ಮಳೆಯಿಂದ ಎದುರಾದ ಹಾನಿ ವಿಡಿಯೋಗಳ ಸಿದ್ಧವಾಗಿಟ್ಟುಕೊಳ್ಳಿ: ಅಧಿಕಾರಿಗಳಿಗೆ ಸಿಎಂ ಬೊಮ್ಮಾಯಿ ಸೂಚನೆ
ಬೆಂಗಳೂರು: ರಾಜ್ಯದ ಹಲವೆಡೆ ಅಕಾಲಿಕ ಮಳೆಯಿಂದ ಉಂಟಾಗಿರುವ ಪರಿಸ್ಥಿತಿಯ ಅವಲೋಕನಕ್ಕಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳೊಂದಿಗೆ (ಸಿಇಒ) ಶುಕ್ರವಾರ ಸಭೆ ನಡೆಸಿದರು.
“ಕರ್ನಾಟಕದಲ್ಲಿ ಮಳೆ ಮತ್ತು ಪ್ರವಾಹದಿಂದ ಆಗಿರುವ ನಷ್ಟವನ್ನು ಪರಿಶೀಲನೆ ನಡೆಸಲು ಮುಂದಿನ ಬಾರಿ ಕೇಂದ್ರ ತಂಡ ಬಂದಾಗ, ಡಿಸಿಗಳು ಮತ್ತು ಜಿಪಿ ಸಿಇಒಗಳು ಸೇರಿದಂತೆ ಸಂಬಂಧಿಸಿದ ಅಧಿಕಾರಿಗಳು ಅವರ ಮೇಲೆ ಪ್ರಭಾವ ಬೀರಲು ವೀಡಿಯೊಗಳು ಮತ್ತು ಛಾಯಾಚಿತ್ರಗಳು ಸೇರಿದಂತೆ ಇತರೆ ಸಾಕ್ಷ್ಯ, ವರದಿಗಳನ್ನು ಸಿದ್ಧವಾಗಿಟ್ಟುಕೊಂಡಿರಬೇಕು ಎಂದು ಸೂಚನೆ ಸಭೆಯಲ್ಲಿ ಸೂಚನೆ ನೀಡಿದ್ದಾರೆಂದು ತಿಳಿದುಬಂದಿದೆ.
ಕೇಂದ್ರದ ತಂಡ ಭೇಟಿ ನೀಡಿದ ಸಂದರ್ಭದಲ್ಲಿ ಪ್ರಸ್ತುತ ಪರಿಸ್ಥಿತಿ ಸುಧಾರಿಸಿರಬಹುದು. ಆದರೆ, ಇಂದಿನ ಪರಿಸ್ಥಿತಿ ಕುರಿತು ವಿಡಿಯೋಗಳನ್ನು ಅಧಿಕಾರಿಗಳು ಸಿದ್ಧವಾಗಿಟ್ಟುಕೊಂಡಿರಬೇಕು. ಇದರಿಂದ ರಾಜ್ಯವು ತನ್ನ ಪಾಲಿನ ಪರಿಹಾರ ಪಡೆದುಕೊಳ್ಳಲು ಸಹಾಯಕವಾಗಲಿದೆ ಎಂದು ತಿಳಿಸಿದ್ದಾರೆ.
ಅನುದಾನ ಇಲ್ಲ ಎಂಬ ನೆಪ ಹೇಳದೆ ಕೂಡಲೇ ಜಿಲ್ಲಾಡಳಿತಗಳ ಬಳಿ ಇರುವ ಎನ್'ಡಿಆರ್'ಎಫ್ ಅನುದಾನದಲ್ಲಿ ಪರಿಹಾರ ಕಾರ್ಯ ಆರಂಭಿಸಬೇಕು. ಬೆಳೆ ಹಾನಿಗೆ ಎನ್'ಡಿಆರ್'ಎಫ್ ಮಾರ್ಗಸೂಚಿ ಅನುಸಾರ ಪರಿಹಾರ ಒದಗಿಸಿ. ಸಂಪೂರ್ಣ ಮನೆ ಕುಸಿತ ಪ್ರಕರಣಗಳಲ್ಲಿ ತಾತ್ಕಾಲಿಕವಾಗಿ ತಲಾ ರೂ.1 ಲಕ್ಷ, ಭಾಗಶ ಮನೆ ಕುಸಿತ ಪ್ರಕರಣಗಳಿಗೆ ತಲಾ ರೂ.10 ಸಾವಿರ ಪರಿಹಾರ ನೀಡಬೇಕು. ಉಳಿದಂತೆ ಜನ, ಜಾನುವಾರುಗಳ ಪ್ರಾಣ ಹಾನಿಗೆ ನಿಯಮಾನುಸಾರ ತಕ್ಷಣ ಪರಿಹಾರ ನೀಡಬೇಕು ಎಂದು ಸೂಚನೆ ನೀಡಿದ್ದಾರೆಂದು ಮೂಲಗಳು ಮಾಹಿತಿ ನೀಡಿವೆ.
ಇದನ್ನೂ ಓದಿ: ಭಾರೀ ಮಳೆ: ಶಿವಮೊಗ್ಗದಲ್ಲಿ 112 ಹೆಕ್ಟೇರ್ ಬೆಳೆ ನಾಶ
ಇದೇ ವೇಳೆ ಮಳೆ ಹಾನಿಯನ್ನು ಕೃಷಿ, ತೋಟಗಾರಿಕೆ ಹಾಗೂ ಕಂದಾಯ ಇಲಾಖೆಗಳಿಂದ ಜಂಟಿ ಸಮೀಕ್ಷೆ ನಡೆಸಿ ನಿಖರ ವರದಿ ನೀಡುವಂತೆಯೂ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆಂದು ತಿಳಿದುಬಂದಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ