ಮಂಗಳೂರು: ನಾಲ್ವರ ಆತ್ಮಹತ್ಯೆ ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್; ಮತಾಂತರ ಯತ್ನ ಕಾರಣ; ಮಹಿಳೆ ಬಂಧನ!
ಮಂಗಳೂರು: ಕರಾವಳಿ ಜಿಲ್ಲೆ ಮಂಗಳೂರಿನಲ್ಲಿ ಒಂದೇ ಕುಟುಂಬದ ನಾಲ್ವರ ಆತ್ಮಹತ್ಯೆ ಪ್ರಕರಣಕ್ಕೆ ಸ್ಫೋಟಕ ತಿರುವು ಸಿಕ್ಕಿದ್ದು ಮತಾಂತರ ಯತ್ನ ನಡೆದಿದೆ. ಈ ಸಂಬಂಧ ನೂರ್ ಜಹಾನ್ ಎಂಬಾಕೆಯನ್ನು ಬಂಧಿಸಲಾಗಿದೆ.
ಈ ಪ್ರಕರಣ ಸಂಬಂಧ ನೂರ್ ಜಹಾನ್ ಎಂಬ ಮಹಿಳೆಯನ್ನು ಬಂಧಿಸಲಾಗಿದ್ದು ಈಕೆ ವಿಜಯಲಕ್ಷ್ಮಿಯನ್ನು ಮತಾಂತರ ಮಾಡಲು ಯತ್ನಿಸಿದ್ದಳು ಎಂದು ನಗರ ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್ ತಿಳಿಸಿದ್ದಾರೆ.
ನಾಗೇಶ್ ಮತ್ತು ವಿಜಯಲಕ್ಷ್ಮೀ ಜೊತೆ ಜಗಳವಾಗುತ್ತಿತ್ತು. ಇದನ್ನೇ ಬಂಡವಾಳ ಮಾಡಿಕೊಂಡ ನೂರ್ ಜಹಾನ್ ವಿಜಯಲಕ್ಷ್ಮೀಗೆ ನಾಗೇಶ್ ಗೆ ವಿಚ್ಛೇದನ ಕೊಡು. ನಿನಗೆ ಮುಸ್ಲಿಂ ಯುವಕನ ಜೊತೆ ಮದುವೆ ಮಾಡಿಸುತ್ತೇನೆ ಎಂದು ಹೇಳಿದ್ದಳು ಎಂಬುದು ತನಿಖೆಯಲ್ಲಿ ಪತ್ತೆಯಾಗಿದೆ. ಇನ್ನು ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಹಿನ್ನೆಲೆಯಲ್ಲಿ ನೂರ್ ಜಹಾನ್ ಳನ್ನು ಬಂಧಿಸಲಾಗಿದೆ ಎಂದು ಶಶಿಕುಮಾರ್ ತಿಳಿಸಿದ್ದಾರೆ.
ಮಂಗಳೂರು ನಗರ ವ್ಯಾಪ್ತಿಯ ಮೊರ್ಗನ್ ಗೇಟ್ ಬಳಿ ಕಳೆದ ಬುಧವಾರ ಪ್ರಕರಣ ನಡೆದಿತ್ತು. ನಾಗೇಶ್ ಸದೇರಿಗುಪ್ಪೆ ಎಂಬಾತ ತನ್ನ ಪತ್ನಿ ವಿಜಯಲಕ್ಷ್ಮಿ ಮತ್ತು ಮಕ್ಕಳಾದ ಸ್ವಪ್ನಾ, ಸಮರ್ಥಗೆ ಮೊದಲು ಕೊಂದು ನಂತರ ತಾನು ಆತ್ಮಹತ್ಯೆ ಮಾಡಿಕೊಂಡಿದ್ದರು.
ದಂಪತಿ ಬಾಗಲಕೋಟೆ ಜಿಲ್ಲೆಯ ಬಿಳಗಿ ತಾಲ್ಲೂಕಿನ ಸುನಗ್ ಗ್ರಾಮದವರಾಗಿದ್ದು ಮಂಗಳೂರಿನಲ್ಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ