ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಕೆಎಸ್ಆರ್'ಟಿಸಿ ಬಸ್ ಚಾಲಕನ ಮೇಲೆ ಹರಿದ ಬಸ್: ವ್ಯಕ್ತಿ ಸಾವು
ಬೆಂಗಳೂರು: ನಗರದ ಮೆಜೆಸ್ಟಿಕ್ ಬಸ್ ನಿಲ್ದಾಣದ ಪ್ರವೇಶ ದ್ವಾರದಲ್ಲಿ ಬಸ್‌ಗಳ ನಡುವೆ ಗುರವಾರ ಸರಣಿ ಅಪಘಾತ ಸಂಭವಿಸಿದ್ದು, ಘಟನೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್ ಚಾಲಕರೊಬ್ಬರು ಮೃತಪಟ್ಟಿದ್ದಾರೆ.
ನಿಂಗಪ್ಪ ಆನೇಕಲ್ (44) ಮೃತಪಟ್ಟ ಕೆಎಸ್‌ಆರ್‌ಟಿಸಿ ಬಸ್ ಚಾಲಕರಾಗಿದ್ದಾರೆ. ಗುರುವಾರ ಬೆಳಿಗ್ಗೆ 4.30ರ ಸುಮಾರಿಗೆ ಈ ಅವಘಡ ಸಂಭವಿಸಿದೆ. ನಿರ್ಲಕ್ಷ್ಯದ ಚಾಲನೆ ಮಾಡಿ ಸಾವಿಗೆ ಕಾರಣರಾದ ಆರೋಪದಡಿ ಚಾಲಕ ಹನುಮಂತಪ್ಪ ಎಂಬುವವರನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.
ಚಾಲಕ ನಿಂಗಪ್ಪ, ಅತ್ತಿಬೆಲೆಯಿಂದ ಬಸ್ ಚಲಾಯಿಸಿಕೊಂಡು ಮೆಜೆಸ್ಟಿಕ್ ನಿಲ್ದಾಣಕ್ಕೆ ಬಂದು ಪ್ರವೇಶ ದ್ವಾರದ ಬಳಿ ಪ್ರಯಾಣಿಕರನ್ನು ಇಳಿಸಿದ್ದರು. ಬಳಿಕ ಟೀ ಕುಡಿಯಲು ನಿಂತುಕೊಂಡಿದ್ದರು. ಇದೇ ವೇಳೆ ಐರಾವತ ಬಸ್ ನ್ನು ವೇಗವಾಗಿ ಚಾಲನೆ ಮಾಡಿಕೊಂಡು ಬಂದ ಹನುಮಂತಪ್ಪ ನಿಂತಿದ್ದ ಬಸ್'ಗೆ ರಭಸದಿಂದ ಡಿಕ್ಕಿ ಹೊಡೆದಿದ್ದಾರೆ. ಪರಿಣಾಮ ಚಾಲಕ ನಿಂಗಪ್ಪ ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಇದೇ ವೇಳೆ ಬಸ್ ಬಳಿ ನಡೆದುಕೊಂಡು ಹೋಗುತ್ತಿದ್ದ ಜಾರ್ಖಾಂಡ್ ಮೂಲಕ ರಂಜಿತ್ ಕುಮಾರ್ (21) ಎಂಬುವವರೂ ತೀವ್ರವಾಗಿ ಗಾಯಗೊಂಡಿದ್ದಾರೆ. ರಂಜಿತ್ ಅವರ ಕಾಲಿಗೆ ಗಾಯಗಳಾಗಿದ್ದು, ಆರೋಗ್ಯ ಸ್ಥಿರವಾಗಿದೆ ಎಂದು ತಿಳಿದುಬಂದಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ