ಕೊರೋನಾ ಲಾಕ್ಡೌನ್ ನಿಯಮ ಉಲ್ಲಂಘಿಸಿದವರಿಗೆ ಹಾರ ಹಾಕಿ, ಮಂಗಳಾರತಿ ಮಾಡಿದ ಪೊಲೀಸರು!
ಬೆಂಗಳೂರು: ಮಹಾಮಾರಿ ಕೊರೋನಾ ಸೋಂಕು ನಿಯಂತ್ರಣಕ್ಕೆ ಜಾರಿಗೊಳಿಸಿರುವ ಸೆಮಿ ಲಾಕ್ಡೌನ್ ವೇಳೆ ನಿಯಮ ಉಲ್ಲಂಘಿಸಿದ ಜನರಿಗೆ ರಾಜಧಾನಿ ಪೊಲೀಸರು ಹಾರ ಹಾಕಿ, ಮಂಗಳಾರತಿ ಮಾಡಿ ಸನ್ಮಾನ ಮಾಡಿದ್ದಾರೆ.
ನಗರದ ಮಾದನಾಯಕನಹಳ್ಳಿ ಪೊಲೀಸರು ನಿಯಮ ಉಲ್ಲಂಘಿಸಿ ಹೊರಬಂದವರ ವಾಹನಗಳನ್ನು ವಶಕ್ಕೆ ಪಡೆದುಕೊಂಡಿದ್ದು, ಈ ವೇಳೆ ಬೈಕ್ ಸವಾರರಿಗೆ ಹಾರಹಾಕಿ, ಮಂಗಳಾರತಿ ಮಾಡಿದ್ದಾರೆ.
ನಿನ್ನೆ ಬೆಳಿಗ್ಗೆ 10.30 ರಿಂದ ವಾಹನ ತಪಾಸಣೆ ಆರಂಭಿಸಲಾಗಿತ್ತು. ಈ ವೇಳೆ ಆಟೋ, ದ್ವಿಚಕ್ರ ವಾಹನ ಸೇರಿದಂತೆ ಒಂದೇ ದಿನ 30ಕ್ಕೂ ಹೆಚ್ಚು ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ. ವೈದ್ಯಕೀಯ ತುರ್ತು ಕೆಲಸಗಳಿಗೆ ಹೋಗುತ್ತಿದ್ದವರಿಗೆ ಚಲಿಸಲು ಅನುಮತಿಸಲಾಗಿತ್ತು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ನಮ್ಮ ಸಿಬ್ಬಂದಿಗಳು ಲಾಕ್ಡೌನ್ ನಿಯಮಗ ಉಲ್ಲಂಘಿಸಿದವರಿಗೆ ಸನ್ಮಾನ ಮಾಡಲು 25 ಹೂವಿನ ಹಾರಗಳನ್ನು ತಂದಿದ್ದರು. ಈ ಮೂಲಕ ವಾಹನ ವಶಕ್ಕೆ ಪಡೆದು, ನಿಯಮ ಉಲ್ಲಂಘಿಸಿದವರಿಗೆ ವಿಶೇಷ ರೀತಿಯಲ್ಲಿ ಎಚ್ಚರಿಕೆ ನೀಡಲಾಯಿತು ಎಂದು ಮಾದನಾಯಕನಹಳ್ಳಿ ಪೊಲೀಸ್ ಠಾಣೆ ಇನ್ಸ್'ಪೆಕ್ಟರ್ ಮಂಜುನಾಥ್ ಬಿ.ಎಸ್ ಅವರು ತಿಳಿಸಿದ್ದಾರೆ.


