ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM BS Bommai) ಅವರು ಇಂದು ಯಲಹಂಕದ ಜಲಾವೃತ ಕೇಂದ್ರೀಯ ವಿಹಾರ ವಸತಿ ಸಮುಚ್ಚಯ (Kendriya Vihar apartment)ಕ್ಕೆ ಭೇಟಿ ನೀಡಿ ಮಳೆ(Flood Affected)ಯಿಂದ ಆಗಿರುವ ತೊಂದರೆ ಕುರಿತು ಪರಿಶೀಲನೆ ನಡೆಸಿದರು.
ಯಲಹಂಕದಲ್ಲಿರುವ ಕೇಂದ್ರೀಯ ವಿಹಾರ ವಸತಿ ಸಮುಚ್ಚಯಕ್ಕೆ ಭೇಟಿ ನೀಡಿದ ಸಿಎಂ ಬೊಮ್ಮಾಯಿ ಪರಿಶೀಲನೆ ನಡೆಸಿದರೆ. ಯಲಹಂಕ ಶಾಸಕ ಎಸ್ಆರ್ ವಿಶ್ವನಾಥ್ (SR Vishwanath ) ಜೀಪ್ ನಲ್ಲಿ ತೆರಳಿ ಪರಿಸ್ಥಿತಿಯನ್ನು ವೀಕ್ಷಣೆ ಮಾಡಿದರು.
ಈ ವೇಳೆ ಮಾತನಾಡಿದ ಅವರು, 'ಕಳೆದ ಮೂರು ದಿನಗಳಿಂದ ಅತಿ ಹೆಚ್ಚು ಮಳೆಯಾಗಿದೆ. ಯಲಹಂಕ ಕೆರೆ ಕೋಡಿ ಹೊಡೆದು ಆ ನೀರು ಅಪಾರ್ಟ್ಮೆಂಟ್ಗೆ ನುಗ್ಗಿದೆ. ಯಲಹಂಕ ಶಾಸಕರು ಸ್ಥಳಕ್ಕೆ ಆಗಮಿಸಿ ಜನರಿಗೆ ಸಂಪೂರ್ಣ ಸಹಾಯ ಮಾಡಿದ್ದಾರೆ. ಇದಕ್ಕೆ ಪರಿಹಾರ ಕೊಡುವ ಬಗ್ಗೆ ಚರ್ಚೆ ಮಾಡಿದ್ದೀನಿ. ಇಲ್ಲಿ ಹನ್ನೊಂದು ಕೆರೆಗಳು ಯಲಹಂಕಕ್ಕೆ ಸೇರುತ್ತದೆ ಎಂದು ಹೇಳಿದರು.
ರಾಜಕಾಲುವೆ ಅಗಲೀಕರಣ ಮಾಡುವಂತೆ ಅಧಿಕಾರಿಗಳಿಗೆ ಸಿಎಂ ಸೂಚನೆ
ಇನ್ನು ಯಲಹಂಕ ಕೆರೆ ದೊಡ್ಡದಿದ್ದು, ಅದರ ಹೊರ ಹರಿವೂ ಕೂಡ ಸಾಮಾನ್ಯವಾಗಿ ದೊಡ್ಡ ಪ್ರಮಾಣದಲ್ಲಿರುತ್ತದೆ. ಹೊರ ಹರಿವು ಕೂಡ ದೊಡ್ಡ ಪ್ರಮಾಣದಲ್ಲಿದ್ದು, ಹೀಗಾಗಿ ರಾಜಕಾಲುವ ಸಾಮರ್ಥ್ಯ ಸಾಲುತ್ತಿಲ್ಲ. ಅಲ್ಲದೆ ರಾಜಕಾಲುವೆ ಅತಿಕ್ರಮಣ ಆಗಿರುವುದೂ ಕೂಡ ಜನನಿವಾಸ ಪ್ರದೇಶಗಳು ಜಲಾವೃತವಾಗಲು ಕಾರಣವಾಗುತ್ತಿದೆ. ಆದ್ದರಿಂದ ಮಳೆ ನಿಂತ ತಕ್ಷಣವೇ ರಾಜಕಾಲುವೆ ಅಗಲೀಕರಣ ಮಾಡಲು ಸೂಚಿಸಿದ್ದೇನೆ. ಈ ಸಂಬಂಧ ಬಿಬಿಎಂಪಿ ಮತ್ತು ಎಂಜಿನಿಯರ್ ಗಳಿಗೆ ಸೂಚಿಸಲಾಗಿದ್ದು, ರಾಜಕಾಲುವೆ ಅಗಲೀಕರಣಕ್ಕೆ ಎಲ್ಲೆಲ್ಲಿ ಅಡಚಣೆ ಇದೆ ಆ ಜಾಗದ ಮಾಲೀಕರೊಂದಿಗೆ ಮಾತನಾಡಿ, ಟಿಡಿಆರ್ ನೀಡುವ ವ್ಯವಸ್ಥೆ ಮಾಡಬೇಕು. ಈಗ 8 ಅಡಿ ಇರುವ ರಾಜಕಾಲುವೆಯನ್ನು ಇನ್ನೂ ಹೆಚ್ಚಿಸಿ 30 ಅಡಿಗೇರಿಸಬೇಕು. ಎರಡೂ ರಾಜಕಾಲುವೆ ಯಾವುದೇ ರೀತಿಯ ಅಡಚಣೆ ಇಲ್ಲದೇ ನೀರು ಹರಿವಿನ ವ್ಯವಸ್ಥೆ ಮಾಡಬೇಕು ಎಂದು ಹೇಳಿದರು.
ಅಂತೆಯೇ ಪ್ರಸ್ತುತ ಜಲಾವೃತ್ತವಾಗಿರುವ ಅಪಾರ್ಟ್ ಮೆಂಟ್ ನಲ್ಲಿ 603 ಅಪಾರ್ಟ್ ಮೆಂಟ್ ಗಳಿದ್ದು, ಇಲ್ಲಿ ನೀರಿನ ಹರಿವಿನ ಸಮಸ್ಯೆ ಕುರಿತು ನಿವಾಸಿಗಳೊಂದಿಗೆ ಮಾತನಾಡಿದ್ದೇನೆ. ಅವರೂ ಕೂಡ ಬೇಕಾದ ನೆರವು ನೀಡುವ ಕುರಿತು ಭರವಸೆ ನೀಡಿದ್ದಾರೆ. ಇಲ್ಲಿಂದ ನೀರು ಹೊರಹಾಕಲು ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡಿದ್ದಾರೆ. ಮುಖ್ಯವಾಗಿ ರಾಷ್ಟ್ರೀಯ ಹೆದ್ದಾರಿ ದಾಟಿ ನೀರು ಮುಂದೆ ಹೋಗಬೇಕು. ಹೀಗಾಗಿ ಹೆದ್ದಾರಿ ಪ್ರಾಧಿಕಾರದೊಂದಿಗೆ ಮಾತುಕತೆ ನಡೆಸಿದ್ದೇವೆ. ಶೀಘ್ರದಲ್ಲೇ ಹೆದ್ದಾರಿ ಮಾರ್ಗವಾಗಿ ಒಳಚರಂಡಿ ಪೈಪ್ ಲೈನ್ ಅಳಡಿಸಿ ನೀರು ಶೇಖರಣವಾಗದಂತೆ ಕ್ರಮ ಕೈಗೊಳ್ಳುತ್ತೇವೆ. ಆಗ ಮಾತ್ರ ಈ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಯುತ್ತದೆ ಎಂದು ಹೇಳಿದರು.
ಜವಾಹರಲಾಲ್ ನೆಹರು ಸೆಂಟರ್ ಫಾರ್ ಅಡ್ವಾನ್ಸ್ಡ್ ಸೈಂಟಿಫಿಕ್ ರಿಸರ್ಚ್ ಸಂಸ್ಥೆಗೆ ಸಿಎಂ ಭೇಟಿ
ಬಳಿಕ ಕಳೆದ ಕೆಲವು ದಿನಗಳ ಭಾರಿ ಮಳೆಗೆ ಜಲಾವೃತವಾಗಿದ್ದ ಬೆಂಗಳೂರಿನ ಜವಾಹರಲಾಲ್ ನೆಹರು ಸೆಂಟರ್ ಫಾರ್ ಅಡ್ವಾನ್ಸ್ಡ್ ಸೈಂಟಿಫಿಕ್ ರಿಸರ್ಚ್ ಸಂಸ್ಥೆಗೆ ಮುಖ್ಯಮಂತ್ರಿ ಬೊಮ್ಮಾಯಿ ಅವರು ಇಂದು ಭೇಟಿ ನೀಡಿ ಪರಿಶೀಲಿಸಿದರು.
ಜವಾಹರ ಲಾಲ್ ನೆಹರು ಸೆಂಟರ್ ಫಾರ್ ಅಡ್ವಾನ್ಸ್ ಸೈಂಟಿಫಿಕ್ ರಿಸರ್ಚ್ ಸಂಸ್ಥೆಯಲ್ಲಿ ಲ್ಯಾಬ್ಗಳಿಗೆ ನೀರು ನುಗ್ಗಿ ಸ್ಯಾಂಪಲ್ಗಳು ದೊಡ್ಡ ಪ್ರಮಾಣದಲ್ಲಿ ನಷ್ಟವಾಗಿವೆ. ನಮ್ಮ ಬದುಕು, ಸಮಾಜ ವೈಜ್ಞಾನಿಕ ಸಂಶೋಧನೆಯಿಂದಲೇ ಬೆಳೆದಿರುವುದು. ಇದು ಭವಿಷ್ಯವನ್ನು ನಿರ್ಮಾಣ ಮಾಡುವ ಪ್ರಮುಖ ಕೇಂದ್ರ. ಈ ಸಂಸ್ಥೆಯನ್ನು ಯಾವುದೇ ಸಂದರ್ಭದಲ್ಲಿ ರಕ್ಷಣೆ ಮಾಡುವುದು ನಮ್ಮ ಕರ್ತವ್ಯ. ವಿಶೇಷ ಕಾಳಜಿ ತೆಗೆದುಕೊಂಡು ಇಲ್ಲಿನ ಸಂಶೋಧನಾ ಲ್ಯಾಬ್, ಗ್ರಂಥಾಲಯಗಳಿಗೆ ತೊಂದರೆಯಾಗದಂತೆ ಕ್ರಮ ತೆಗೆದುಕೊಳ್ಳಲಾಗುವುದು. ಇದಕ್ಕಾಗಿ ಸಂಸ್ಥೆಯ ಸಹಕಾರವನ್ನೂ ಕೋರಲಾಗಿದೆ ಹಾಗೂ ಈ ಬೃಹತ್ ಯೋಜನೆಯಲ್ಲಿ ಸಂಸ್ಥೆಯ ಮುಖ್ಯಸ್ಥರ ನೆರವನ್ನೂ ಪಡೆಯಲಾಗುವುದು ಎಂದು ತಿಳಿಸಿದರು. ಸಂಸ್ಥೆಯ ಮುಖ್ಯಸ್ಥ ಭಾರತರತ್ನ ಸಿ.ಎನ್.ಆರ್.ರಾವ್ ಅವರನ್ನು ಸಹ ಭೇಟಿಯಾಗಿ ಮಾತುಕತೆ ನಡೆಸಿದರು.
ಮಾನ್ಯತಾ ಟೆಕ್ ಪಾರ್ಕ್:
ಮಾನ್ಯತಾ ಟೆಕ್ ಪಾರ್ಕ್ ಒಂದು ಪ್ರತಿಷ್ಠಿತ ಸಂಕೀರ್ಣ. ಇಲ್ಲಿರುವ ಆಂತರಿಕ ಚರಂಡಿ ವ್ಯವಸ್ಥೆಯಿಂದ ನೀರು ವಾಪಸ್ ಬರುತ್ತಿದೆ. ಬಾಹ್ಯ ಹಾಗೂ ಆಂತರಿಕ ಚರಂಡಿ ವ್ಯವಸ್ಥೆಯನ್ನು ಪರಸ್ಪರ ಸಹಕಾರದಿಂದ ಸರಿಪಡಿಸಲಾಗುವುದು. ಇಲ್ಲಿ ಕೆಲಸ ಮಾಡುವ ನೌಕರರಿಗೆ ಯಾವುದೇ ತೊಂದರೆಯಾಗದಂತೆ ಶೀಘ್ರವಾಗಿ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಯೋಜನಾಬದ್ಧ ಚರಂಡಿ ವ್ಯವಸ್ಥೆಯನ್ನು ಮಾಡಲು ಕಾಲಾವಕಾಶ ಬೇಕು. ತಗ್ಗು ಪ್ರದೇಶ, ಕೆರೆಯಂಗಳದ ಪ್ರದೇಶಗಳಲ್ಲಿ ನೀರು ಹರಿದು ತುಂಬಿಕೊಳ್ಳುತ್ತಿದೆ. ಯಲಹಂಕ, ಮಹಾದೇವಪುರ, ಪಿನಾಕಿನಿಯವರೆಗೆ ಸರಾಗವಾಗಿ ನೀರು ಹರಿಯಲು ಅವಕಾಶ ಮಾಡಿಕೊಡುವ ಮೂಲಕ ತಗ್ಗು ಪ್ರದೇಶಗಳನ್ನು ಇದರಿಂದ ರಕ್ಷಿಸಬಹುದಾಗಿದೆ. ಇದಕ್ಕಾಗಿ ಒಂದು ಬೃಹತ್ ಯೋಜನೆಯನ್ನು ರೂಪಿಸಲಾಗುವುದು ಎಂದು ತಿಳಿಸಿದರು.
ಸಿಎಂ ಬೊಮ್ಮಾಯಿಗೆ ಕರೆ ಮಾಡಿ ಮಳೆಹಾನಿ ಕುರಿತು ವಿವರ ಪಡೆದ ಪ್ರಧಾನಿ ಮೋದಿ
ಬೆಂಗಳೂರಿನ ಸಿಂಗಾಪುರ ಜಲಾವೃತ: ನಿವಾಸಿಗಳು ಅಸಹಾಯಕ; ಆತಂಕ, ಆಕ್ರೋಶ!
ಭಾರಿ ಮಳೆ: ರಸ್ತೆ ದುರಸ್ತಿಗೆ 500 ಕೋಟಿ ರೂ., ಸಂಪೂರ್ಣ ಮನೆ ಹಾನಿಗೆ 1 ಲಕ್ಷ ರೂ. ಪರಿಹಾರ- ಸಿಎಂ ಬೊಮ್ಮಾಯಿ
ಭಾರಿ ಮಳೆ: ಬೆಂಗಳೂರಿನ ಹಲವು ಪ್ರದೇಶಗಳು ಜಲಾವೃತ, ಬಿಬಿಎಂಪಿ ಆಯುಕ್ತರಿಂದ ಪರಿಶೀಲನೆ
ಭಾರೀ ಮಳೆ: ಸತತ 11ನೇ ಬಾರಿ ಹಂಪಿ ಸ್ಮಾರಕ ನೀರಿನಲ್ಲಿ ಮುಳುಗಡೆ, ಪ್ರವಾಸಿಗರಿಗೆ ನಿರಾಶೆ
Advertisement