ಬಿಎಸ್ ವೈ ಆಪ್ತನ ಮನೆ ಮೇಲೆ ಐಟಿ ದಾಳಿ: ಪ್ರತಿಕ್ರಿಯೆ ನೀಡಿದ ಸಿಎಂ ಬೊಮ್ಮಾಯಿ, ಐಟಿ ದಾಳಿಯ ಸಂಪೂರ್ಣ ಮಾಹಿತಿ

ಮಹತ್ವದ ಬೆಳವಣಿಗೆಯಲ್ಲಿ ಬೆಂಗಳೂರು ನಗರದಲ್ಲಿ 50ಕ್ಕೂ ಹೆಚ್ಚು ಕಡೆ ಆದಾಯ ತೆರಿಗೆ ಅಧಿಕಾರಿಗಳ ದಾಳಿ ನಡೆಸಿದ್ದು, ಕರ್ನಾಟಕ ಗೋವಾ ಘಟಕದ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎನ್ನಲಾಗಿದೆ.
ಆದಾಯ ತೆರಿಗೆ ಇಲಾಖೆ ( ಸಂಗ್ರಹ ಚಿತ್ರ)
ಆದಾಯ ತೆರಿಗೆ ಇಲಾಖೆ ( ಸಂಗ್ರಹ ಚಿತ್ರ)

ಬೆಂಗಳೂರು: ಮಹತ್ವದ ಬೆಳವಣಿಗೆಯಲ್ಲಿ ಬೆಂಗಳೂರು ನಗರದಲ್ಲಿ 50ಕ್ಕೂ ಹೆಚ್ಚು ಕಡೆ ಆದಾಯ ತೆರಿಗೆ ಅಧಿಕಾರಿಗಳ ದಾಳಿ ನಡೆಸಿದ್ದು, ಕರ್ನಾಟಕ ಗೋವಾ ಘಟಕದ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎನ್ನಲಾಗಿದೆ.

ಸುಮಾರು 300 ಅಧಿಕಾರಿಗಳ ತಂಡ ಏಕಕಾಲದಲ್ಲಿ 50ಕ್ಕೂ ಹೆಚ್ಚು ಕಡೆಗಳಲ್ಲಿ ದಾಳಿ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಉದ್ಯಮಿಗಳು ಮತ್ತು ಗುತ್ತಿಗೆದಾರರ ಮನೆಗಳು ಮತ್ತು ಕಚೇರಿಗಳ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ತಂಡೋಪಾದಿಯಲ್ಲಿ ದಾಳಿಗಳನ್ನು ನಡೆಸಿದ್ದಾರೆ. 

ದಾಳಿಗಾಗಿ 120 ಕಾರುಗಳು, 300 ಅಧಿಕಾರಿಗಳು
10ಕ್ಕೂ ಹೆಚ್ಚು ಅಧಿಕಾರಿಗಳ ತಂಡ 50ಕ್ಕೂ ಹೆಚ್ಚು ಕಡೆ ದಾಳಿ ಮಾಡಿದೆ. ಬೆಳಗ್ಗೆ 5 ಗಂಟೆಯಿಂದ ಶೋಧ ಕಾರ್ಯಕಾರ್ಯ ಶುರುವಾಗಿದೆ. ಮೊದಲೇ ನಿರ್ಧರಿಸಿದ್ದಂತೆ 120 ಇನೋವಾ ಕಾರುಗಳನ್ನ ಐಟಿ ಅಧಿಕಾರಿಗಳನ್ನು ಬುಕ್ ಮಾಡಿಕೊಂಡಿದ್ದರು, ಅದರಂತೆ ಇಂದು ಬೆಳಗ್ಗೆ ಏಕಕಾಲದಲ್ಲಿ 50 ಕಡೆ 300ಕ್ಕೂ ಹೆಚ್ಚು ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. 

ಎಲ್ಲೆಲ್ಲಿ ದಾಳಿ?
ಕೊಡಿಗೇಹಳ್ಳಿ ಸಹಕಾರ ನಗರದಲ್ಲಿರುವ ರಾಹುಲ್ ಎಂಟರ್‌ ಪ್ರೈಸಸ್ ಮೇಲೆ ಐಟಿ ದಾಳಿ ನಡೆದಿದೆ. ರಾಹುಲ್ ಎಂಟರ್‌ಪ್ರೈಸಸ್ ಸಿಮೆಂಟ್, ಸ್ಟೀಲ್ ಡೀಲರ್ ಕಚೇರಿಯಲ್ಲಿ ಐಟಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಮೂರು ಇನ್ನೋವಾ ಕ್ರಿಸ್ಟಾ ಕಾರಿನಲ್ಲಿ ಆಗಮಿಸಿರುವ ಅಧಿಕಾರಿಗಳು ಪರಿಶೀಲನೆ ಮುಂದುವರಿಸಿದ್ದಾರೆ. ಅಂತೆಯೇ ಬೆಂಗಳೂರಿನ ಹೆಗಡೆ ನಗರದಲ್ಲಿರುವ ಎನ್.ಆರ್. ರಾಯಲ್ ಅಪಾರ್ಟ್‌ಮೆಂಟ್‌ ನಲ್ಲಿರುವ ಚಾರ್ಟೆಡ್ ಅಕೌಂಟೆಂಟ್ ಅಮಲಾ ಮನೆ ಮೇಲೆ IT ರೇಡ್ ನಡೆದಿದೆ. 10ಕ್ಕೂ ಹೆಚ್ಚು ಅಧಿಕಾರಿಗಳ ತಂಡದಿಂದ ದಾಳಿ, ಪರಿಶೀಲನೆ ನಡೆದಿದೆ.

ಬಿಎಸ್ ವೈ ಆಪ್ತನ ಮನೆ ಮೇಲೆ ದಾಳಿ
ಅಂತೆಯೇ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಆಪ್ತ ಉಮೇಶ್ ಮನೆ ಮೇಲೂ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಇಂದು ದಾಳಿ ನಡೆಸಿದ್ದಾರೆ. ಬೆಂಗಳೂರಿನ ಭಾಷ್ಯಂ ಸರ್ಕಲ್‌ನಲ್ಲಿರುವ ಬಿಎಸ್‌ ಯಡಿಯೂರಪ್ಪ ಆಪ್ತ ಸಹಾಯಕ ಉಮೇಶ್ ಮನೆ ಮತ್ತು ಕಚೇರಿ ಸೇರಿ 4 ಕಡೆಗಳಲ್ಲಿ ಐಟಿ ದಾಳಿ ನಡೆದಿದೆ. ಉಮೇಶ್ ಅವರು ಮಾಜಿ ಸಿಎಂ ಯಡಿಯೂರಪ್ಪ, ಸಂಸದ ರಾಘವೇಂದ್ರ, ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿಜಯೇಂದ್ರ ಮೂವರಿಗೂ ಪಿಎ ರೀತಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.

ಬೆಂಗಳೂರಿನ ಹೆಗಡೆ ನಗರದ ಎನ್.ಆರ್.ರಾಯಲ್ ಅಪಾರ್ಟ್ ಮೆಂಟ್ ಮೇಲೆ ದಾಳಿ ಮಾಡಿದ್ದಾರೆ. ಚಾರ್ಟೆಡ್ ಅಕೌಂಟೆಂಟ್ ಅಮಲಾ ಅವರ ನಿವಾಸ ಅಲ್ಲಿದೆ ಎನ್ನಲಾಗಿದೆ. ಐಟಿ ದಾಳಿ ಹಿನ್ನೆಲೆಯಲ್ಲಿ ಅಪಾರ್ಟ್ ಮೆಂಟ್ ಬಳಿ ಪೊಲೀಸ್ ಭದ್ರತೆ ನಿಯೋಜನೆ ಮಾಡಲಾಗಿದೆ. ಜೊತೆಗೆ ನಗರದ ಸಹಕಾರನಗರದ ರಾಹುಲ್ ಎಂಟರ್ ಪ್ರೈಸಸ್ ಮೇಲೂ ಐಟಿ ದಾಳಿ ನಡೆಸಿದ್ದಾರೆ. ಸಿಮೆಂಟ್ ಮತ್ತು ಸ್ಟೀಲ್ ಡೀಲರ್ ಕಚೇರಿ ಇದಾಗಿದೆ. ಇಲ್ಲಿಗೆ ಐಟಿ ಅಧಿಕಾರಿಗಳು ಮೂರು ಇನೋವಾ ಕಾರಿನಲ್ಲಿ ಆಗಮಿಸಿದ್ದಾರೆ ಎಂದು ತಿಳಿದುಬಂದಿದೆ. ಇಲ್ಲಿಯೂ ಕೂಡ ಭದ್ರತೆಗಾಗಿ ಪೊಲೀಸ್ ಸಿಬ್ಬಂದಿಯನ್ನ ನಿಯೋಜನೆ ಮಾಡಲಾಗಿದೆ.

ಜಲ ಸಂಪನ್ಮೂಲ ಇಲಾಖೆಯ ಬೃಹತ್‌ ನೀರಾವರಿ ಯೋಜನೆಗಳ ಕಾಮಗಾರಿ ನಿರ್ವಹಿಸುತ್ತಿರುವ ಹಲವು ಗುತ್ತಿಗೆದಾರರ ಮೇಲೂ ಐ.ಟಿ ದಾಳಿ ನಡೆದಿದೆ. ಕೃಷ್ಣಾ ಭಾಗ್ಯ ಜಲ ನಿಗಮದ ಕಾಮಗಾರಿಗಳ ಗುತ್ತಿಗೆಯಲ್ಲಿ ಅವ್ಯವಹಾರ ನಡೆಸಿರುವ ಆರೋಪದ ಮೇಲೆ ಈ ದಾಳಿ ನಡೆದಿದೆ ಎಂಬ ಮಾಹಿತಿ ಲಭಿಸಿದೆ. 

ಯಾರು ಈ ಉಮೇಶ್?
ಶಿವಮೊಗ್ಗ ಜಿಲ್ಲೆ ಆಯನೂರು ನಿವಾಸಿಯಾಗಿರುವ ಉಮೇಶ್‌, ಆರಂಭದಲ್ಲಿ ಕೆಲಕಾಲ ವಿಧಾನ ಪರಿಷತ್‌ ಸದಸ್ಯ ಆಯನೂರು ಮಂಜುನಾಥ ಅವರ ಆಪ್ತ ಸಹಾಯಕನಾಗಿದ್ದರು. 2012ರಿಂದಲೂ ಯಡಿಯೂರಪ್ಪ ಅವರ ಆಪ್ತ ಸಹಾಯಕನಾಗಿದ್ದರು. ಯಡಿಯೂರಪ್ಪ ಮತ್ತು ಅವರ ಮಗ ಬಿ.ವೈ. ವಿಜಯೇಂದ್ರ ಅವರ ಅತ್ಯಾಪ್ತರಲ್ಲಿ ಉಮೇಶ್‌ ಒಬ್ಬರು. ಬಿಎಸ್ ವೈ ಮುಖ್ಯಮಂತ್ರಿ ಆಗಿದ್ದಾಗ ಪಿಎ ಆಗಿದ್ದ ಉಮೇಶ್ ಅದಕ್ಕೂ ಮೊದಲು ಬಿಎಂಟಿಸಿ ಬಸ್ ಕಂಡಕ್ಟರ್ ಕಂ ಡ್ರೈವರ್ ಆಗಿದ್ದ. ಯಲಹಂಕದ ಪುಟ್ಟೇನಹಳ್ಳಿ ಬಿಎಂಟಿಸಿ ಡಿಪೋದಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. 

ಅಪಾರ ದಾಖಲೆ ವಶಕ್ಕೆ
ಉಮೇಶ್‌ ಮನೆಯಲ್ಲಿ ಅಪಾರ ಪ್ರಮಾಣದ ದಾಖಲೆಗಳನ್ನು ಐ.ಟಿ  ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಚೀಲಗಳಲ್ಲಿ ಮೂಟೆ ಕಟ್ಟಿ ದಾಖಲೆಗಳನ್ನು ಕೊಂಡೊಯ್ಯಲಾಗಿದೆ. ಗುತ್ತಿಗೆದಾರರಿಗೆ ಸೇರಿದ ಸ್ಥಳಗಳಿಂದಲೂ ಬೃಹತ್‌ ಪ್ರಮಾಣದ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ. 30ಕ್ಕೂ ಹೆಚ್ಚು ಸ್ಥಳಗಳಲ್ಲಿ ಶೋಧ ಮುಂದುವರಿದಿದೆ. ರಾಜಾಜಿನಗರದ ರಾಮಮಂದಿರ ಪ್ರದೇಶದಲ್ಲಿರುವ ಉಮೇಶ್ ಮನೆ,  ನಾಗಸಂದ್ರದಲ್ಲಿ ಉಮೇಶ್ ಹೊಂದಿರುವ ಧವಳಗಿರಿ ಹೆಸರಿನ ಮನೆ, ಮಾನ್ಯತಾ ಟೆಕ್ ಪಾರ್ಕ್‌ನಲ್ಲಿರುವ ಲೆಕ್ಕ ಪರಿಶೋಧಕಿಯೊಬ್ಬರ ಮನೆ, ಗುತ್ತಿಗೆದಾರರಾದ ಡಿ.ವೈ. ಉಪ್ಪಾರ್, ಎ.ವೈ. ಕಟ್ಟೀಮನಿ ಅವರಿಗೆ ಸೇರಿದ ಸ್ಥಳಗಳಲ್ಲಿ ಶೋಧ ನಡೆಯುತ್ತಿದೆ. ಬೀದರ್ ನ ಗುತ್ತಿಗೆದಾರ ಸುರೇಶ್ ಕಣಜಿ, ಬೆಂಗಳೂರಿನ ಸಹಕಾರ ನಗರದಲ್ಲಿರುವ ಸಿಮೆಂಟ್ ಮತ್ತು ಕಬ್ಬಿಣ ಪೂರೈಕೆ ಮಾಡುವ ರಾಹುಲ್ ಎಂಟರ್ ಪ್ರೈಸಸ್ ಮೇಲೂ ಐ.ಟಿ ದಾಳಿ ನಡೆದಿದೆ.

ಸಿಎಂ ಬೊಮ್ಮಾಯಿ ಹೇಳಿದ್ದೇನು?
ಇನ್ನು ಐಟಿ ದಾಳಿ ವಿಚಾರವಾಗಿ ಸಿಎಂ ಬಸವರಾಜ ಬೊಮ್ಮಾಯಿ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದು, ರಾಜ್ಯದ ಹಲವೆಡೆ ಐಟಿ ದಾಳಿಯಾದ ಕುರಿತು ಮಾಹಿತಿ ಬಂದಿದೆ. ಆದರೆ ಈ ಬಗ್ಗೆ ಸಂಪೂರ್ಣ ಮಾಹಿತಿ ಲಭಿಸಿಲ್ಲ. ಈ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಕೇಳಿದ್ದೇನೆ. ಈ ದಾಳಿಗೂ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲದೇ ನಾನು ಪ್ರತಿಕ್ರಿಯೆ ನೀಡಲು ಸಾಧ್ಯವಿಲ್ಲ ಎಂದು ಮೈಸೂರಿನಲ್ಲಿ ಬೊಮ್ಮಾಯಿ ಹೇಳಿದರು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com