ಸುಸ್ಥಿರ ಅಭಿವೃದ್ಧಿ ಗುರಿ ಸೂಚ್ಯಂಕದಲ್ಲಿ ರಾಜ್ಯಕ್ಕೆ 4ನೇ ಸ್ಥಾನ

ನೀತಿ ಆಯೋಗ ಅಭಿವೃದ್ಧಿಪಡಿಸಿದ 2020-21 ನೇ ಸಾಲಿನ ಸುಸ್ಥಿರ ಅಭಿವೃದ್ಧಿ ಗುರಿ (ಎಸ್‍ಡಿಜಿ) ಸೂಚ್ಯಂಕವು ಬಿಡುಗಡೆಯಾಗಿದ್ದು, ಕರ್ನಾಟಕ ರಾಜ್ಯ ನಾಲ್ಕನೇ ಸ್ಥಾನ ಪಡೆದುಕೊಂಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ನೀತಿ ಆಯೋಗ ಅಭಿವೃದ್ಧಿಪಡಿಸಿದ 2020-21 ನೇ ಸಾಲಿನ ಸುಸ್ಥಿರ ಅಭಿವೃದ್ಧಿ ಗುರಿ (ಎಸ್‍ಡಿಜಿ) ಸೂಚ್ಯಂಕವು ಬಿಡುಗಡೆಯಾಗಿದ್ದು, ಕರ್ನಾಟಕ ರಾಜ್ಯ ನಾಲ್ಕನೇ ಸ್ಥಾನ ಪಡೆದುಕೊಂಡಿದೆ.

ಈ ವರ್ಷವೂ ಕೇರಳ ಮೊದಲ ಸ್ಥಾನ ಪಡೆದುಕೊಂಡಿದ್ದರೆ, ಬಿಹಾರ ರಾಜ್ಯ ಕೊನೇ ಸ್ಥಾನದಲ್ಲಿದೆ. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಸಾಮಾಜಿಕ, ಆರ್ಥಿಕ ಹಾಗೂ ಪರಿಸರ ಸಂಬಂಧಿ ಅಭಿವೃದ್ಧಿ ಗುರಿಗಳನ್ನು ಯಾವ ರೀತಿ ಈಡೇರಿಸಲಾಗುತ್ತಿದೆ ಎಂಬುದನ್ನು ಪರಿಗಣಿಸಿ ನೀತಿ ಆಯೋಗ ಈ ಪಟ್ಟಿಯನ್ನು ಸಿದ್ಧಪಡಿಸುತ್ತದೆ. 

ಇದರಂತೆ 100ಕ್ಕೆ 75 ಅಂಕ ಗಳಿಸುವುದರೊಂದಿಗೆ ಕೇರಳ ರಾಜ್ಯ ಮೊದಲ ಸ್ಥಾನ ಪಡೆದುಕೊಂಡಿದ್ದರೆ, 72 ಅಂಕ ಗಳಿಸಿ ಕರ್ನಾಟಕ ರಾಜ್ಯ ನಾಲ್ಕನೇ ಸ್ಥಾನ ಪಡೆದುಕೊಂಡಿದೆ. ಕಳೆದ ವರ್ಷ ರಾಜ್ಯ 66 ಅಂಕಗಳನ್ನು ಗಳಿಸಿತ್ತು. ಇದರಂತೆ 6ನೇ ಸ್ಥಾನ ಪಡೆದುಕೊಂಡಿತ್ತು. 

ಕರ್ನಾಟಕ ರಾಜ್ಯ 6 ರಿಂದ 4ನೇ ಸ್ಥಾನ ಪಡೆದುಕೊಂಡಿರುವ ಹಿನ್ನೆಲೆಯಲ್ಲಿ ಸಂತಸ ವ್ಯಕ್ತಪಡಿಸಿರುವ ಉಪಮುಖ್ಯಮಂತ್ರಿ ಡಾ.ಅಶ್ವತ್ ನಾರಾಯಣ್ ಅವರು, 2020-21ನೇ ಸಾಲಿನ ಸುಸ್ಥಿರ ಅಭಿವೃದ್ಧಿ ಗುರಿ ಸೂಚ್ಯಂಕದಲ್ಲಿ ಕರ್ನಾಟಕದ ಸ್ಥಾನ ಮೇಲೇರಿದೆ. ರಾಜ್ಯದ ಸುಸ್ಥಿರ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸಿದ್ದಕ್ಕಾಗಿ ಎಲ್ಲರಿಗೂ ಅಭಿನಂದನೆಗಳು. ಜಾಗತಿಕ ಗುರಿಗಳ ಸಾಧಿಸಲು ಬದಲಾವಣೆ ತರಲು ಸುಸ್ಥಿರತೆ, ಸ್ಥಿತಿಸ್ಥಾಪಕತ್ವ ಮತ್ತು ಸಹಭಾಗಿತ್ವದ ಹಾದಿಯಲ್ಲಿ ನಮ್ಮ ಪ್ರಯತ್ನಗಳನ್ನು ಮುಂದುವರಿಸೋಣ ಎಂದು ಹೇಳಿದ್ದಾರೆ. 

ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಚಿವ ಡಾ. ನಾರಾಯಣಗೌಡ ಅವರೂ ಈ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದು, ಅಧಿಕಾರಿಗಳ ಶ್ರಮ ಹಾಗೂ ಸಮಯೋಚಿತ ಕಾರ್ಯಾನುಷ್ಠಾನದ ಪರಿಣಾಮದಿಂದಾಗಿ ಸುಸ್ಥಿತರ ಅಭಿವೃದ್ಧಿ ಗುರಿ ಸೂಚ್ಯಂಕದಲ್ಲಿ ರಾಜ್ಯ 4ನೇ ಸ್ಥಾನ ಪಡೆದುಕೊಂಡಿದೆ. ಬಡತನ ಮುಕ್ತ, ಹಸಿವು ಮುಕ್ತ, ಲಿಂಗಸಮಾನತೆ, ಕೈಗಾರಿಕೆ, ನಾವೀನ್ಯತೆ ಮತ್ತು ಮೂಲಸೌಲಭ್ಯ ಹಾಗೂ ಸುಸ್ಥಿರ ನಗರಗಳು ಮತ್ತು ಸಮುದಾಯಗಳ ವಿಭಾಗದಲ್ಲಿ ಸಹ ರಾಜ್ಯವು ಉತ್ತಮ ಸಾಧನೆ ಮೂಲಕ ಉನ್ನತ ಮಟ್ಟಕ್ಕೇರಿದೆ ಎಂದು ಹೇಳಿದ್ದಾರೆ. 

ರಾಜ್ಯದಲ್ಲಿ ಹೆಚ್‍ಐವಿ ಪ್ರಕರಣ ಶೇ. 0.02 ಆಗಿದ್ದು, ಕರ್ನಾಟಕ ಸಂಪೂರ್ಣ ಹೆಚ್‍ಐವಿ ಮುಕ್ತವಾಗುವತ್ತ ಸಾಗಿದೆ. ಮಕ್ಕಳ ಸಾಂಸ್ಥಿಕ ಹೆರಿಗೆ ಪ್ರಮಾಣ ಸಹ ಶೇ. 99.9 ರಷ್ಟು ಇದೆ. ರಾಜ್ಯದಲ್ಲಿ 10 ಲಕ್ಷ ಜನಸಂಖ್ಯೆಗೆ 28.4 ಮೆಗಾವ್ಯಾಟ್ ಹೊಂದಿರುವ ಅತಿ ಹೆಚ್ಚು ಗ್ರಿಡ್ ಇಂಟರ್ಯಾಕ್ಟಿವ್ ಜೈವಿಕ ಶಕ್ತಿಯನ್ನು ಹೊಂದಿದೆ. ಪ್ರತಿ ಮಿಲಿಯನ್ ಹೆಕ್ಟೇರ್ ಸಂರಕ್ಷಿತ ಪ್ರದೇಶಕ್ಕೆ ಶೇ.5ಕ್ಕಿಂತ ಕಡಿಮೆ ವನ್ಯಜೀವಿ ಅಪರಾಧ ಪ್ರಕರಣಗಳಿವೆ. ಎಸ್‍ಡಿವಿ ವಿಷನ್ 2030ಕ್ಕೆ ನಿಗದಿಪಡಿಸಿದ ಗುರಿಗಳನ್ನು ತಲುಪುವ ನಿಟ್ಟಿನಲ್ಲಿ ಕರ್ನಾಟಕವು ದಾಪುಗಾಲಿಟ್ಟಿದೆ. ಯೋಜನಾ ಇಲಾಖೆಯು ಕರ್ನಾಟಕದಲ್ಲಿ ಸುಸ್ಥಿರ ಗುರಿಗಳನ್ನು ಸಾಧಿಸುವಲ್ಲಿ ನೋಡಲ್ ಇಲಾಖೆಯಾಗಿದೆ. 2020ರಲ್ಲಿ ಯೋಜನಾ ಇಲಾಖೆಯಲ್ಲಿ ಯುಎನ್‍ಡಿಪಿಯ ಸಹಯೋಗದೊಂದಿಗೆ ಸುಸ್ಥಿರ ಗುರಿಗಳ ಸಮನ್ವಯ ಕೇಂದ್ರವನ್ನೂ ಸ್ಥಾಪಿಸಲಾಗಿದೆ.

ಪ್ರಸಕ್ತ ಸಾಲಿನಲ್ಲಿ ರಾಜ್ಯವು 6 ರಿಂದ 4 ನೇ ಸ್ಥಾನಕ್ಕೆ ಜಿಗಿದಿದ್ದು, ಮುಂಬರುವ ವರ್ಷಗಳಲ್ಲಿ ಕರ್ನಾಟಕವು ಸುಸ್ಥಿತರ ಅಭಿವೃದ್ಧಿ ಗುರಿ (ಎಸ್‍ಡಿಜಿ) ಸೂಚ್ಯಂಕದಲ್ಲಿ ಮೊದಲ ಸ್ಥಾನ ಪಡೆಯುವ ಗುರಿಯನ್ನು ಹೊಂದಲಾಗಿದೆ ಎಂದು ಸಚಿವ ಡಾ. ನಾರಾಯಣಗೌಡ ತಿಳಿಸಿದ್ದಾರೆ. ಅಲ್ಲದೆ ಯೋಜನೆ, ಕಾರ್ಯಕ್ರಮ ಸಂಯೋಜನೆ, ಸಾಂಖ್ಯಿಕ ಇಲಾಖೆ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಸೇರಿದಂತೆ ಇಲಾಖೆಯ ಎಲ್ಲ ಅಧಿಕಾರಿಗಳು, ಸಿಬ್ಬಂದಿಗಳ ಕಾರ್ಯವನ್ನು ಸಚಿವರು ಶ್ಲಾಘಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com