ಕೊರೋನಾ 3ನೇ ಅಲೆ ಆರಂಭಕ್ಕೂ ಮುನ್ನ ಲಸಿಕೆ ಪಡೆದುಕೊಳ್ಳಿ: ಗರ್ಭಿಣಿ ಮಹಿಳೆಯರಿಗೆ ವೈದ್ಯರ ಸಲಹೆ

ರಾಷ್ಟ್ರೀಯ ಸಲಹಾ ಸಮಿತಿಯ ಶಿಫಾರಸುಗಳನ್ನು ಒಪ್ಪಿಕೊಂಡಿರುವ ಕೇಂದ್ರ ಆರೋಗ್ಯ ಸಚಿವಾಲಯ ಗರ್ಭಿಣಿಯರಿಗೆ ಲಸಿಗೆ ನೀಡಲು ಒಪ್ಪಿಗೆ ನೀಡಿದ್ದು, ಇದರ ಬೆನ್ನಲ್ಲೇ ಕೊರೋನಾ 3ನೇ ಅಲೆ ಆರಂಭಕ್ಕೂ ಮುನ್ನ ಲಸಿಕೆ ಪಡೆದುಕೊಳ್ಳುವಂತೆ ಗರ್ಭಿಣಿ ಮಹಿಳೆಯರಿಗೆ ತಜ್ಞರು ಸಲಹೆಗಳನ್ನು ನೀಡುತ್ತಿದ್ದಾರೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ರಾಷ್ಟ್ರೀಯ ಸಲಹಾ ಸಮಿತಿಯ ಶಿಫಾರಸುಗಳನ್ನು ಒಪ್ಪಿಕೊಂಡಿರುವ ಕೇಂದ್ರ ಆರೋಗ್ಯ ಸಚಿವಾಲಯ ಗರ್ಭಿಣಿಯರಿಗೆ ಲಸಿಗೆ ನೀಡಲು ಒಪ್ಪಿಗೆ ನೀಡಿದ್ದು, ಇದರ ಬೆನ್ನಲ್ಲೇ ಕೊರೋನಾ 3ನೇ ಅಲೆ ಆರಂಭಕ್ಕೂ ಮುನ್ನ ಲಸಿಕೆ ಪಡೆದುಕೊಳ್ಳುವಂತೆ ಗರ್ಭಿಣಿ ಮಹಿಳೆಯರಿಗೆ ತಜ್ಞರು ಸಲಹೆಗಳನ್ನು ನೀಡುತ್ತಿದ್ದಾರೆ. 

ಕೊರೋನಾ ಎರಡನೇ ಅಲೆ ಗರ್ಭಿಣಿ ಮಹಿಳೆಯರ ಮೇಲೆ ಗಂಭೀರ ಪರಿಣಾಮ ಬೀರಿತ್ತು. ಸಾಕಷ್ಟು ಗರ್ಭಿಣಿಯರಲ್ಲಿ ಉಸಿರಾಟ ಸಮಸ್ಯೆ ಸೇರಿದಂತೆ ಗಂಭೀರ ಸ್ವರೂಪದ ಲಕ್ಷಣಗಳು ಕಂಡು ಬಂದಿದ್ದವು. 

ಇದೀಗ ಕೇಂದ್ರ ಸರ್ಕಾರ ಗರ್ಭಿಣಿ ಮಹಿಳೆಯರಿಗೆ ಲಸಿಕೆ ನೀಡಲು ಒಪ್ಪಿಗೆ ಸೂಚಿಸಿರುವ ಹಿನ್ನೆಲೆಯಲ್ಲಿ ಕೊರೋನಾ ಮೂರನೇ ಅಲೆ ಆರಂಭಕ್ಕೂ ಮುನ್ನ ಗರ್ಭಿಣಿ ಮಹಿಳೆಯರಿಗೆ ಲಸಿಕೆ ನೀಡಲು ಯಾವುದೇ ರೀತಿಯ ಸಮಸ್ಯೆ ಹಾಗೂ ತೊಡಕುಗಳು ಎದುರಾಗದಂತೆ ನೋಡಿಕೊಳ್ಳಲು  ಪ್ರತ್ಯೇಕ ಲಸಿಕಾ ಅಭಿಯಾನವನ್ನು ಸರ್ಕಾರ ನಡೆಸಬೇಕೆಂದು ತಜ್ಞರು ಸಲಹೆ ನೀಡಿದ್ದಾರೆ. 

ಬೆಂಗಳೂರಿನ ಮದರ್‌ಹೂಡ್ ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ ಡಾ. ಸುಹಾಸಿನಿಯವರು ಮಾತನಾಡಿ, ಕೊರೋನಾ 2ನೇ ಅಲೆ ಗರ್ಭಿಣಿಯರ ಮೇಲೆ ಗಂಭೀರ ಪರಿಣಾಮ ಬೀರಿದ ಹಿನ್ನೆಲೆಯಲ್ಲಿ ಆದ್ಯತೆ ಮೇರೆಗೆ ಅವರಿಗೆ ಲಸಿಕೆಯನ್ನು ಶೀಘ್ರಗತಿಯಲ್ಲಿ ನೀಡಬೇಕು. ಈಗಾಗಲೇ ಗರ್ಭಿಣಿಯರಿಗೆ ಲಸಿಕೆ ನೀಡುವ ಕಾರ್ಯಕ್ರಮಗಳು ಆರಂಭವಾಗಿದೆ. ಗರ್ಭಿಣಿ ಮಹಿಳೆಯರು ಲಸಿಕೆ ಪಡೆದುಕೊಳ್ಳಲು ಈಗಿನಿಂದಲೇ ತಾವಾಗಿಯೇ ಮುಂದಾಗಿದ್ದೇ ಆದರೆ, ಮೂರನೇ ಆರಂಭವಾಗುವುದಕ್ಕೂ ಮುನ್ನ ಎಲ್ಲಾ ಗರ್ಭಿಣಿಯರಿಗೂ ಲಸಿಕೆ ನೀಡಲು ಸಹಾಯಕವಾಗುತ್ತದೆ ಎಂದು ಹೇಳಿದ್ದಾರೆ. 

ಮೊದಲ ತ್ರೈಮಾಸಿಕ ಬಳಿಕ ಗರ್ಭಿಣಿ ಮಹಿಳೆಯರು ಲಸಿಕೆಯನ್ನು ಪಡೆದುಕೊಳ್ಳಬಹುದಾಗಿದೆ. ಮೊದಲ ತ್ರೈಮಾಸಿಕ ಪೂರ್ಣಗೊಂಡ ಬಳಿಕ ಯಾವಾಗ ಬೇಕಾದರೂ ಗರ್ಭಿಣಿಯರು ಲಸಿಕೆ ಪಡೆದುಕೊಳ್ಳಬಹುದಾಗಿದೆ. ಗರ್ಭಧರಿಸಿದ ಆರಂಭಿಕ ತಿಂಗಳುಗಳಲ್ಲಿ ಎದುರಾಗುವ ಅಡ್ಡಪರಿಣಾಮಗಳ ಬಗ್ಗೆ ಯಾವುದೇ ಮಾಹಿತಿ ಲಭ್ಯವಿಲ್ಲ. ಹೀಗಾಗಿ ಮೊದಲ ತ್ರೈಮಾಸಿಕದ ಬಳಿಕ ಲಸಿಕೆ ಪಡೆದುಕೊಳ್ಳುವುದು ಉತ್ತಮ ಎಂದು ಡಾ ಸುಹಾಸಿನಿಯವರು ಹೇಳಿದ್ದಾರೆ. 

ಆಸ್ಟರ್ ಸಿಎಂಐ ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರದ ಹಿರಿಯ ಸಲಹೆಗಾರ ಡಾ.ಭಾರತಿ ಕಾಮೋಜಿ ಮಾತನಾಡಿ, ಇತರಂತೆಯೇ ಎಲ್ಲಾ ಗರ್ಭಿಣಿ ಮಹಿಳೆಯರಿಗೂ ಕೋವಿಡ್ ಲಸಿಕೆಗಳನ್ನು ನೀಡಬೇಕು. ಗರ್ಭಿಣಿಯರು ಲಸಿಕೆ ಪಡೆದುಕೊಂಡಿದ್ದೇ ಆದರೆ, ಸೋಂಕಿನ ತಗುಲಿದರೂ ಅದರ ತೀವ್ರತೆ ಕಡಿಮೆಯಿರುತ್ತದೆ. ಅಲ್ಲದೆ, ಹೆರಿಗೆ ಮತ್ತು ಅಕಾಲಿಕ ಹೆರಿಗೆಗಳ ಅಪಾಯ ಕಡಿಮೆ ಇರುತ್ತದೆ. ಸೋಂಕು ಹರಡುವ ಪ್ರಮಾಣ ಕೂಡ ಕಡಿಮೆ ಇರುತ್ತದೆ ಎಂದು ತಿಳಿಸಿದ್ದಾರೆ. 

ಹೆಚ್ಚೆಚ್ಚು ಜನರಿರುವ ಪ್ರದೇಶದಲ್ಲಿ ಗರ್ಭಿಣಿ ಮಹಿಳೆಯರು ಲಸಿಕೆ ಪಡೆದುಕೊಳ್ಳುವುದು ಅಪಾಯಕಾರಿಯಾಗಿದ್ದು, ಹೀಗಾಗಿ ಗರ್ಭಿಣಿಯರಿಗೆ ಲಸಿಕೆ ನೀಡಲು ಪ್ರತ್ಯೇಕ ಅಭಿಯಾನ ಆರಂಭಿಸಬೇಕಿದೆ. ಇನ್ನು ಹಾಲುಣಿಸುವ ತಾಯಿಯಂದಿರು ಮಗುವಿಗೆ ಜನ್ಮ ನೀಡಿ 3-4 ವಾರಗಳ ಬಳಿಕ ಲಸಿಕೆ ಪಡೆದುಕೊಳ್ಳಬಹುದಾಗಿದೆ. ಅಧಿಕ ರಕ್ತದೊತ್ತಡ ಮತ್ತು ಮಧುಮೇಹದಂತಹ ದೀರ್ಘಕಾಲಿಕ ರೋಗದಿಂದ ಬಳಲುತ್ತಿರುವ ಗರ್ಭಿಣಿ ಮಹಿಳೆಯರು ಲಸಿಕೆ ಪಡೆದುಕೊಂಡ ಬಳಿಕ ತಮ್ಮ ಆರೋಗ್ಯದ ಮೇಲೆ ಹೆಚ್ಚಿನ ನಿಗಾ ಇಡಬೇಕು. ಅಲರ್ಜಿ ಸಮಸ್ಯೆಯಿಂದ ಬಳಲುತ್ತಿರುವವರು ಲಸಿಕೆ ಪಡೆದುಕೊಳ್ಳುವುದಕ್ಕೂ ಮುನ್ನ ವೈದ್ಯರನ್ನು ಸಂಪರ್ಕಿಸಬೇಕು ಎಂದು ತಜ್ಞರು ಸಲಹೆ ನೀಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com