿಗೆ ಸೂಚಿಸುವುದಾಗಿ ತಿಳಿಸಿದ್ದಾರೆ. 

ನೌಕರರನ್ನು ವಜಾಗೊಳಿಸುವುದಕ್ಕೂ ಕೈಗಾರಿಕಾ ವಿವಾದಗಳ ಕಾಯಿದೆಯಡಿ ಕೆಲವು ವಿಧಾನಗಳಿವೆ. ನೌಕರರಲ್ಲಿ ಅಥವಾ ನೌಕರರ ಕೆಲಸದಲ್ಲಿ ದೋಷಗಳು ಕಂಡು ಬಂದಾಗ ತನಿಖೆ ನಡೆಸುವುದು, ಒಂದು ತಿಂಗಳ ನೋಟಿಸ್ ನೀಡುವುದು ಸೇರಿದಂತೆ ಹಲವು ನಿಯಮಗಳಿವೆ ಎಂದು ಅಖಿಲ ಭಾರತ ಕೇಂದ್ರ ಕಾರ್ಮಿಕರ ಒಕ್ಕೂಟದ ವಕೀಲೆ ಮತ್ತು ಕಾರ್ಯಕರ್ತೆ ಮೈತ್ರೇಯಿ ಕೃಷ್ಣನ್ ಅವರು ಹೇಳಿದ್ದಾರೆ. 

ಯಾವುದೇ ನೌಕರರಲ್ಲಿ ಕೋವಿಡ್ ಸೋಂಕು ದೃಢಪಟ್ಟಿದ್ದೇ ಆದರೆ, ಅವರ ವೇತನವನ್ನು ಕಡಿತಗೊಳಿಸಬಾರದು ಎಂದು ಸರ್ಕಾರ ಹೊರಡಿಸಿದ್ದ ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಈ ಪ್ರಕರಣದಲ್ಲಿ ನೌಕರರನ್ನು ಬಲಿಪಶು ಮಾಡಿರುವುದು ಸ್ಪಷ್ಟವಾಗಿ ಕಾಣಿಸುತ್ತಿದೆ. ಗಳಿಸಿದ ವೇತನವನ್ನು ತಡೆಹಿಡಿಯುವುದೂ ಕೂಡ ಕಾನೂನುಬಾಹಿರವಾಗಿದೆ ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com