ಅನ್ಲಾಕ್ 3.0 ಜಾರಿ: ರಾಜ್ಯದಲ್ಲಿ ಬಹುತೇಕ ಎಲ್ಲಾ ನಿರ್ಬಂಧಗಳೂ ತೆರವು; ಸಹಜ ಸ್ಥಿತಿಯತ್ತ ಕರ್ನಾಟಕ
ಬೆಂಗಳೂರು: ರಾಜ್ಯ ಸರ್ಕಾರ ಘೋಷಿಸಿರುವ ಅನ್'ಲಾಕ್ 3.0 ಸೋಮವಾರ ಜಾರಿಗೊಂಡಿದ್ದು, ಈ ಹಿನ್ನೆಲೆಯಲ್ಲಿ ದೇವಾಲಯಗಳು, ಪ್ರವಾಸಿ ತಾಣಗಳು ಓಪನ್ ಆಗಿವೆ. ಮಾಲ್, ಕೈಗಾರಿಕೆ, ಕಚೇರಿಗಳು ಪೂರ್ಣ ಪ್ರಮಾಣದಲ್ಲಿ ಆರಂಭಗೊಂಡಿರುವ ಹಿನ್ನೆಲೆಯೆಲ್ಲಿ ವಾಣಿಜ್ಯ ಚಟುವಟಿಕೆಗಳು ಚುರುಕುಗೊಳ್ಳಲಿವೆ.
ಇನ್ನು ವ್ಯಾಪಾರ-ವಹಿವಾಟು ಇಲ್ಲದೆ ಕಂಗಾಲಾಗಿದ್ದ ವಾಣಿಜ್ಯ ಪ್ರದೇಶ, ಭಕ್ತರಿಲ್ಲದೆ ಭಣಗುಡುತ್ತಿದ್ದ ಧಾರ್ಮಿಕ ಕೇಂದ್ರಗಳಲ್ಲಿ ಮೊದಲಿನಂತೆ ಕಳೆ ಬರಲಿದೆ.
ಗ್ರಾಹಕರ ಸ್ವಾಗತಕ್ಕೆ ಬಹುತೇಕ ಕಡೆ ಸಕಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದ್ದು, ಮಾಲ್, ಚಿನ್ನಾಭರಣ, ಬೃಹತ್ ಬಟ್ಟೆ ಅಂಗಡಿಗಳ ಮುಂದೆ ಗ್ರಾಹಕರನ್ನು ಸ್ವಾಗತಿಸುವ ಫಲಕಗಳನ್ನು ಅಳವಡಿಸಿರುವುದು ಕಂಡು ಬಂದಿದೆ.
ಸರ್ಕಾರ ನಿರ್ಬಂಧಗಳನ್ನು ಹೇರಿದ್ದ ಹಿನ್ನೆಲೆಯಲ್ಲಿ ಇಷ್ಟು ದಿನ ಸಂಜೆ 5ರವರೆಗೆ ಮಾತ್ರ ಓಪನ್ ಇದ್ದ ಅಂಗಡಿಗಳು ಇಂದಿನಿಂದ ಬೆಳಗ್ಗೆ 6 ಗಂಟೆಯಿಂದ ರಾತ್ರಿ 9 ಗಂಟೆವರೆಗೂ ವಹಿವಾಟು ನಡೆಸಲಿವೆ.
ಶೇ.100ರಷ್ಟು ಪ್ರಯಾಣಿಕರ ಸಂಚಾರ
ಸೋಮವಾರದಿಂದ ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ಮೆಟ್ರೋ ಸೇರಿದಂತೆ ಸಾರ್ವಜನಿಕ ಸಾರಿಗೆ ಮಾತ್ರವಲ್ಲದೆ, ಆಟೋ, ಟ್ಯಾಕ್ಸಿ, ಖಾಸಗಿ ಸಾರಿಗೆ ವಾಹನಗಳು ಬೆಳಗ್ಗೆ 5ರಿಂದ ರಾತ್ರಿ 9 ಗಂಟೆವರೆಗೆ ಶೇ.100ರಷ್ಟುಪ್ರಯಾಣಿಕರನ್ನು ಕರೆದೊಯ್ಯಲು ಅವಕಾಶ ನೀಡಲಾಗಿದೆ.
ಕರ್ಫ್ಯೂ ಸಡಿಲಗೊಳಿಸಿದ ಸರ್ಕಾರ
ವಾರಾಂತ್ಯ ಕಫ್ರ್ಯೂ ತೆರವುಗೊಳಿಸಿ, ರಾತ್ರಿ ಕಫ್ರ್ಯೂ ಅನ್ನು ರಾತ್ರಿ 9ರಿಂದ ಬೆಳಗ್ಗೆ 5ರವರೆಗೆ ನಿಗದಿಪಡಿಸಿರುವುದರಿಂದ ಶನಿವಾರ, ಭಾನುವಾರವೂ ಸೇರಿ ವಾರದ 7 ದಿನ ಎಲ್ಲ ವಾಣಿಜ್ಯ ಚಟುವಟಿಕೆಗಳನ್ನು ರಾತ್ರಿ 9 ಗಂಟೆವರೆಗೂ ನಡೆಸಬಹುದಾಗಿದೆ. ಹೋಂ ಡೆಲಿವರಿಗೆ 24 ಗಂಟೆಯೂ ಅವಕಾಶವಿದೆ. ಮದುವೆ ಸೇರಿದಂತೆ ಶುಭ-ಸಮಾರಂಭಗಳಿಗೆ 100 ಮಂದಿ, ಅಂತ್ಯಸಂಸ್ಕಾರಕ್ಕೆ 20 ಮಂದಿ ಭಾಗಿಯಾಗಬಹುದು.
ಸದ್ಯ ಧಾರ್ಮಿಕ, ಸಾಮಾಜಿಕ, ರಾಜಕೀಯ ಸಭೆ, ಸಮಾರಂಭಗಳು, ಪ್ರತಿಭಟನೆ ನಡೆಸಲು, ಪಬ್‌ಗಳ ಕಾರ್ಯಾಚರಣೆಗೆ ಇರುವ ನಿರ್ಬಂಧವನ್ನು ಮುಂದುವರೆಸಲಾಗಿದೆ. ಶಾಲಾ, ಕಾಲೇಜುಗಳ ಆರಂಭದ ಬಗ್ಗೆ ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ.
ರಾತ್ರಿ 8 ಗಂಟೆವರೆಗೆ ಮೆಟ್ರೋ ಸಂಚಾರಕ್ಕೆ ಅನುಮತಿ
ಉದ್ಯಾನನಗರಿ ಬೆಂಗಳೂರಿನಲ್ಲಿ ಇಷ್ಟುದಿನ ಸಂಜೆ 5ರವರೆಗೆ ಮಾತ್ರ ಸೀಮಿತ ಅವಧಿಯಲ್ಲಿ ಸಂಚರಿಸುತ್ತಿದ್ದ ಮೆಟ್ರೋ ರೈಲು ಸೋಮವಾರದಿಂದ ರಾತ್ರಿ 8 ಗಂಟೆಯವರೆಗೂ ಸಂಚರಿಸಲಿದೆ. ಜೊತೆಗೆ ಇಷ್ಟುದಿನ ಶೇ.50ರಷ್ಟುಪ್ರಯಾಣಿಕರ ನಿರ್ಬಂಧವನ್ನೂ ತೆರವುಗೊಳಿಸಲಾಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ