ದೆಹಲಿ ರೀತಿ ಬೆಂಗಳೂರಿನಲ್ಲೂ 'ಮೊಹಲ್ಲಾ ಕ್ಲಿನಿಕ್' ಆರಂಭಕ್ಕೆ ರಾಜ್ಯ ಸರ್ಕಾರ ಮುಂದು!
ಬೆಂಗಳೂರು: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷ ಜಾರಿಗೆ ತಂದ ಮೊಹಲ್ಲಾ ಕ್ಲಿನಿಕ್ ಯಶಸ್ವಿಯಾಗಿದ್ದು, ರಾಜ್ಯದಲ್ಲೂ ಆ ರೀತಿಯ ಆರೋಗ್ಯ ಕೇಂದ್ರಗಳನ್ನು ಪ್ರಾರಂಭಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.
ರಾಷ್ಟ್ರೀಯ ನಗರ ಆರೋಗ್ಯ ಅಭಿಯಾನ (ಎನ್‌ಯುಎಚ್‌ಎಂ) ಅಡಿಯಲ್ಲಿ ಬೆಂಗಳೂರಿನಲ್ಲಿ ಉಚಿತ ಆರೋಗ್ಯ ಕೇಂದ್ರಗಳನ್ನು ತೆರೆಯಲು ಮುಂದಾಗಿರುವ ರಾಜ್ಯ ಸರ್ಕಾರ ಈ ಯೋಜನೆಗೆ ಜನಾರೋಗ್ಯ ಕ್ಷೇಮ ಕೇಂದ್ರ ಎಂದು ಹೆಸರಿಸಲು ಚಿಂತನೆ ನಡೆಸುತ್ತಿದ್ದು, ಬಿಬಿಎಂಪಿ ಇದರ ನಿರ್ವಹಣೆ ಮಾಡಲಿದೆ ಎಂದು ವರದಿಗಳು ತಿಳಿಸಿವೆ.
ಬೆಂಗಳೂರಿನಲ್ಲಿ 141 ವಾರ್ಡ್ ಗಳಲ್ಲಿ ಪ್ರಸ್ತುತ 141 ಪ್ರಾಥಮಿಕ ಆರೋಗ್ಯ ಕೇಂದ್ರಗಳಿದ್ದು, ಇನ್ನುಳಿದ 57 ವಾರ್ಡ್ ಗಳಲ್ಲಿ ಯಾವುದೇ ಪ್ರಾಥಮಿಕ ಆರೋಗ್ಯ ಕೇಂದ್ರಗಳಲಿಲ್ಲ.
ನೋಡಲ್ ಅಧಿಕಾರಿ ಪ್ರಭು ಗೌಡ ಅವರು ಮಾತನಾಡಿ, ಆರೋಗ್ಯ ಕೇಂದ್ರಗಳಲ್ಲಿ ವೈದ್ಯಕೀಯ ಅಧಿಕಾರಿಗಳು, ನರ್ಸ್, ಲ್ಯಾಬ್ ಟೆಕ್ನಿಷಿಯನ್, ಫಾರ್ಮಸಿಸ್ಟ್, ಗ್ರೂಪ್ ಡಿ ನೌಕರರು ಕಾರ್ಯನಿರ್ವಹಿಸಿದ್ದಾರೆಂದು ಮಾಹಿತಿ ನೀಡಿದ್ದಾರೆ.
ನೇಮಕಾತಿ ಪ್ರಕ್ರಿಯೆಯನ್ನು ಈಗಾಗಲೇ ಬಿಬಿಎಂಪಿ ಆರಂಭಿಸಿದ್ದು, ಜೂನ್ 2ನೇ ವಾರದಲ್ಲಿ ಕೇಂದ್ರಗಳು ಕಾರ್ಯ ಆರಂಭಿಸಲಿದೆ ಎಂದು ತಿಳಿದುಬಂದಿದೆ.
ಬಿಬಿಎಂಪಿ ಈ ಕೇಂದ್ರಗಳ ನಿರ್ವಹಣೆ ಮಾಡಲಿದೆ. ವಾರ್ಡ್ ಕಚೇರಿ ಅಥವಾ ಸರ್ಕಾರಿ ಕಚೇರಿಗಳ ಬಳಿ ಈ ಕೇಂದ್ರಗಳನ್ನು ಆರಂಭಿಸಲಾಗುತ್ತಿದೆ. ಒಂದು ವೇಳೆ ವಾರ್ಡ್ ನಲ್ಲಿ ಯಾವುದೇ ಸರ್ಕಾರಿ ಕಚೇರಿ ಅಥವಾ ಬಿಬಿಎಂಪಿ ಕಟ್ಟಡ ಇಲ್ಲದೇ ಹೋದಲ್ಲಿ ಕಟ್ಟಡವನ್ನು ಬಾಡಿಗೆಗೆ ಪಡೆದು ಆರೋಗ್ಯ ಕೇಂದ್ರವನ್ನು ಆರಂಭಿಸಲಿದೆ ಎಂದು ಪ್ರಭು ಗೌಡ ಅವರು ತಿಳಿಸಿದ್ದಾರೆ.
ಪ್ರತೀ ಆರೋಗ್ಯ ಕೇಂದ್ರ ಬೆಳಿಗ್ಗೆ 9 ಗಂಟೆಯಿಂದ ಸಂಜೆ 3 ಗಂಟೆವರೆಗೆ ಕಾರ್ಯನಿರ್ವಹಿಸಿವೆ. ಪ್ರತೀ ಆರೋಗ್ಯ ಕೇಂದ್ರದಲ್ಲಿಯೂ ಔಷಧಿ ಮಳಿಗೆ ಹಾಗೂ ಲ್ಯಾಬ್ ಗಳು ಇರಲಿವೆ. ಪ್ರತೀ ಲ್ಯಾಬ್ ನಲ್ಲಿಯೂ, ಮೂತ್ರ ಹಾಗೂ ರಕ್ತ ಸೇರಿದಂತೆ ಇದರೆ ಸಾಮಾನ್ಯ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಹೆಚ್ಚಿನ ಚಿಕಿತ್ಸೆಗಾಗಿ ಹತ್ತಿರದಲ್ಲಿರುವ ಸರ್ಕಾರಿ ಆಸ್ಪತ್ರೆಗಳಿಗೆ ಶಿಫಾರಸು ಮಾಡಲಾಗುತ್ತದೆ. ಮುಂದಿನ ದಿನಗಳಲ್ಲಿ ದೊಡ್ಡ ಆಸ್ಪತ್ರೆಗಳಲ್ಲಿ ಅಪ್ ಗ್ರೇಡ್ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ