ಇತರರಿಗೆ ಸಹಾಯ ಮಾಡಲು ಮೊದಲು ನಾವು ಆತಂಕದಿಂದ ಹೊರಬರಬೇಕಿದೆ: ರಾಷ್ಟ್ರೀಯ ಯುವ ಕಾಂಗ್ರೆಸ್‌ ಅಧ್ಯಕ್ಷ ಬಿ.ವಿ.ಶ್ರೀನಿವಾಸ್‌

ಕೊರೋನಾ ಸಾಂಕ್ರಾಮಿಕ ರೋಗ ಇಡೀ ದೇಶವನ್ನು ಸಾಕಷ್ಟು ನೋವಿಗೆ ದೂಡಿದ್ದು, ಆಕ್ಸಿಜನ್‌ ಕೊರತೆ, ಆಸ್ಪತ್ರೆಗಳ ಹಾಸಿಗೆ ಅಲಭ್ಯತೆ ಮತ್ತು ಪ್ಲಾಸ್ಮಾ ಬೇಡಿಕೆಗಾಗಿ ಹಾಹಾಕಾರ ಶುರುವಾಗಿದೆ. ಇಂತಹ ಕೊರತೆ ಕಂಡ ಕಡೆ ರಾಷ್ಟ್ರೀಯ ಯುವ ಕಾಂಗ್ರೆಸ್‌ ಅಧ್ಯಕ್ಷ ಬಿ.ವಿ.ಶ್ರೀನಿವಾಸ್‌ ಮತ್ತು ಅವರ ತಂಡ ತುರ್ತು ನೆರವಿಗೆ ಧಾವಿಸುತ್ತಿದ್ದು, ಸಹಾಯದ ಹಸ್ತ ಚಾಚುತ್ತಿದ್ದಾರೆ. 
ರಾಷ್ಟ್ರೀಯ ಯುವ ಕಾಂಗ್ರೆಸ್‌ ಅಧ್ಯಕ್ಷ ಬಿ.ವಿ.ಶ್ರೀನಿವಾಸ್‌
ರಾಷ್ಟ್ರೀಯ ಯುವ ಕಾಂಗ್ರೆಸ್‌ ಅಧ್ಯಕ್ಷ ಬಿ.ವಿ.ಶ್ರೀನಿವಾಸ್‌

ಬೆಂಗಳೂರು: ಕೊರೋನಾ ಸಾಂಕ್ರಾಮಿಕ ರೋಗ ಇಡೀ ದೇಶವನ್ನು ಸಾಕಷ್ಟು ನೋವಿಗೆ ದೂಡಿದ್ದು, ಆಕ್ಸಿಜನ್‌ ಕೊರತೆ, ಆಸ್ಪತ್ರೆಗಳ ಹಾಸಿಗೆ ಅಲಭ್ಯತೆ ಮತ್ತು ಪ್ಲಾಸ್ಮಾ ಬೇಡಿಕೆಗಾಗಿ ಹಾಹಾಕಾರ ಶುರುವಾಗಿದೆ. ಇಂತಹ ಕೊರತೆ ಕಂಡ ಕಡೆ ರಾಷ್ಟ್ರೀಯ ಯುವ ಕಾಂಗ್ರೆಸ್‌ ಅಧ್ಯಕ್ಷ ಬಿ.ವಿ.ಶ್ರೀನಿವಾಸ್‌ ಮತ್ತು ಅವರ ತಂಡ ತುರ್ತು ನೆರವಿಗೆ ಧಾವಿಸುತ್ತಿದ್ದು, ಸಹಾಯದ ಹಸ್ತ ಚಾಚುತ್ತಿದ್ದಾರೆ. 

ದಿ ನ್ಯೂ ಇಂಡಿಯನ್ ಎಕ್ಸ್'ಪ್ರೆಸ್ ನಡೆಸಿದ ಸಂದರ್ಶನದಲ್ಲಿ ಮಾತನಾಡಿರುವ ಬಿ.ವಿ.ಶ್ರೀನಿವಾಸ್‌ ಅವಕು. ಒಬ್ಬ ವ್ಯಕ್ತಿ ಮತ್ತೊಬ್ಬ ವ್ಯಕ್ತಿಗೆ ಸಹಾಯ ಮಾಡುತ್ತಿದ್ದರೆ, ನಮ್ಮ ದೇಶದಲ್ಲಿ ಜನರು ಚಿಕಿತ್ಸೆ ಸಿಗದೆ ಬೀದಿಗಳಲ್ಲಿ ಸಾಯುವ ಪರಿಸ್ಥಿತಿ ಎದುರಾಗುವುದಿಲ್ಲ ಎಂದು ಹೇಳಿದ್ದಾರೆ. 

ಜನರಿಗೆ ಸಹಾಯ ಮಾಡಲು ಯುವ ಕಾಂಗ್ರೆಸ್ ಏನು ಮಾಡುತ್ತಿದೆ? 
ಕೊರೋನಾ ಮೊದಲ ಅಲೆಯಲ್ಲಿ ಕಾರ್ಯನಿರ್ವಹಿಸಿದ್ದ 600 ಮಂದಿ ಸೇರಿದಂತೆ 1000 ಸ್ವಯಂ ಸೇವಕರ ತಂಡ ಸೇವೆಗಳನ್ನು ಮಾಡುತ್ತಿದೆ. ಹಾಸಿಗೆಗಳು, ಆಮ್ಲಜನಕ, ಔಷಧ ಮತ್ತು ಪ್ಲಾಸ್ಮಾ ಸಮಸ್ಯೆಗಳನ್ನು ಜನರು ಎದುರಿಸುತ್ತಿದ್ದಾರೆ. ಈ ಸಮಸ್ಯೆಗಳನ್ನು ನಿರ್ವಹಿಸಲು ನಾವು ತಂಡವನ್ನು ನಿಯೋಜಿಸಿದ್ದೇವೆ. ಪ್ಲಾಸ್ಮಾ ಗಾಗಿ ಸಮಸ್ಯೆ ಎದುರಿಸುವವರಿಗೆ ನೆರವಾಗಲು ಪ್ರತ್ಯೇಕ ತಂಡವಿದೆ ಈ ತಂಡ ಕೋವಿಡ್‌ನಿಂದ ಚೇತರಿಸಿಕೊಂಡ ಜನರನ್ನು ಗುರ್ತಿಸಿ, ಅವರು ಪ್ಲಾಸ್ಮಾ ದಾನ ಮಾಡುವಂತೆ ಮನವರಿಕೆ ಮಾಡುತ್ತದೆ. ಹಾಸಿಗಾಗಿ ಹುಡುಕಾಡುವ ಜನರಿಗೆ ಔಷಧಿ ಹಾಗೂ ಹಾಸಿಗೆ, ಆಕ್ಸಿಜನ್ ವ್ಯವಸ್ಥೆಗಳನ್ನು ಮಾಡುತ್ತಿದ್ದೇವೆ. ಸೋಂಕಿತರಿಗೆ ವೈದ್ಯರೊಂದಿಗೆ ಸಮಾಲೋಚನೆ ನಡೆಸುವುದು, ಔಷಧಿ ಕಿಟ್, ಆಹಾರ ನೀಡುವ ಕೆಲಸಗಳನ್ನು ಮಾಡುತ್ತಿದ್ದೇವೆ. 

ಸಹಾಯ ಪಡೆಯಲಿಚ್ಛಿಸುವ ಜನರು ನಿಮ್ಮನ್ನು ಸಂಪರ್ಕಿಸುವುದು ಹೇಗೆ?
ಜನರು ನಮಗೆ ಫೋನ್, ಮೆಸೇಜ್ ಹಾಗೂ ವಾಟ್ಸ್ಆ್ಯಪ್ ಗ್ರೂಪ್ ನಿಂದ ನಮ್ಮನ್ನು ಸಂಪರ್ಕಿಸಬಹುದು. ಸಾಮಾಜಿಕ ಜಾಲತಾಣಗಳ ಮೂಲಕವೂ ಸಂಪರ್ಕಿಸಬಹುದು. ನೆರವು ಪಡೆಯಲಿಚ್ಛಿಸುವವರಿಗೆ ರಾಜ್ಯ ಕಾಂಗ್ರೆಸ್ ಕಚೇರಿ ಕೂಡ ಸಹಾಯ ಮಾಡುತ್ತಿದೆ. ಸಹಾಯಕ್ಕಾಗಿ ದೆಹಲಿ ಕಚೇರಿಗೆ ಬರುವ ಮನವಿಗಳನ್ನು ನಂತರದ ಆಯಾ ರಾಜ್ಯಗಳಲ್ಲಿರುವ ಕಾಂಗ್ರೆಸ್ ಕಚೇರಿಗಳಿಗೆ ರವಾನಿಸಲಾಗುತ್ತದೆ. ನಮ್ಮಿಂದ ಸಾಧ್ಯವಾದಷ್ಟು ಜನರಿಗೆ ಸಹಾಯ ಮಾಡಲು ನಾವು ಶ್ರಮಿಸುತ್ತಿದ್ದೇವೆ. 

ಯುವ ಕಾಂಗ್ರೆಸ ಕೊನೆಯ ಬಾರಿ ಈ ರೀತಿಯ ನೆರವಿನ ಕಾರ್ಯ ಮಾಡಿದ್ದು ಯಾವಾಗ? ಇದೀಗ ಮತ್ತೆ ಆ ಕಾರ್ಯ ಮಾಡಲು ನಿಮ್ಮನ್ನು ಪ್ರೇರೇಪಿಸಿದ ಅಂಶ ಯಾವುದು? 
ಸಹಾಯ ಮಾಡುವುದು ನಮ್ಮ ಪಕ್ಷದ ಸಂಪ್ರದಾಯ. ನಾವು ಇದನ್ನು ಮೊದಲಿನಿಂದಲೂ ಮಾಡಿಕೊಂಡು ಬರುತ್ತಲೇ ಇದ್ದೇವೆ. ಉತ್ತರಾಖಂಡ ಪ್ರವಾಹದ ಸಂದರ್ಭದಲ್ಲೂ ನೆರವಿನ ಕಾರ್ಯಾಚರಣೆ ನಡೆಸಿದ್ದೆವು. ಬಿಹಾರ, ಜಮ್ಮು ಮತ್ತು ಕಾಶ್ಮೀರ, ತಮಿಳುನಾಡು, ಕೇರಳ, ಒಡಿಶಾ ಹಾಗೂ ಇತರೆ ರಾಜ್ಯಗಳಲ್ಲೂ ಮಾಡಿದ್ದೇವೆ. ಈ ಮೊದಲು, ನಮ್ಮ ಕೆಲಸ ಒಂದು ನಿರ್ದಿಷ್ಟ ರಾಜ್ಯ ಅಥವಾ ಒಂದು ರಾಜ್ಯದ ನಾಲ್ಕು ಅಥವಾ ಐದು ಜಿಲ್ಲೆಗಳಿಗಷ್ಟೇ ಸೀಮಿತವಾಗಿತ್ತು. ಹೀಗಾಗಿ ನಮ್ಮ ನೆರವಿನ ಕೆಲಸದ ಕುರಿತು ಯಾರಿಗೂ ಮಾಹಿತಿ ಇರಲಿಲ್ಲ. ಇದೀಗ ನಮ್ಮ ತಂಡ ಇಡೀ ದೇಶದಾದ್ಯಂತ ಕೆಲಸ ಮಾಡುತ್ತಿದೆ. ಎಲ್ಲರಿಗೂ ನೆರವು ಹಾಗೂ ಸಹಾಯ ಮಾಡುವಂತೆ ರಾಹುಲ್ ಗಾಂಧಿಯವರು ಕರೆ ನೀಡಿದ್ದು, ಇದೇ ನಮಗೆ ಪ್ರೇರಣೆಯಾಗಿದೆ. ನಾನೊಬ್ಬ ಅಲ್ಲ, ಇಡೀ ತಂಡ ಕೆಲಸ ಮಾಡುತ್ತಿದೆ. ನಮ್ಮ ಶ್ರಮವನ್ನು ಪಕ್ಷ ಬೆಂಬಲಿಸುತ್ತಿದೆ.

ನ್ಯೂಜಿಲೆಂಡ್ ರಾಯಭಾರಿ ಕಚೇರಿ ನೌಕರರಿಗೆ ನೀವು ಮಾಡಿದ್ದ ಸಹಾಯವನ್ನು ಪ್ರಚಾರಕ್ಕಾಗಿ ಎಂದು ಹೇಳಲಾಗುತ್ತಿದೆ...? 
ಅತಿಥಿಗಳಿಗೆ ಸಹಾಯ ಮಾಡುವುದು ಭಾರತೀಯ ಸಂಸ್ಕೃತಿ. ಇದರಲ್ಲಿ ಯಾರಾದರು ದೋಷ ಹುಡುಕುವಾದಾದರೂ ಹೇಗೆ ಸಾಧ್ಯ? ಸಹಾಯಕ್ಕಾಗಿ ಅವರು ಮೊರೆ ಇಟ್ಟಿದ್ದರು. ನಾವು ಸಹಾಯ ಮಾಡಿದ್ದೆವು. ಅಧಿಕೃತ ಟ್ವಿಟರ್ ಖಾತೆಯಿಂದಲೇ ನಮಗೆ ಮನವಿ ಬಂದಿತ್ತು. ಬೇರೆಯವರು ಏನು ಹೇಳುತ್ತಾರೆಂಬುದರ ಕುರಿತು ಆಲೋಚನೆ ಮಾಡುವ ಸಮಯದ ಅದಾಗಿರಲಿಲ್ಲ. ಕೇವಲ ಸಹಾಯ ಮಾಡುವುದು, ಜೀವ ಉಳಿಸುವುದಷ್ಟೇ ನಮಗೆ ಮುಖ್ಯವಾಗಿತ್ತು. 

ನಿಮಗೆ ಹಾಗೂ ನಿಮ್ಮ ತಂಡದವರಿಗೆ ಆತಂಕವಾಗುತ್ತಿಲ್ಲವೇ? 
ಖಂಡಿತವಾಗಿಯೂ ನಮಗೂ ಭಯವಿದೆ. ಪ್ರತೀಯೊಬ್ಬರಿಗೂ ಭಯವಿದೆ. ನನ್ನ ತಾಯಿ ದಿನಕ್ಕೆ ನನಗೆ ಮೂರು ಬಾರಿ ದೂರವಾಣಿ ಕರೆ ಮಾಡುತ್ತಾರೆ. ಆದರೆ, ಬೇರೆಯವರಿಗೆ ಸಹಾಯ ಮಾಡಬೇಕೆಂದರೆ ಮೊದಲು ನಾವು ಆತಂಕದಿಂದ ಹೊರಬರಬೇಕು. ಸಣ್ಣ ಹುಡುಗನೊಬ್ಬ ಮನೆಗೆ ಹೊತ್ತುಕೊಂಡಿದ್ದ ಬೆಂಕಿ ಆರಿಸಲು ತನ್ನ ಪುಟ್ಟ ಕೈಗಳಿಂದ ನೀರು ತಂದು ಬೆಂಕಿ ಆರಿಸಲು ಯತ್ನಿಸುತ್ತಿದ್ದ. ಅದೇ ಮನೆಯ ಪಕ್ಕದಲ್ಲಿ ವಾಸವಿದ್ದ ವ್ಯಕ್ತಿಯೊಬ್ಬ ಬಂದು ಕೈಗಳಿಂದ ನೀರು ತಂದು ಬೆಂಕಿ ಆರಿಸಲು ಸಾಧ್ಯವೇ ಎಂದು ಬಾಲಕನ ಪ್ರಶ್ನಿಸಿದ್ದ. ಇದಕ್ಕೆ ಉತ್ತರಿಸಿದ ಬಾಲಕ, ನನ್ನಿಂದ ಸಾಧ್ಯವೋ, ಸಾಧ್ಯವಿಲ್ಲವೋ ಪ್ರಯತ್ನ ಮಾಡುವುದು ಮುಖ್ಯ ಎಂದು ಹೇಳಿದ್ದ. ನಿಂತು ನೋಡುವುದಕ್ಕಿಂತ ಪ್ರತಿಯೊಬ್ಬರೂ ಪ್ರಯತ್ನಿಸಿದಾಗ ಮಾತ್ರ ಕಾರ್ಯ ಪೂರ್ಣಗೊಳ್ಳಲು ಸಾಧ್ಯ. 

ನಿಮ್ಮನ್ನು ಹೆಚ್ಚು ಪ್ರಚೋದಿಸಿದ ಯಾವುದೇ ನಿರ್ದಿಷ್ಟ ಘಟನೆ ಇದೆಯೇ? 
ಒಬ್ಬ ವ್ಯಕ್ತಿಗೆ ಔಷಧಿ ನೀಡಲು ದೆಹಲಿಯ ಎಲ್‌ಎನ್‌ಜೆಪಿ ಆಸ್ಪತ್ರೆಗೆ ಹೋಗಿದ್ದೆ. ಈ ವೇಳೆ ಆಸ್ಪತ್ರೆಯ ಮುಂದೆ ಸರದಿಯಲ್ಲಿ 15 ಆಂಬುಲೆನ್ಸ್‌ ನಿಂತಿರುವುದನ್ನು ನೋಡಿದ್ದೆ. ಆ ಆಂಬ್ಯುಲೆನ್ಸ್ ಒಂದರಲ್ಲಿ, ಉಸಿರಾಡಲು ಕಷ್ಟಪಡುತ್ತಿದ್ದ ರೋಗಿಯೊಂದಿಗೆ ನಾನು ಮಾತನಾಡಿದ್ದೆ. ಮರಳಿ ಬಂದು ಸಹಾಯ ಮಾಡುತ್ತೇನೆಂದು ಹೇಳಿದೆ. 25 ನಿಮಿಷಗಳ ನಂತರ ಆಸ್ಪತ್ರೆಗೆ ಬಂದಿದ್ದೆ. ಅಷ್ಟರಲ್ಲಾಗಲೇ ವ್ಯಕ್ತಿ ಸತ್ತು ಹೋಗಿದ್ದ. ಈ ವೇಳೆ ನನ್ನ ಹೃದಯವೇ ಒಡೆದು ಹೋದ ಅನುಭವವಾಗಿತ್ತು. ನಾನು ಇಂತಹ ಸಾಕಷ್ಟು ಸಂದರ್ಭಗಳನ್ನು ನೋಡುತ್ತಿದ್ದೇವೆ. ನಾಲ್ಕು ಅಥವಾ ಐದು ಜನರು ಆಸ್ಪತ್ರೆಗೆ ಹೋದರೂ ಆಸ್ಪತ್ರೆಗಳಲ್ಲಿ ಹಾಸಿಗೆ ಸಿಗುತ್ತಿಲ್ಲ. ಸಮಯ ಸಿಕ್ಕಾಗ ನಾವು ಸಿದ್ಧತೆ ಮಾಡಿಕೊಳ್ಳಬೇಕು. ಆಕ್ಸಿಜನ್ ಕೊರತೆಯಿಂದ ಜನರು ಸಾಯುತ್ತಿರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ. 

ರಾಜಕೀಯದ ಬಗ್ಗೆ ಮಾತನಾಡುವುದರಲ್ಲಿ ಯಾವುದೇ ಅರ್ಥವಿಲ್ಲ. ಅಧಿಕಾರದಲ್ಲಿರುವ ಸರ್ಕಾರವನ್ನು ಲೆಕ್ಕಿಸದೆ ನಾವು ಇತರರಿಗೆ ಸಹಾಯ ಮಾಡಬೇಕು ಎಂಬುದನ್ನು ಯುವ ರಾಜಕಾರಣಿಗಳು ಅರ್ಥಮಾಡಿಕೊಳ್ಳಬೇಕು. ಮುಂದೆ ಬಂದು ಇತರರ ನೋವಿಗೆ ಸ್ಪಂದಿಸುವುದು ಪ್ರತಿಯೊಬ್ಬ ನಾಗರಿಕನ, ವಿಶೇಷವಾಗಿ ಯುವಕರ ಜವಾಬ್ದಾರಿಯಾಗಿದೆ. ಒಬ್ಬ ವ್ಯಕ್ತಿಯು ಇನ್ನೊಬ್ಬರಿಗೆ ಸಹಾಯ ಮಾಡಿದರೆ, ಜನರು ಚಿಕಿತ್ಸೆಯಿಲ್ಲದೆ ರಸ್ತೆಗಳಲ್ಲಿ ಸಾಯುವ ಪರಿಸ್ಥಿತಿ ಎದುರಾಗುವುದಿಲ್ಲ,

ಇಡೀ ದೇಶಕ್ಕೆ ಲಾಕ್ಡೌನ್ ಅಗತ್ಯವಿದೆ ಎಂದು ಎನಿಸುತ್ತಿದೆಯೇ? 
ಖಂಡಿತವಾಗಿಯೂ ಹೌದು. ಸೂಕ್ತ ಯೋಜನೆಗಳೊಂದಿಗೆ ಲಾಕ್ಡೌನ್ ಅಗತ್ಯವಿದೆ. ರಾಜಕೀಯವನ್ನು ಬದಿಗೊತ್ತಿ, ಪ್ರತಿಷ್ಠೆಯನ್ನು ಪಕ್ಕಕ್ಕಿಟ್ಟು ದೇಶಕ್ಕಾಗಿ ಉತ್ತಮ ಕಾರ್ಯಗಳನ್ನು ಮಾಡಬೇಕಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com